ADVERTISEMENT

ಉಡುಪಿ: ರೋವರ್ಸ್– ರೇಂಜರ್ಸ್ ಪುನಶ್ಚೇತನ ಕಾರ್ಯಾಗಾರ ಆಯೋಜನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 5:26 IST
Last Updated 29 ಸೆಪ್ಟೆಂಬರ್ 2025, 5:26 IST
   

ಕಾರ್ಕಳ: ಇಲ್ಲಿನ ಕ್ರೈಸ್ಟ್‌ಕಿಂಗ್ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸದಸ್ಯರಿಗೆ ಒಂದು ದಿನದ ಪುನಶ್ಚೇತನ ಕಾರ್ಯಾಗಾರ ಆಯೋಜಿಸಲಾಗಿತ್ತು. 

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಉಡುಪಿ ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ‘ಪ್ರಕೃತಿ ಹಾಗೂ ಸಮಾಜದಿಂದ ಎಲ್ಲವನ್ನೂ ಪಡೆದುಕೊಳ್ಳುವ ನಾವು ತಿರುಗಿ ಸಮಾಜಕ್ಕೆ ಏನು ಕೊಡುತ್ತೇವೆ ಎಂದು ಯೋಚಿಸಬೇಕು. ಹಿಂತಿರುಗಿ ಏನನ್ನಾದರೂ ನೀಡುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನಂತಹ ಸಂಸ್ಥೆಗಳು ನಮಗೆ ಅವಕಾಶ ಮಾಡಿಕೊಡುತ್ತವೆ. ರೋವರ್ಸ್ ಮತ್ತು ರೇಂಜರ್ಸ್ ಘಟಕಗಳು ಮಕ್ಕಳಲ್ಲಿ ಕೌಶಲ ವೃದ್ಧಿಸಿ, ಧನಾತ್ಮಕ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾಗುತ್ತವೆ’ ಎಂದರು.

ಮುಖ್ಯಅತಿಥಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಉಡುಪಿ ಜಿಲ್ಲಾ ಮುಖ್ಯಸ್ಥ ಗಣನಾಥ ಎಕ್ಕಾರು ಮಾತನಾಡಿ, ಸಮಾಜ ಸೇವೆ ಜೀವನದ ಅವಿಭಾಜ್ಯ ಭಾಗವಾಗಬೇಕು. ವಿದ್ಯಾರ್ಥಿಗಳು ಸೇವಾಭಾವನೆ ಬೆಳೆಸಿಕೊಂಡು ಸಮಾಜಮುಖಿ ವ್ಯಕ್ತಿಗಳಾಗಿ ಬೆಳೆಯಬೇಕು ಎಂದರು.

ADVERTISEMENT

ಉಡುಪಿ ಜಿಲ್ಲಾ ಗೈಡ್ಸ್ ಆಯುಕ್ತೆ ಜ್ಯೋತಿ ಪೈ ಮಾತನಾಡಿ, ‘ಮಕ್ಕಳು ತಂದೆ-ತಾಯಿ, ಗುರು ಹಾಗೂ ಜನ್ಮಭೂಮಿಯನ್ನು ಎಂದಿಗೂ ಮರೆಯಬಾರದು. ಸ್ಕೌಟ್ಸ್ ಮತ್ತು ಗೈಡ್ಸ್‌ನಂತಹ ಸಂಸ್ಥೆ ನಮ್ಮನ್ನು ಪರೋಪಕಾರಿಗಳನ್ನಾಗಿ ಮಾಡುತ್ತವೆ. ಮಕ್ಕಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಬೇಕು’ ಎಂದರು.

ಕಾರ್ಕಳ ಸ್ಥಳೀಯ ಸಂಸ್ಥೆಗಳ ಉಪಾಧ್ಯಕ್ಷೆ ಸಾವಿತ್ರಿ ಮನೋಹರ್ ಅವರು, ಸ್ಕೌಟ್ಸ್ ಮತ್ತು ಗೈಡ್ಸ್‌ ಗೀತೆಗಳನ್ನು ಹಾಡಿದರು. 

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಮೊಬೈಲ್ ಫೋನ್‌ ಮತ್ತು ಸಾಮಾಜಿಕ ಜಾಲತಾಣಗಳಿಂದ ಹೊರಬರಲು ಹಾಗೂ ದೇಹವನ್ನು ಸದೃಢವಾಗಿಸಲು ರೋವರ್ಸ್– ರೇಂಜರ್ಸ್ ಚಟುವಟಿಕೆಗಳು ಸಹಕಾರಿಯಾಗಿವೆ ಎಂದರು. 

ಉಡುಪಿ ಜಿಲ್ಲಾ ಸ್ಕೌಟ್ಸ್ ಸಹಾಯಕ ಆಯುಕ್ತ ವಿತೇಶ್ ಕಾಂಚನ್ ಅವರು, ಪುನಶ್ಚೇತನ ಕಾರ್ಯಾಗಾರದ ತರಬೇತಿ ನಡೆಸಿಕೊಟ್ಟರು. ಸಂಸ್ಥೆಯ ಉಪ ಪ್ರಾಚಾರ್ಯ ಪ್ರಕಾಶ್ ಭಟ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಆಡಳಿತಾಧಿಕಾರಿ ಕಿರಣ್ ಕ್ರಾಸ್ತಾ ಇದ್ದರು.

ಸಂಸ್ಥೆಯ ಅರ್ಥಶಾಸ್ತ್ರ ಉಪನ್ಯಾಸಕಿ, ರೇಂಜರ್ ಲೀಡರ್ ಅಭಿನಯ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ, ರೋವರ್ಸ್‌ ಸ್ಕೌಟ್ಸ್‌ ಲೀಡರ್ ಕೃಷ್ಣಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಉಮೆಶ್ ಬೆಳ್ಳಿಪ್ಪಾಡಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.