ADVERTISEMENT

ಮರಳು ಸಮಸ್ಯೆ: ನಾಲ್ಕನೇ ದಿನಕ್ಕೆ ಕಾಲಿಟ್ಟ ಧರಣಿ

ದಲಿತರಿಗೆ ಪರಳು ಪರವಾನಗಿ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2018, 16:12 IST
Last Updated 27 ಅಕ್ಟೋಬರ್ 2018, 16:12 IST
ಮರಳುಗಾರಿಕೆ ಮಾಡಲು ಪರವಾನಗಿ ನೀಡುವಾಗ ದಲಿತ ಮೀಸಲಾತಿಯನ್ನು ಪಾಲನೆ ಮಾಡಬೇಕು ದಲಿತ ಸಂಘಟನೆಗಳ ಓಕ್ಕೂಟ ಶನಿವಾರ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರಿಗೆ ಮನವಿ ಸಲ್ಲಿಸಿತು.
ಮರಳುಗಾರಿಕೆ ಮಾಡಲು ಪರವಾನಗಿ ನೀಡುವಾಗ ದಲಿತ ಮೀಸಲಾತಿಯನ್ನು ಪಾಲನೆ ಮಾಡಬೇಕು ದಲಿತ ಸಂಘಟನೆಗಳ ಓಕ್ಕೂಟ ಶನಿವಾರ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರಿಗೆ ಮನವಿ ಸಲ್ಲಿಸಿತು.   

ಉಡುಪಿ: ಮರಳುಗಾರಿಕೆ ಮಾಡಲು ಪರವಾನಗಿ ನೀಡುವಾಗ ದಲಿತ ಮೀಸಲಾತಿಯನ್ನು ಪಾಲನೆ ಮಾಡಬೇಕು ದಲಿತ ಸಂಘಟನೆಗಳ ಓಕ್ಕೂಟ ಶನಿವಾರ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರಿಗೆ ಶನಿವಾರ ಮನವಿ ಸಲ್ಲಿಸಿತು.

ಶಾಸಕ ರಘುಪತಿ ಭಟ್ ಅವರು ಬಂಡವಾಳಶಾಯಿಗಳ ಬೆಂಬಲಕ್ಕೆ ನಿಂತು ಧರಣಿ ಮಾಡುತ್ತಿರುವುದು ಬೇಸರದ ಸಂಗತಿ. ದಲಿತರಿಗೆ ಪರವಾನಗಿ ನೀಡುವುದಾದರೆ ಬೇರೆ ಕಡೆಗಳಲ್ಲಿ ದಿಬ್ಬಗಳನ್ನು ಗುರುತಿಸಿ ಕೊಡಬೇಕೆಂದು ಹೇಳಿರುವುದು ಖಂಡನೀಯ. ಇದರ ವಿರುದ್ಧ ಮುಂದೆ ಹೋರಾಟ ನಡೆಸುವುದಾಗಿ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ದಲಿತರ ಕುಂದುಕೊರತೆಗಳ ಸಭೆಯಲ್ಲಿ ಮರಳು ಮಾಫಿಯಾ ಮತ್ತು ಬೇನಾಮಿ ಗುತ್ತಿಗೆದಾರರ ಹೆಸರಿನಲ್ಲಿ ಮರಳು ತೆಗೆಯುತ್ತಿರುವ ವಿಚಾರವನ್ನು ಪ್ರಸ್ತಾಪಲಾಗಿದೆ. ಇದನ್ನು ದಲಿತ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ದಲಿತ ಸಮುದಾಯಕ್ಕೆ ಸೇರಿದವರಿಗೂ ಪರವಾನಗಿಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

ಮರಳುಗಾರಿಕೆ ವಿಚಾರದಲ್ಲಿ ಜಿಲ್ಲಾಧಿಕಾರಿ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ. ಬೇನಾಮಿ ಹೆಸರಿನಲ್ಲಿ ನೀಡಲಾಗುತ್ತಿರುವ ಮರಳು ಗುತ್ತಿಗೆಯನ್ನು ರದ್ದುಪಡಿಸಬೇಕು. ನಿಜವಾದ ಕಾರ್ಮಿಕರಿಗೆ ಗುತ್ತಿಗೆ ಸಿಗಬೇಕು ಎಂದು ಮುಖಂಡರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭ ದಲಿತ ಮುಖಂಡರಾದ ಚಂದ್ರ ಅಲ್ತಾರ್, ಮೋಹನಚಂದ್ರ ಕಾಳವರ, ಆರತಿ ಗಿಳಿಯಾರ್, ವಡ್ಡರ್ಸೆ ಶ್ರೀನಿವಾಸ, ಉದಯ ಕುಮಾರ್ ತಲ್ಲೂರು, ಸುಂದರ್ ಮಾಸ್ಟರ್, ಶ್ಯಾಮರಾಜ್ ಬಿರ್ತಿ, ಸುಂದರ್ ಕಪ್ಪೆಟ್ಟುಉಪಸ್ಥಿತರಿದ್ದರು.

ನಾಲ್ಕನೇ ದಿನಕ್ಕೆ ಕಾಲಿಟ್ಟ ಧರಣಿ:

ಮತ್ತೊಂದೆಡೆ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಎಸ್‌ಜಿಝೆಡ್ ವ್ಯಾಪ್ತಿಯಲ್ಲಿ 171 ಪರವಾನಗಿದಾರರಿಗೆ ಮರಳುಗಾರಿಕೆಗೆ ಅನುಮತಿ ನೀಡುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಶಾಸಕ ಕೆ.ರಘುಪತಿ ಭಟ್ ಪಟ್ಟು ಹಿಡಿದಿದ್ದಾರೆ. ಸರ್ಕಾರದ ನಿರ್ದೇಶನದಂತೆ 2011ರ ಹಿಂದಿನ ಸಾಂಪ್ರದಾಯಿಕವಾಗಿ ಮರಳುಗಾರಿಕೆ ಮಾಡುತ್ತಿದ್ದವರಿಗೆ ಮಾತ್ರ ಪರವಾನಗಿ ನೀಡುವುದಾಗಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಎಸ್‌ಇಝೆಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳ ತೆರವು ವಿಚಾರ ರಾಷ್ಟ್ರೀಯ ಹಸಿರು ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಂತದಲ್ಲಿ ಎನ್‌ಜಿಟಿ ನಿಯಮಗಳಿಗೆ ಬದ್ದವಾಗಿಯೇ ಮರಳು ತೆಗೆಯಲು ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ನಿಯಮಗಳನ್ನು ಮೀರುವುದಿಲ್ಲ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.

2017ರವರೆಗೂ 170 ಪರವಾನಗಿದಾರರಿಗೆ ಮರಳು ತೆಗೆಯಲು ಅವಕಾಶ ನೀಡಲಾಗಿದೆ. ಅದರಂತೆ, ಈ ವರ್ಷವೂ ಎಲ್ಲರಿಗೂ ಗುತ್ತಿಗೆ ನೀಡಬೇಕು. ಅಲ್ಲಿಯವರೆಗೂ ಧರಣಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಶನಿವಾರ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾಪು ಶಾಸಕ ಲಾಲಾಜಿ ಮೆಂಡನ್ ಸೇರಿದಂತೆ ಹಲವು ನಾಯಕರು ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.