ADVERTISEMENT

ಸ್ವರಾಜ್ಯ ಕಲ್ಪನೆಯ‌ ಭಾರತ ಕಟ್ಟೋಣ: ಪ್ರೊ.ವರದೇಶ್ ಹಿರೆಗಂಗೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 5:41 IST
Last Updated 31 ಆಗಸ್ಟ್ 2025, 5:41 IST
ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಪಠ್ಯಕ್ರಮದ ಕುರಿತ ಕಾರ್ಯಾಗಾರ ನಡೆಯಿತು.
ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಪಠ್ಯಕ್ರಮದ ಕುರಿತ ಕಾರ್ಯಾಗಾರ ನಡೆಯಿತು.   

ಕುಂದಾಪುರ: ‘ಸರ್ವೋದಯದ ಸತ್ಯಾಗ್ರಹ, ಸ್ವರಾಜ್ಯದ ಪರಿಕಲ್ಪನೆಯ ಭಾರತವನ್ನು ನಾವು ಕಟ್ಟಬೇಕು’ ಎಂದು ಮಣಿಪಾಲದ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲೋಸಾಫಿಕಲ್ ಆರ್ಟ್ಸ್ ಆ್ಯಂಡ್‌ ಸೈನ್ಸ್ ನಿರ್ದೇಶಕ ಪ್ರೊ.ವರದೇಶ್ ಹಿರೆಗಂಗೆ ಹೇಳಿದರು.

ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶ, ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಸಹಯೋಗದಲ್ಲಿ ನಡೆದ ತೃತೀಯ ಸೆಮಿಸ್ಟರ್ ರಾಜ್ಯಶಾಸ್ತ್ರ ಪಠ್ಯಕ್ರಮ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕೀಯ ಚಿಂತನೆಗಳು ಮೂಲಭೂತ ಚಿಂತನೆಗಳಿಗೆ ಒಳಗಾಗಬೇಕು. ಅಂದಿನ ಚಿಂತನೆಗಳನ್ನು ಇಂದು ನೋಡಲು ಸಾಧ್ಯವಿಲ್ಲ. ಸರ್ವಧರ್ಮ ಸಮಭಾವ, ಸರ್ವೋದಯದ ಪರಿಕಲ್ಪನೆಗಳು, ರಾಷ್ಟ್ರೀಯತೆಯಾಗಿ ರೂಪುಗೊಳ್ಳಬೇಕು. ಸರ್ವರಲ್ಲಿಯೂ ಸಮನ್ವಯ ಇರಬೇಕು. ಪಠ್ಯಕ್ರಮದ ನೆಲೆಯಲ್ಲಿ ರಾಜಕೀಯ ಚಿಂತನೆಗಳಲ್ಲಿ ಆಯಾ ಕಾಲಘಟ್ಟದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದರು.

ADVERTISEMENT

ಮಹಿಳಾ ರಾಜಕೀಯ ಚಿಂತನೆಗಳನ್ನು ಗುರುತಿಸಿದಂತೆ ಇಲ್ಲ. ಭಾರತದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯರಂತಹ ರಾಜಕೀಯ ಚಿಂತಕರಿದ್ದರು. ಮಹಿಳೆಯರು ಕೇವಲ ಸಾಹಿತ್ಯ, ಸ್ತ್ರೀ ವಾದ, ಸಾಮಾಜಿಕ ಬದುಕಿಗೆ ಸೀಮಿತವಾಗಿಲ್ಲ ಎಂದು ಹೇಳಿದರು.

ಪದವಿ ಕಾಲೇಜಿನ ಪ್ರಾಂಶುಪಾಲ ಶುಭಕರಾಚಾರಿ ಅಧ್ಯಕ್ಷತೆ ವಹಿಸಿದ್ದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಪ್ರೊ.ಸತ್ಯನಾರಾಯಣ, ಮಂಗಳೂರು ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಐವಿನ್ ಫ್ರಾನ್ಸಿಸ್ ಲೋಬೊ, ಕಾರ್ಕಳ ಎಸ್.ವಿ.ಟಿ ಕಾಲೇಜು ಪ್ರಾಂಶುಪಾಲೆ ಪ್ರೊ.ಗೀತಾ ಜಿ. ಭಾಗವಹಿಸಿದ್ದರು.

ಮಂಗಳೂರು ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಗಣೇಶ್ ಶೆಟ್ಟಿ ವಂದಿಸಿದರು. ಭಂಡಾರ್ಕಾರ್ಸ್ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಹರ್ಷಿತಾ ಸ್ವಾಗತಿಸಿದರು. ಉಪನ್ಯಾಸಕಿಯರಾದ ಅಕ್ಷತಾ ನಿರೂಪಿಸಿದರು. ಕಾವ್ಯಶ್ರೀ ಪರಿಚಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.