ADVERTISEMENT

ಸಿಂಥೆಟಿಕ್ ಬಿಡಿ; ಖಾದಿ ಫ್ಯಾಷನ್‌ ಮಾಡಿ: ರಂಗಕರ್ಮಿ ಪ್ರಸನ್ನ ಕರೆ

ಪವಿತ್ರ ವಸ್ತ್ರ ಅಭಿಯಾನದ ಸಂವಾದ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 16:07 IST
Last Updated 13 ಸೆಪ್ಟೆಂಬರ್ 2021, 16:07 IST
ಎಂಜಿಎಂ ಕಾಲೇಜಿನಲ್ಲಿ ಸೋಮವಾರ ಆರಂಭವಾದ ಪವಿತ್ರ ವಸ್ತ್ರ ಅಭಿಯಾನದಲ್ಲಿ ರಂಗಕರ್ಮಿ ಪ್ರಸನ್ನ ಮಾತನಾಡಿದರು.
ಎಂಜಿಎಂ ಕಾಲೇಜಿನಲ್ಲಿ ಸೋಮವಾರ ಆರಂಭವಾದ ಪವಿತ್ರ ವಸ್ತ್ರ ಅಭಿಯಾನದಲ್ಲಿ ರಂಗಕರ್ಮಿ ಪ್ರಸನ್ನ ಮಾತನಾಡಿದರು.   

ಉಡುಪಿ: ಆಧುನಿಕತೆ ಹಾಗೂ ಪರಂಪರೆ ಪ್ರತ್ಯೇಕಗೊಂಡಿರುವುದೇ ಸಮಸ್ಯೆಗಳ ಮೂಲ. ಎರಡರ ಒಳಿತುಗಳನ್ನು ತೆಗೆದುಕೊಂಡು ಮಧ್ಯಮ ಮಾರ್ಗಕ್ಕೆ ಬರುವುದಾದರೆ ದೇಶದ ಸಮಸ್ಯೆ ಪರಿಹಾರ ಮಾಡಬಹುದು. ಸ್ವಾತಂತ್ರ್ಯದ ಅಮೃತ ವರ್ಷವನ್ನು ಅಮೃತ ಸಿಂಚನವಾಗಲಿದೆ ಎಂದು ರಂಗಕರ್ಮಿ ಪ್ರಸನ್ನ ಅಭಿಪ್ರಾಯಪಟ್ಟರು.

ನಗರದ ಎಂಜಿಎಂ ಕಾಲೇಜಿನಲ್ಲಿ ಸೋಮವಾರ ಪವಿತ್ರ ವಸ್ತ್ರ ಅಭಿಯಾನದ ಭಾಗವಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಂಪರೆ ಹಾಗೂ ಆಧುನಿಕತೆಯ ಗುಣಗಳನ್ನು ಮೇಳೈಸಿಕೊಂಡು ದೇಶವನ್ನು ಕಟ್ಟಬೇಕಾದ ಅಗತ್ಯತೆ ಇದೆ ಎಂದರು.

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಪ್ರಸ್ತುತ ಪರಂಪರೆ ಹಾಗೂ ಆಧುನಿಕತೆಯನ್ನು ಪ್ರತ್ಯೇಕಿಸಿ ನೋಡುತ್ತಿವೆ. ದೇಶದ ಆರ್ಥಿಕತೆಯನ್ನು ಯಂತ್ರಗಳನ್ನು ಬಳಸಿಯೇ ಕಟ್ಟುವುದಾಗಿ ಬಯಸುತ್ತಿವೆ. ಇದರಿಂದ ನೆಲದ ಜಾನಪದ, ಕೈಉತ್ಪನ್ನಗಳು ಹಾಗೂ ಭಾಷೆ ಉಳಿಯುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಇಂಗ್ಲೀಷ್‌ ಭಾಷೆಯನ್ನು ಆರ್ಥಿಕ ಭಾಷೆಯನ್ನಾಗಿ ಮಾಡಿಕೊಂಡು, ನೆಲದ ಕನ್ನಡ ಹಾಗೂ ತುಳು ಭಾಷೆಯನ್ನು ಸಾಂಸ್ಕತಿಕ ಭಾಷೆ ಹಾಗೂ ಹೃದಯದ ಭಾಷೆಯನ್ನಾಗಿ ಮಾಡಿಕೊಂಡಿದ್ದೇವೆ. ಈ ಮೂಲಕ ನಾವೇ ಭಾಷೆಗಳನ್ನು ಒಡೆದು ಹಾಕಿದ್ದೇವೆ. ಯಾವುದು ಪರಂಪರೆ ಹಾಗೂ ಆಧುನಿಕತೆಯನ್ನು ಒಟ್ಟಿಗೆ ತರುವುದೇ ಮಧ್ಯಮ ಮಾರ್ಗವಾಗಿದ್ದು, ಪ್ರಸ್ತುತ ಕಾಲಘಟ್ಟದಲ್ಲಿ ಮಧ್ಯಮ ಮಾರ್ಗವನ್ನು ಹುಡುಕಬೇಕಾಗಿದೆ ಎಂದರು.

ಯುವ ಜನಾಂಗವನ್ನು ಆಕರ್ಷಿಸುವುದು ಪವಿತ್ರ ವಸ್ತ್ರ ಅಭಿಯಾನ ಚಳವಳಿಯ ಪ್ರಮುಖ ಉದ್ದೇಶ. ಅಭಿಯಾನಗಳ ಹಿಂದಿರುವ ಉದ್ದೇಶ ಹಾಗೂ ಸತ್ಯ ಅರಿಯುವಲ್ಲಿ ಯುವ ಜನಾಂಗ ಮುಂದಿದ್ದು, ವೃದ್ಧರು ವಿಫಲರಾಗುತ್ತಿದ್ದಾರೆ. ಪರಂಪರೆ ಹಾಗೂ ಆಧುನಿಕತೆ ಹೆಸರಿನಲ್ಲಿ ಮಕ್ಕಳನ್ನು ಪ್ರತ್ಯೇಕಿಸುತ್ತಿದ್ದಾರೆ ಎಂದು ಪ್ರಸನ್ನ ಅಸಮಾಧಾನ ವ್ಯಕ್ತಪಡಿಸಿದರು.‌

ಯುವಕ ಯುವತಿಯರು ಮೊಬೈಲ್ ದಾಸರಾಗಿದ್ದರೂ ಧೈರ್ಯವಾಗಿ ಮುನ್ನುಗ್ಗುತ್ತಿದ್ದಾರೆ. ಹಾಗಾಗಿ, ಪವಿತ್ರ ವಸ್ತ್ರ ಅಭಿಯಾನವನ್ನು ಯುವಕರಿಗೆ ತಲುಪಿಸುವ ನಿಟ್ಟಿನಲ್ಲಿ ಫ್ಯಾಷನ್ ಚಳವಳಿಯಾಗಿ ಮಾಡಲು ನಿರ್ಧರಿಸಿದ್ದೇವೆ. ಸಿಂಥೆಟಿಕ್ ಬಟ್ಟೆ ಧರಿಸುವ ಬದಲು, ಯುವಜನಾಂಗ ಖಾದಿ ಬಟ್ಟೆಯನ್ನು ಧರಿಸಿ ಫ್ಯಾಷನ್ ಮಾಡಬೇಕು ಎಂದು ಕರೆ ನೀಡಿದರು.

ಮಹಾತ್ಮಾ ಗಾಂಧೀಜಿ ಫ್ಯಾಷನ್ ತಪ್ಪು ಎಂದು ಹೇಳಿಲ್ಲ. ಖಾದಿ ವಸ್ತ್ರವನ್ನೇ ಫ್ಯಾಷನ್‌ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ನೈಸರ್ಗಿಕ ಬಣ್ಣದಿಂದ ತಯಾರಾದ ಖಾದಿ ಬಟ್ಟೆ ಆಯುರ್ವೇದ ಉತ್ಪನ್ನಗಳ ಗುಣಗಳನ್ನು ಹೊಂದಿದ್ದು, ಇದರ ಬಳಕೆ ಹೆಚ್ಚಾಗಬೇಕಿದೆ ಎಂದರು.

ವಿದ್ಯಾರ್ಥಿನಿ ಸಮನ್ವಿ ಗಾಂಧೀಜಿ ಅವರ ಕುರಿತಾದ ಗೀತೆ ಹಾಡಿದರು. ಬಳಿಕ ವಿದ್ಯಾರ್ಥಿಗಳ ಜತೆ ಸಂವಾದ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.