ADVERTISEMENT

ಸಶಕ್ತ, ಸಶಸ್ತ್ರ ಭಾರತ ನಿರ್ಮಾಣ ಸಾವರ್ಕರ್ ಕನಸು: ಸಾತ್ಯಕಿ ಸಾವರ್ಕರ್

‘ಭಾರತ ಮತ್ತು ಸಾವರ್ಕರ್‌’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 15:14 IST
Last Updated 13 ಜನವರಿ 2022, 15:14 IST
ಕೃಷ್ಣಮಠದ ರಾಜಾಂಗಣದಲ್ಲಿ ಗುರುವಾರ ‘ಭಾರತ ಮತ್ತು ಸಾವರ್ಕರ್‌’ ಕುರಿತು ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ವಿಶೇಷ ಉಪನ್ಯಾಸ ನೀಡಿದರು.
ಕೃಷ್ಣಮಠದ ರಾಜಾಂಗಣದಲ್ಲಿ ಗುರುವಾರ ‘ಭಾರತ ಮತ್ತು ಸಾವರ್ಕರ್‌’ ಕುರಿತು ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ವಿಶೇಷ ಉಪನ್ಯಾಸ ನೀಡಿದರು.   

ಉಡುಪಿ: ಸಶಸ್ತ್ರ, ಸಶಕ್ತ ಭಾರತ ನಿರ್ಮಾಣ ಮಾಡಬೇಕು ಎಂಬುದು ವಿನಾಯಕ ದಾಮೋದರ್ ಸಾವರ್ಕರ್ ಕನಸಾಗಿತ್ತು ಎಂದು ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಹೇಳಿದರು.

ಕೃಷ್ಣಮಠದ ರಾಜಾಂಗಣದಲ್ಲಿ ಗುರುವಾರ ‘ಭಾರತ ಮತ್ತು ಸಾವರ್ಕರ್‌’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ‘ನಾನು ಮೃತಪಟ್ಟರೆ ಚಿತೆಯ ಹಿಂಬದಿಯಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಎಂಬ ಫಲಕದ ಬದಲು, ಹಿಂದೂ ಸಂಘಟಕ ಸಾವರ್ಕರ್ ಎಂಬ ಫಲಕ ಹಾಕಿ’ ಎಂದು ಸಾವರ್ಕರ್ ಅವರು ಸಾವಿಗೂ ಮುನ್ನ ಅಂತಿಮ ಇಚ್ಛೆ ವ್ಯಕ್ತಪಡಿಸಿದ್ದರು. ಅಷ್ಟರಮಟ್ಟಿಗೆ ಅವರಲ್ಲಿ ಹಿಂದುತ್ವ ಹಾಗೂ ರಾಷ್ಟ್ರೀಯತೆಯ ವಿಚಾರಧಾರೆಗಳು ಗಾಢವಾಗಿತ್ತು ಎಂದರು.

ಕ್ರಾಂತಿಕಾರಿಗಳ, ದೇಶಪ್ರೇಮಿಗಳ ತ್ಯಾಗ ಬಲಿದಾನದ ಫಲವಾಗಿ ಭಾರತ ದೇಶ ರೂಪುಗೊಂಡಿದೆ. ಎಲ್ಲ ಕ್ಷೇತ್ರಗಳಲ್ಲಿ ಹಿಂದೂ ಮನಸ್ಥಿತಿ ಹಾಗೂ ರಾಷ್ಟ್ರೀಯವಾದ ಅನುಷ್ಠಾನಗೊಳ್ಳಬೇಕು. ಈ ಮೂಲಕ ಸಾವರ್ಕರ್ ಅವರ ಕನಸು ಸಾಕಾರವಾಗಬೇಕು ಎಂದು ಸಾತ್ಯಕಿ ಸಾವರ್ಕರ್ ಹೇಳಿದರು.

ADVERTISEMENT

ಜೈಲುವಾಸದ ಬಳಿಕ ಸಾವರ್ಕರ್ ಮಾಡಿದ್ದೇನು ಎಂದು ಹಲವರು ಪ್ರಶ್ನಿಸುತ್ತಾರೆ. ಸಾವರ್ಕರ್ ಇತಿಹಾಸ ಅರಿತರೆ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ‘ಮಿತ್ರಮೇಳ’ ಸಂಸ್ಥೆ ಆರಂಭಿಸಿದ ಸಾವರ್ಕರ್‌, ಛತ್ರಪತಿ ಶಿವಾಜಿಯ ಶೌರ್ಯವನ್ನು ಯುವಕರ ಮನಸ್ಸಿನಲ್ಲಿ ತುಂಬಿ ಹೋರಾಟಕ್ಕೆ ಸಜ್ಜುಗೊಳಿಸಿದರು. ಬ್ರಿಟಿಷರ ವಿರುದ್ಧ ಹೋರಾಟ ಮಾಡಲು ಶಸ್ತ್ರಾಸ್ತ್ರ ವಿದ್ಯೆಗಳ ತರಬೇತಿ ನೀಡಿದರು ಎಂದರು.

ಅಂಡಮಾನ್ ಜೈಲಿನಲ್ಲಿ ಮಾನಸಿಕ, ದೈಹಿಕ ಹಿಂಸೆ ಅನುಭವಿಸುತ್ತಿದ್ದರೂ ಭಾರತವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸುವ ಸಂಕಲ್ಪ ಮಾಡಿ, ಜೈಲಿನಲ್ಲಿದ್ದುಕೊಂಡೇ ಪೂರ್ವತಯಾರಿ ಮಾಡುತ್ತಿದ್ದರು. ಜೈಲಿನಲ್ಲಿ ಇಸ್ಲಾಂಗೆ ಮತಾಂತರಗೊಂಡ ಕೈದಿಗಳನ್ನು ಶುದ್ಧೀಕರಣ ಕ್ರಿಯೆಯ ಮೂಲಕ ಮರಳಿ ಹಿಂದೂ ಧರ್ಮಕ್ಕೆ ಕರೆತಂದರು ಎಂದರು.

ಸ್ವಾತಂತ್ರ್ಯನಂತರ ಹಿಂದೂ ವಿರೋಧಿ ನಿಲುವುಗಳಿಗೆ ಅಂದಿನ ಕಾಂಗ್ರೆಸ್‌ ನಾಯಕರು ಪ್ರತಿರೋಧ ತೋರಲಿಲ್ಲ. ಜಿನ್ನಾ ದೇಶ ವಿಭಜನೆ ಪ್ರಸ್ತಾವ ಮುಂದಿಟ್ಟಾಗಲೂ ತಲೆಯಾಡಿಸಿದರು. ಹಿಂದೂಗಳಿಗೆ ಒಂದು ಮತ, ಮುಸ್ಲಿಮರಿಗೆ ಮೂರು ಮತ ಎಂಬ ನಿಲುವಿಗೂ ಪ್ರತಿರೋಧ ತೋರಲಿಲ್ಲ. ಆದರೆ, ಸಾವರ್ಕರ್‌ ಹಿಂದುತ್ವ ಹಾಗೂ ರಾಷ್ಟ್ರೀಯತೆಯ ಪ್ರಬಲ ಪ್ರತಿಪಾದಕರಾಗಿದ್ದರು ಎಂದು ಸಾತ್ಯಕಿ ಸಾವರ್ಕರ್ ಹೇಳಿದರು.

ರಾಮಚಂದ್ರಾಪುರ ಮಠದ ರಾಘವೇಶ್ವರಭಾರತಿ ಸ್ವಾಮೀಜಿ ಮಾತನಾಡಿ, ಯಂತ್ರಗಳಿಗಿಂತ ಜೀವ ಚೈನತ್ಯ ಶ್ರೇಷ್ಠ ಎಂಬುದನ್ನು ಪರ್ಯಾಯ ಅದಮಾರು ಮಠ ನಿರೂಪಿಸಿದೆ. ಪರ್ಯಾಯದಲ್ಲಿ ಯಂತ್ರಗಳಿಂದ ತಯಾರಾದ ವಸ್ತುಗಳಿಗಿಂತ ಜೀವ ಚೈನತ್ಯದಿಂದ ತಯಾರಾದ ವಸ್ತುಗಳಿಗೆ ಒತ್ತುಕೊಟ್ಟು, ಸಮಾಜವನ್ನು ಮರಳಿ ಪರಂಪರೆಯತ್ತ, ಸಹಜತೆಗೆ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿರುವುದನ್ನು ಕಂಡು ಬಹಳ ಸಂತಸವಾಗಿದೆ ಎಂದರು.

ದೇಸಿ ತುಪ್ಪ, ಎಳ್ಳೆಣ್ಣೆ, ಕೈಮಗ್ಗದ ಉತ್ಪನ್ನ, ಹೀಗೆ ದ್ರವ್ಯ ಶುದ್ಧ ವಸ್ತುಗಳ ಬಳಕೆಗೆ ಎಲ್ಲ ಮಠಗಳೂ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ರಾಮಚಂದ್ರಾಪುರ ಮಠವೂ ಮುಂದಡಿ ಇಡಲಿದೆ ಎಂದು ರಾಘವೇಶ್ವರಭಾರತಿ ಸ್ವಾಮೀಜಿ ಹೇಳಿದರು.

ಸಾವರ್ಕರ್ ಕುಡಿ ವೇದಿಕೆಯಲ್ಲಿರುವುದು ಕಾರ್ಯಕ್ರಮಕ್ಕೆ ಹೆಚ್ಚು ಮಹತ್ವ ತಂದಿದೆ. ಸಾವರ್ಕರ್ ಮಹಾನ್ ಕ್ರಾಂತಿಕಾರಿ ಎಂದು ಬಣ್ಣಿಸಿದ ಸ್ವಾಮೀಜಿ, ದೇಶಕ್ಕೆ ಸ್ವಾತಂತ್ರ್ಯ ಬಂದಿದೆಯೇ ಹೊರತು ಸ್ವಾಭಿಮಾನ ಬಂದಿಲ್ಲ. ತನ್ನತನಕ್ಕೆ ಪ್ರಾಧಾನ್ಯತೆ ಸಿಗಬೇಕು, ಸ್ವಸಿದ್ಧಾಂತಗಳು ಅನುಷ್ಠಾನಗೊಳ್ಳಬೇಕು. ದೇಶದ ಉಳಿವಿಗೆ ಉದ್ಧಾರಕ್ಕೆ ಸಾವರ್ಕರ್‌ ಸ್ಮರಣೆ ಬಹಳ ಅಗತ್ಯ ಎಂದರು.

ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.