
ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನ (ಮಾಹೆ) ಅಧೀನದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಭ್ರೂಣ ವಿಜ್ಞಾನ ವಿಭಾಗದ (ಕ್ಲಿನಿಕಲ್ ಎಂಬ್ರಿಯಾಲಜಿ) ಮುಖ್ಯಸ್ಥ ಡಾ. ಸತೀಶ್ ಕುಮಾರ್ ಅಡಿಗ ಅವರನ್ನು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಷ್ಟ್ರೀಯ ನೆರವು ಸಹಿತ ಸಂತಾನೋತ್ಪತ್ತಿ ತಂತ್ರಜ್ಞಾನ (ಎಆರ್‌ಟಿ) ಮತ್ತು ಬಾಡಿಗೆ ತಾಯ್ತನ ಮಂಡಳಿ ತಜ್ಞ ಸದಸ್ಯರನ್ನಾಗಿ ನೇಮಕ ಮಾಡಿದೆ.
ರಾಷ್ಟ್ರೀಯ ಎಆರ್‌ಟಿ ಮತ್ತು ಬಾಡಿಗೆ ತಾಯ್ತನ ಮಂಡಳಿಯು, ದೇಶದಾದ್ಯಂತ ಈ ಮೂಲಕ ನಡೆಯುವ ಸೇವೆಗಳ ಮೇಲೆ ನಿಗಾ ವಹಿಸುವ ಅತ್ಯುನ್ನತ ಪ್ರಾಧಿಕಾರವಾಗಿದೆ. ಈ ಸೇವೆಗಳು ಸುರಕ್ಷಿತ, ನೈತಿಕ ಹಾಗೂ ಪಾರದರ್ಶಕವಾಗಿರುವಂತೆ ನೋಡಿಕೊಳ್ಳುವುದು ಮಂಡಳಿಯ ಪ್ರಮುಖ ಜವಾಬ್ದಾರಿಯಾಗಿದೆ.
ಈ ವಿಚಾರದಲ್ಲಿ ನೀತಿ ನಿರೂಪಣೆ ಕುರಿತು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವುದು, ಎಆರ್‌ಟಿ ಕ್ಲಿನಿಕ್‌ಗಳು ಮತ್ತು ವೀರ್ಯ ಘನೀಕರಣ ಬ್ಯಾಂಕ್‌ಗಳನ್ನು ನಿಯಂತ್ರಣ ಹಾಗೂ ಮೇಲ್ವಿಚಾರಣೆ ನಡೆಸುವುದು, ಮಾನದಂಡಗಳನ್ನು ಮತ್ತು ನೀತಿ ಸಂಹಿತೆಗಳನ್ನು ರೂಪಿಸುವುದು, ತಂತ್ರಜ್ಞಾನದ ದುರುಪಯೋಗವನ್ನು ತಡೆಯುವುದು ಇದರ ಕಾರ್ಯವಾಗಿದೆ.
ಡಾ. ಅಡಿಗ ಅವರು ಐವಿಎಫ್ ಎಂಬ್ರಿಯಾಲಜಿ, ಬಂಜೆತನ ನಿವಾರಣಾ ಚಿಕಿತ್ಸೆ ಹಾಗೂ ಗುಣಮಟ್ಟ ನಿರ್ವಹಣಾ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಐವಿಎಫ್ ತರಬೇತಿ, ಸಂಶೋಧನೆ ಹಾಗೂ ಎಆರ್‌ಟಿ ಚಿಕಿತ್ಸೆಯಲ್ಲಿ ಜಾಗತಿಕ ಮಟ್ಟದ ಅತ್ಯುತ್ತಮ ಪದ್ಧತಿಗಳನ್ನು ಭಾರತದಲ್ಲಿ ಅಳವಡಿಸಿಕೊಳ್ಳುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.