ADVERTISEMENT

ಇಂದ್ರಾಳಿ ರಸ್ತೆಯಲ್ಲಿ ಹೊಂಡ ಗುಂಡಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 13:17 IST
Last Updated 29 ಜೂನ್ 2022, 13:17 IST
ಕೆಳಪರ್ಕಳದ ಇಳಿಜಾರು ಪ್ರದೇಶದಲ್ಲಿ ರಸ್ತೆ ಕುಸಿಯುತ್ತಿರುವುದು
ಕೆಳಪರ್ಕಳದ ಇಳಿಜಾರು ಪ್ರದೇಶದಲ್ಲಿ ರಸ್ತೆ ಕುಸಿಯುತ್ತಿರುವುದು   

‌ಉಡುಪಿ–ಮಣಿಪಾಲ ಮುಖ್ಯ ರಸ್ತೆಯಲ್ಲಿ ಸಾಗುವಾಗ ಇಂದ್ರಾಳಿ ಸಮೀಪದ ಪೆಟ್ರೋಲ್‌ ಬಂಕ್ ಬಳಿಯ ರಸ್ತೆ ಗುಂಡಿಬಿದ್ದು ಹಾಳಾಗಿದೆ. ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ರಾತ್ರಿ ಸಂದರ್ಭ ಈ ಭಾಗದಲ್ಲಿ ದಾರಿ ದೀಪದ ವ್ಯವಸ್ಥೆಯೂ ಇಲ್ಲವಾಗಿದ್ದು, ಸಿನಿಮಾ ವೀಕ್ಷಿಸಿ ತಡರಾತ್ರಿ ಬೈಕ್‌ಗಳಲ್ಲಿ ಹೋಗುವವರು ರಸ್ತೆಯಲ್ಲಿರುವ ದೊಡ್ಡ ಗುಂಡಿಗಳನ್ನು ಗಮನಿಸದೆ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ. ಅಪಘಾತಗಳು ಸಂಭವಿಸುತ್ತಿವೆ. ಅಪಘಾತಗೊಂಡ ಹಲವರನ್ನು ಜಿಲ್ಲಾ ನಾಗರಿಕ ಸಮಿತಿಯಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತುರ್ತು ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಬೇಕು. ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.

–ನಿತ್ಯಾನಂದ ವಳಕಾಡು, ಸಾಮಾಜಿಕ ಕಾರ್ಯಕರ್ತ

ಹೂಳು ತೆಗೆಸದ ನಗರಸಭೆ

ADVERTISEMENT

ಮಳೆಗಾಲ ಆರಂಭವಾಗುವ ಮುನ್ನ ನಗರದಲ್ಲಿರುವ ಚರಂಡಿಗಳ ಹೂಳು ತೆಗೆಸಬೇಕಾದ ನಗರಸಭೆ ಮಳೆಗಾಲ ಆರಂಭವಾದ ಬಳಿಕ ಚರಂಡಿ ಹೂಳು ತೆಗೆಸುತ್ತಿದೆ. ನಗರದ ರಾಮಕೃಷ್ಣ ಹೋಟೆಲ್ ಬಳಿ ಚರಂಡಿ ಹೂಳು ತೆಗೆದು ವಿಲೇವಾರಿ ಮಾಡದೆ ಹಾಗೆ ಬಿಡಲಾಗಿದೆ. ಹೂಳು ತೆಗೆಯಲು ಒಬ್ಬರಿಗೆ ಟೆಂಡರ್‌, ತೆಗೆದ ಹೂಳನ್ನು ವಿಲೇವಾರಿ ಮಾಡಲು ಮತ್ತೊಬ್ಬರಿಗೆ ಟೆಂಡರ್ ನೀಡಿರುವುದು ಸಮಸ್ಯೆಗೆ ಕಾರಣವಾಗಿದೆ. ಎಸ್‌ಪಿ ಕಚೇರಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ವಸತಿ ನಿಯಲಗಳ ಬಳಿಯ ಚರಂಡಿ ಹೂಳು ತೆಗೆಯದೆ ಮಳೆಯ ನೀರು ರಸ್ತೆಯ ಮೇಲೆ ನಿಂತು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು.

–ರಾಜಶೇಖರ್, ಸ್ಥಳೀಯರು

‘ಕುಸಿಯುತ್ತಿರುವ ಕೆಳ ಪರ್ಕಳ ರಸ್ತೆ’

ಪರ್ಕಳದ ಕೆಳಪರ್ಕಳದ ಇಳಿಜಾರು ಪ್ರದೇಶದಲ್ಲಿ ವಾರಾಹಿ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಅವೈಜ್ಞಾನಿಕವಾಗಿ ಪೈಪ್‌ ಅಳವಡಿಕೆ ಮಾಡಿ ಮಣ್ಣು ಮುಚ್ಚಲಾಗಿದೆ. ಪೈಪ್‌ಲೈನ್ ಹಾಕಿರುವ ಜಾಗದಲ್ಲಿ ಡಾಂಬಾರು ಹಾಕಲಾಗಿದ್ದು, ಭಾರಿ ವಾಹನಗಳ ಸಂಚಾರದಿಂದ ರಸ್ತೆ ಕುಸಿಯುತ್ತಿದೆ. ಪರಿಣಾಮ ಸವಾರರಿಗೆ ಸಮಸ್ಯೆಯಾಗಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಕಡಿಯಾಳಿಯ ಓಷನ್ ಪರ್ಲ್ ಹೋಟೆಲ್‌ ಎದುರು ರಸ್ತೆಗೆ ಹಾಕಲಾಗಿದ್ದ ಕಬ್ಬಿಣದ ಶಾಶ್ವತ ಬ್ಯಾರಿಕೇಡ್‌ಗಳನ್ನು ಕಡಿಯಾಳಿ ಮಹಿಷ ಮರ್ಧಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ನಿಮಿತ್ತ ಜನಜಂಗುಳಿ ತಡೆಗೆ ಕತ್ತರಿಸಲಾಗಿದ್ದು, ಮರಳಿ ಅಳವಡಿಕೆ ಮಾಡಿಲ್ಲ. ಇದರಿಂದ ಸವಾರರಿಗೆ ಸಮಸ್ಯೆಯಾಗಿದೆ.

–ಗಣೇಶ್ ರಾಜ್ ಸರಳೆಬೆಟ್ಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.