ADVERTISEMENT

‘ವೈದ್ಯರು ಸಿಬ್ಬಂದಿ ಶ್ರಮದಿಂದ ಕೋವಿಡ್‌ ನಿಯಂತ್ರಣ’

ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ವೈದ್ಯರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 14:48 IST
Last Updated 3 ಜುಲೈ 2022, 14:48 IST
ಆದರ್ಶ ಆಸ್ಪತ್ರೆ ಮತ್ತು ಆದರ್ಶ ಚಾರಿಟೇಬಲ್ ಟ್ರಸ್ಟ್‌ನಿಂದ ಆಸ್ಪತ್ರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಆದರ್ಶ ಆಸ್ಪತ್ರೆ ಮತ್ತು ಆದರ್ಶ ಚಾರಿಟೇಬಲ್ ಟ್ರಸ್ಟ್‌ನಿಂದ ಆಸ್ಪತ್ರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.   

ಉಡುಪಿ: ಕೋವಿಡ್-19 ಸವಾಲಿನ ಸಂದರ್ಭದಲ್ಲಿ ಸೋಂಕು ನಿಯಂತ್ರಣಕ್ಕೆ ತರಲು ಹಾಗೂ ಲಸಿಕೆ ಗುರಿ ಸಾಧಿಸಲು ಜಿಲ್ಲೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿಯು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ ಪರಿಣಾಮ ಸೋಂಕು ನಿಯಂತ್ರಣಕ್ಕೆ ಬಂತು. ಶೇ 100 ಲಸಿಕೆ ಗುರಿ ಸಾಧಿಸಲು ಸಾದ್ಯವಾಯಿತು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಶ್ಲಾಘಿಸಿದರು.

ಆದರ್ಶ ಆಸ್ಪತ್ರೆ ಮತ್ತು ಆದರ್ಶ ಚಾರಿಟೇಬಲ್ ಟ್ರಸ್ಟ್‌ನಿಂದ ಆಸ್ಪತ್ರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೋವಿಡ್-19 ಸೋಂಕು ಇಡೀ ಜಗತ್ತನ್ನು ಬಾಧಿಸಲು ಶುರುಮಾಡಿದಾಗ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಮಹತ್ವದ ಅರಿವಾಯಿತು. ಜಿಲ್ಲೆಯನ್ನು ಕೋವಿಡ್ ಸೋಂಕು ಮುಕ್ತ ಮಾಡಬೇಕು ಎಂಬ ಜಿಲ್ಲಾಡಳಿತದ ಸಂಕಲ್ಪಕ್ಕೆ ಜಿಲ್ಲೆಯ ಎಲ್ಲ ಆಸ್ಪತ್ರೆಗಳು ಕೈಜೋಡಿಸಿ ಉತ್ತಮ ಸಹಕಾರ ನೀಡಿದವು.

ADVERTISEMENT

ಸೋಂಕು ನಿಯಂತ್ರಣಕ್ಕೆ ಆದರ್ಶ ಆಸ್ಪತ್ರೆಯೂ ಉತ್ತಮ ಸೇವೆ ನೀಡುವ ಮೂಲಕ ಆದರ್ಶವಾಗಿ ಗುರುತಿಸಿಕೊಂಡಿದೆ. ಈಗ ಉಚಿತ ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ನೆರವು ನೀಡುವ ಆಸ್ಪತ್ರೆಯ ಕಾರ್ಯ ಶ್ಲಾಘನೀಯ ಎಂದರು.

ಸನ್ಮಾನ:

ವೈದ್ಯಕೀಯ ಸೇವೆಯ ಮೂಲಕ ಗಮನಾರ್ಹ ಸಾಧನೆ ಮಾಡಿರುವ ಡಾ.ಅಂಜಲಿ ವಾಗ್ಳೆ, ಡಾ.ವಿದ್ಯಾ, ಡಾ.ವೈ.ಪಿ.ರಂಗನಾಥ್, ಡಾ.ಎ. ರವೀಂದ್ರನಾಥ್ ಶೆಟ್ಟಿ, ಡಾ. ಪ್ರಶಾಂತ್ ಹೆಗ್ಡೆ, ಡಾ. ಶ್ರೀಶ ರಾವ್ ಕೊರಡ್ಕಲ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಶಿಬಿರದಲ್ಲಿ ರಕ್ತದ ಸಕ್ಕರೆ ಅಂಶ ಪತ್ತೆಹಚ್ಚುವ ಪರೀಕ್ಷೆ, ಕೊಬ್ಬಿನಾಂಶ, ಇಸಿಜಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು. ವೈದ್ಯರ ಸಲಹೆ ಮೇರೆಗೆ ರೋಗಿಗಳಿಗೆ ಹೃದಯದ ಸ್ಕ್ಯಾನಿಂಗ್, ಟಿಎಂಟಿ ಪರೀಕ್ಷೆಗಳು ಸಹ ಉಚಿತವಾಗಿ ನಡೆಸಲಾಯಿತು.

ಆದರ್ಶ ಆಸ್ಪತ್ರೆಯ ನರರೋಗ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಎ.ರಾಜ ಅಧ್ಯಕ್ಷತೆ ವಹಿಸಿದ್ದರು. ಡಿಎಚ್‌ಒ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಆದರ್ಶ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಕಾರಿ ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್. ಚಂದ್ರಶೇಖರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.