ADVERTISEMENT

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಗೆ ಯಂತ್ರ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 6:59 IST
Last Updated 19 ನವೆಂಬರ್ 2021, 6:59 IST
ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಶಂಕರ್‌ ತಯಾರಿಸಿದ ರೋಬೋಟ್‌
ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಶಂಕರ್‌ ತಯಾರಿಸಿದ ರೋಬೋಟ್‌   

ಬ್ರಹ್ಮಾವರ: ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆದ ಫಸಲು ಕೈ ಸೇರುವುದೇ ಸವಾಲಾಗಿದೆ. ಮಂಗಗಳು, ನವಿಲು, ಕಾಡುಕೋಣ, ಜಿಂಕೆ ಮೊದಲಾದ ಪ್ರಾಣಿಗಳ ಹಾವಳಿ ಮಿತಿ ಮೀರಿ ನಿಯಂತ್ರಣವನ್ನುವುದು ಹರ ಸಾಹಸವಾಗಿದೆ. ಈ ಸಮಸ್ಯೆಯನ್ನು ಮನಗಂಡಬ್ರಹ್ಮಾವರ ವಲಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಶಂಕರ್ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಹೊಸ ಯಂತ್ರವನ್ನು ಕೆವಿಕೆಯ ಎಂಜಿನಿಯರಿಂಗ್ ವಿಭಾಗದ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ.

ಕೆವಿಕೆಯ ವಿಜ್ಞಾನಿ ಡಾ.ಶಂಕರ್ ಅವರ ನೇತೃತ್ವದಲ್ಲಿ ಸಿದ್ಧಗೊಳ್ಳುತ್ತಿರುವ ಈ ಯಂತ್ರಕ್ಕೆ ಕಾಡು ಪ್ರಾಣಿ ಬೆದರಿಸುವ ಯಂತ್ರ(ರೋಬೋಟ್‌) ಎಂಬ ಹೆಸರನ್ನು ನೀಡಿದ್ದಾರೆ. 360 ಡಿಗ್ರಿಯಲ್ಲಿ ತಿರುಗುವ ಈ ಯಂತ್ರ ತನ್ನ ಕ್ಯಾಮೆರಾ ಮೂಲಕ ತೋಟದ ಚಟುವಟಿಕೆಗಳನ್ನು ಸೆರೆ ಹಿಡಿಯುತ್ತದೆ. ಕ್ಯಾಮೆರಾದಲ್ಲಿ ಯಾವುದಾದರೂ ಪ್ರಾಣಿಗಳು ಅಥವಾ ಮನುಷ್ಯ, ಪಕ್ಷಿಗಳ ಚಲನೆಯನ್ನು ಕಂಡಾಗ ತಕ್ಷಣ ಈ ರೋಬೋಟ್‌ ಜಾಗೃತವಾಗುತ್ತದೆ. ಯಾವ ಪ್ರಾಣಿಯೆಂದು ತನ್ನಲ್ಲಿ ಅಳವಡಿಸಿದ ತಂತ್ರಾಂಶದ ಮೂಲಕ ಗುರುತಿಸಿ, ಆ ಪ್ರಾಣಿಯ ವೈರಿ ಪ್ರಾಣಿಯ ಧ್ವನಿಯನ್ನು ಯಂತ್ರವು ಹೊಮ್ಮಿಸುತ್ತದೆ. ಒಂದು ವೇಳೆ ಮಂಗಗಳು ತೋಟಕ್ಕೆ ನುಗ್ಗಿದವು ಎಂದರೆ, ತಕ್ಷಣ ಮಂಗದ ವೈರಿ ಪ್ರಾಣಿಗಳಾದ ನಾಯಿ ಅಥವಾ ಹುಲಿಯ ಧ್ವನಿಯಲ್ಲಿ ಕೂಗುತ್ತದೆ. ಕಾಡು ಕೋಣಗಳು ಲಗ್ಗೆ ಇಟ್ಟರೆ ತಕ್ಷಣ ಸಿಂಹದ ಧ್ವನಿಯಲ್ಲಿ ಕೂಗುತ್ತದೆ. ಇದರಲ್ಲಿರುವ ಫ್ಲ್ಯಾಶ್ ಲೈಟ್ ಮುಖಾಂತರ ಬೆದರಿಸಲು ಪ್ರಯತ್ನಿಸುತ್ತದೆ. ಇದರಿಂದ ತೋಟಕ್ಕೆ ಅಥವಾ ಹೊಲಕ್ಕೆ ಬರುವ ಕಾಡು ಪ್ರಾಣಿಗಳು ಕ್ಷಣಾರ್ಧದಲ್ಲಿ ಪಲಾಯನ ಮಾಡುತ್ತವೆ. ಫ್ಲಾಶ್ ಲೈಟ್ ಅಳವಡಿಸಿರುವುದು ರಾತ್ರಿ ವೇಳೆಯಲ್ಲಿ ಪ್ರಾಣಿಗಳನ್ನು ಬೆದರಿಸಲು ಬಹು ಉಪಕಾರಿಯಾಗಿದೆ. ಬೆಳಕಿನ ಏರಿಳಿತಕ್ಕೆ ತೋಟಕ್ಕೆ ನುಗ್ಗಿದ ಪ್ರಾಣಿಗಳು ಅಪಾಯ ಎಂದು ಅಲ್ಲಿಂದ ಓಡಿ ಹೋಗುತ್ತದೆ.

ಕರೆ ಮಾಡುವ ಯಂತ್ರ: ಈ ಯಂತ್ರಮಾನವ ರಾಸ್ಬೇರಿಪೈ ತಂತ್ರಜ್ಞಾನದಡಿ ಕೆಲಸ ಮಾಡಲಿದೆ. ಕ್ಯಾಮೆರಾದಲ್ಲಿರುವ ಸೆನ್ಸಾರ್ ಪ್ರಾಣಿಗಳ ಓಡಾಟವನ್ನು ಗ್ರಹಿಸುವುದಲ್ಲದೇ ತಕ್ಷಣ ತೋಟದ ಮಾಲೀಕನ ಮೊಬೈಲ್‌ಗೆ ಕರೆಯನ್ನು ಮಾಡುತ್ತದೆ. ಈ ಕರೆಯನ್ನು ಮಾಲೀಕ ಸ್ವೀಕರಿಸಿದ್ದಲ್ಲಿ ತೋಟದ ಚಟುವಟಿಕೆಯ ನೇರಪ್ರಸಾರದಲ್ಲಿ ಮೊಬೈಲ್ ಮೂಲಕ ನೋಡಬಹುದು. ರೈತರು ತಕ್ಷಣ ತೋಟಕ್ಕೆ ಬಂದು ಪ್ರಾಣಿಗಳನ್ನು ಬೆದರಿಸಬಹುದು.

ADVERTISEMENT

2019ರ ಯೋಜನೆಯಲ್ಲಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಎಂಜಿನಿಯರಿಂಗ್ ವಿಭಾಗ ಇದರ ಸಂಶೋಧನೆ ಆರಂಭಗೊಳಿಸಿತ್ತು. ಈ ಯಂತ್ರದ ಉದ್ದೇಶ ಕಾಡು ಪ್ರಾಣಿಗಳಿಗೆ ಯಾವುದೇ ರೀತಿಯಲ್ಲಿ ಹಾನಿ ಮಾಡದೇ ಅವುಗಳನ್ನು ಕೃಷಿ ಭೂಮಿಯಿಂದ ಓಡಿಸಬೇಕು ಎನ್ನುವುದಾಗಿದೆ. ಪ್ರಸ್ತುತ ಕಡಿಮೆ ಸಾಮರ್ಥ್ಯದ ಕ್ಯಾಮೆರಾವನ್ನು ಈ ಯಂತ್ರಕ್ಕೆ ಅಳವಡಿಸಲಾಗಿದೆ. ಸುಮಾರು 4 ಸಾವಿರ ಚದರ ಅಡಿಗಳಷ್ಟು ದೂರದ ಚಟುವಟಿಕೆಗಳನ್ನು ಗ್ರಹಿಸುವ ಶಕ್ತಿ ಇದು ಹೊಂದಿದೆ. ಇದಕ್ಕೆ ಇನ್ನೂ ಉತ್ತಮ ಗುಣಮಟ್ಟದ ಕ್ಯಾಮೆರಾ ಅಳವಡಿಸಿ ಇದರ ಗ್ರಹಣ ಶಕ್ತಿಯನ್ನು ಮೇಲ್ದರ್ಜೆಗೆ ಏರಿಸಬಹುದು. ಇನ್ನೊಂದು ಮಹತ್ವದ ಅಂಶವೆಂದರೆ ಈ ಯಂತ್ರಮಾನವನು ಸೌರಶಕ್ತಿಯ ಮೂಲಕ ಕೆಲಸ ಮಾಡುವುದರಿಂದ ಹೊರಗಿನ ವಿದ್ಯುತ್ ಸಂಪರ್ಕ ಬೇಡ. ಅಲ್ಲದೆ ಎಲ್ಲಿ ಬೇಕಾದರೂ ಸುಲಭವಾಗಿ ಸಾಗಾಟ ಮಾಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.