ADVERTISEMENT

ಸದನದಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ದನಿ: ಸಲೀಂ ಅಹಮ್ಮದ್‌

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 15:30 IST
Last Updated 13 ಸೆಪ್ಟೆಂಬರ್ 2020, 15:30 IST
ಸಲೀಂ ಅಹಮದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ
ಸಲೀಂ ಅಹಮದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ   

ಉಡುಪಿ: ಡಿಜೆ ಹಳ್ಳಿ ಗಲಭೆ ಪ್ರಕರಣ ನಿಭಾಯಿಸುವಲ್ಲಿ ಹಾಗೂ ಡ್ರಗ್ಸ್‌ ಮಾಫಿಯಾ ಜಾಲ ಬೇಧಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಆರೋಪಿಸಿದರು.

ಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಕಾಂಗ್ರೆಸ್‌ ಪ್ರಶ್ನಿಸಿದರೆ ಸರ್ಕಾರ ಡ್ರಗ್ಸ್‌ ವಿಚಾರವನ್ನು ಮುಂದಿಟ್ಟುಕೊಂಡು ಜನರ ದಿಕ್ಕು ತಪ್ಪಿಸುತ್ತಿದೆ. ಸರ್ಕಾರದ ವಿರುದ್ಧ 6 ತಿಂಗಳಲ್ಲಿ ₹ 2 ಸಾವಿರ ಕೋಟಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ ಎಂದರು.

ಡ್ರಗ್ಸ್‌ ಮಾಫಿಯಾದಲ್ಲಿ ಕಾಂಗ್ರೆಸ್‌ ನಾಯಕರು ಭಾಗಿಯಾಗಿದ್ದರೆ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವಾಗ ಉನ್ನತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು. ಆದರೆ, ಗೊಂದಲದ ಹೇಳಿಕೆಗಳ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಹೇಳಿದರು.

ADVERTISEMENT

ಕಳೆದ ವರ್ಷ ಸಂಭವಿಸಿದ ನೆರೆಗೆ ರಾಜ್ಯದಲ್ಲಿ ₹ 50,000 ಕೋಟಿ ನಷ್ಟವಾಗಿತ್ತು. ಕೇಂದ್ರ ಸರ್ಕಾರ ₹ 1,800 ಕೋಟಿ ಕೊಟ್ಟು ಕೈತೊಳೆದುಕೊಂಡಿತು. ಈ ವರ್ಷ ₹10,000 ಕೋಟಿ ನಷ್ಟವಾದರೂ ಕೇಂದ್ರ ₹ 600 ಕೋಟಿ ನೀಡಿದೆ.ನೆರೆ ಪರಿಹಾರ ಕೊಡಿ ಎಂದು ಧೈರ್ಯವಾಗಿ ಪ್ರಧಾನಿಗೆ ಪ್ರಶ್ನಿಸದ ರಾಜ್ಯದ ಬಿಜೆಪಿ ಸಂಸದರನ್ನು ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದರು.

ಕೊರೊನಾ ವೈದ್ಯಕೀಯ ಸಾಮಗ್ರಿ ಖರೀದಿಯಲ್ಲಿ ನಡೆದ ಭ್ರಷ್ಟಾಚಾರ, ಭೂಸುಧಾರಣೆ ಕಾಯ್ದೆ, ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ, ಡ್ರಗ್ಸ್‌ ಮಾಫಿಯಾ ಸೇರಿದಂತೆ ಹಲವು ವಿಚಾರಗಳನ್ನು ಸದನದಲ್ಲಿ ಕಾಂಗ್ರೆಸ್ ಪ್ರಶ್ನಿಸಲಿದೆ. ಆದರೆ, ಬಿಜೆಪಿ ಪಲಾಯನವಾದ ಮಾಡುತ್ತಿದ್ದು, 8 ದಿನ ಮಾತ್ರ ಸದನ ನಡೆಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಟೀಕಿಸಿದರು.

ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸದನದ ಅವಧಿಯನ್ನು ವಿಸ್ತರಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಇದುವರೆಗೂ ಉತ್ತರ ಬಂದಿಲ್ಲ. ಸರ್ಕಾರಕ್ಕೆ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಯವಿಲ್ಲ ಎಂದು ಕುಟುಕಿದರು.

ಗ್ರಾಮ ಪಂಚಾಯಿತಿ ಚುನಾವಣೆ ನಿಟ್ಟಿನಲ್ಲಿ ಬೂತ್ ಹಾಗೂ ಬ್ಲಾಕ್‌‌ ಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಲಗೊಳಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಸರ್ಕಾರದ ಆಡಳಿತದಿಂದ ಬೇಸತ್ತಿರುವ ಮತದಾರರು ಕಾಂಗ್ರೆಸ್ ಪರ ವಾಲುತ್ತಿದ್ದಾರೆ ಎಂದು ಸಲೀಂ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವಿನಯ್‌ ಕುಮಾರ್ ಸೊರಕೆ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಮಂಜುನಾಥ್‌ ಭಂಡಾರಿ, ಎಂ.ಎ.ಗಫೂರ್‌, ನಾರಾಯಣ ಸ್ವಾಮಿ, ಭಾಸ್ಕರ್ ರಾವ್ ಕಿದಿಯೂರು, ವಿಶ್ವಾಸ್ ಅಮೀನ್‌, ಬಿ.ನರಸಿಂಹ ಮೂರ್ತಿ ಉದ್ಯಾವರ ನಾಗೇಶ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.