ADVERTISEMENT

ಕೋವಿಡ್‌ ಆತಂಕದ ಮಧ್ಯೆ 2ನೇ ಹಂತದ ಶಾಲಾರಂಭ

ಇಂದಿನಿಂದ 6 ರಿಂದ 8ನೇ ತರಗತಿ ಆರಂಭ

ಬಾಲಚಂದ್ರ ಎಚ್.
Published 5 ಸೆಪ್ಟೆಂಬರ್ 2021, 19:30 IST
Last Updated 5 ಸೆಪ್ಟೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಿರುವ ಆತಂಕದ ನಡುವೆಯೂ ಜಿಲ್ಲೆಯಲ್ಲಿ 2ನೇ ಹಂತದಲ್ಲಿ ಶಾಲೆಗಳು ಆರಂಭವಾಗುತ್ತಿವೆ. ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಶೇ 2ಕ್ಕಿಂತ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಸೆ.6ರಿಂದ 6ನೇ ತರಗತಿಯಿಂದ 8ನೇ ತರಗತಿಗಳನ್ನು ಆರಂಭಿಸಲು ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆಯಲ್ಲಿ ಶಾಲಾರಂಭಕ್ಕೆ ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಮೊದಲ ಹಂತದಲ್ಲಿ ಸೆ.1ರಿಂದ 9 ಹಾಗೂ 10ನೇ ತರಗತಿಗಳು ಆರಂಭವಾಗಿದ್ದು, ಶಾಲೆ ಆರಂಭವಾದ ದಿನವೇ ಸರ್ಕಾರಿ ಶಾಲೆಗಳ ಶೇ 70ರಷ್ಟು ಮಕ್ಕಳು ಹಾಜರಾಗುವ ಮೂಲಕ ಶಿಕ್ಷಣ ಇಲಾಖೆಗೆ ನೈತಿಕ ಬಲ ತುಂಬಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡನೇ ಹಂತದ ಶಾಲಾರಂಭಕ್ಕೂ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನ ಸಿಗಲಿದೆ ಎಂಬ ವಿಶ್ವಾಸದಲ್ಲಿದೆ ಶಿಕ್ಷಣ ಇಲಾಖೆ.

ಕೇರಳದೊಂದಿಗೆ ನಂಟು ಹೊಂದಿರುವ ಕಾರಣದಿಂದ ಜಿಲ್ಲೆಯಲ್ಲಿ ಶಾಲೆಗಳನ್ನು ಆರಂಭಿಸುವುದು ಶಿಕ್ಷಣ ಇಲಾಖೆಗೆ ಸವಾಲಿನ ಕಾರ್ಯವಾಗಿದ್ದು, ಯಾವ ಲೋಪಗಳಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯ ಎಲ್ಲ ಶಾಲೆಗಳ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಸಲಾಗಿದೆ. ಗ್ರಾಮೀಣ ಭಾಗಗಳಲ್ಲಿರುವ ಶಾಲೆಗಳನ್ನು ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಯಿಂದ ಸ್ವಚ್ಛಗೊಳಿಸಲಾಗುತ್ತಿದೆ.

ADVERTISEMENT

ನಗರ ಪ್ರದೇಶದಲ್ಲಿರುವ ಶಾಲೆಗಳನ್ನು ನಗರಸಭೆ, ಪುರಸಭೆ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಸ್ಯಾನಿಟೈಸ್ ಮಾಡುತ್ತಿದೆ. ಪ್ರತಿ ವಾರಾಂತ್ಯದಲ್ಲಿ ಕೊಠಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂದು ಜಿಲ್ಲೆಯಲ್ಲಿ 2ನೇ ಹಂತದ ಶಾಲಾರಂಭದ ಸಿದ್ಧತೆಗಳ ಕುರಿತು ಡಿಡಿಪಿಐ ಎನ್‌.ಎಚ್‌.ನಾಗೂರ ಮಾಹಿತಿ ನೀಡಿದರು.

ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಶಾಲೆಗೆ ಮಕ್ಕಳನ್ನು ಕಳಿಸಲು ಪೋಷಕರಿಂದ ಒಪ್ಪಿಗೆ ಪತ್ರಗಳನ್ನು ಪಡೆಯಲಾಗಿದೆ. ತರಗತಿಯೊಳಗೆ ಮಾಸ್ಕ್‌ ಹಾಗೂ ಅಂತರ ಪಾಲನೆ ಕಡ್ಡಾಯ ಮಾಡಲಾಗಿದ್ದು, 15ರಿಂದ 20 ವಿದ್ಯಾರ್ಥಿಗಳು ಮಾತ್ರ ಒಂದು ಕೊಠಡಿಯಲ್ಲಿ ಕುಳಿತು ಪಾಠ ಕೇಳುವಂತೆ ಕ್ರಮವಹಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಎಲ್ಲ ಸರ್ಕಾರಿ ಶಾಲೆಯ ಶಿಕ್ಷಕರು ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದಾರೆ. ಶಾಲೆಗೆ ಭೇಟಿನೀಡುವ ಮುನ್ನ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡು ಬರುವಂತೆ ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರಿಗೆ ಸೂಚನೆ ನೀಡಲಾಗಿದೆ. ಸರ್ಕಾರದ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ ಎನ್ನುತ್ತಾರೆ ಡಿಡಿಪಿಐ

ಸೆ.1ರಿಂದ ಜಿಲ್ಲೆಯಲ್ಲಿ 9 ಹಾಗೂ 10ನೇ ತರಗತಿಗಳು ಆರಂಭವಾಗಿದ್ದು, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಹಾಜರಾತಿ ಪ್ರಮಾಣ ಹೆಚ್ಚಿದೆ. ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳ ಮಕ್ಕಳ ಹಾಜರಾತಿ ಹೆಚ್ಚಾಗಿದೆ. ಮಕ್ಕಳು ಆತಂಕಬಿಟ್ಟು ಉತ್ಸಾಹದಿಂದ ಶಾಲೆಗಳತ್ತ ಮುಖಮಾಡಿದ್ದು, ಇನ್ನೊಂದು ವಾರದಲ್ಲಿ ಹಾಜರಾತಿ ಪ್ರಮಾಣ ಶೇ 90ಕ್ಕಿಂತ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಡಿಡಿಪಿಐ.

ಶೀತ, ಕೆಮ್ಮು, ಜ್ವರದಂತಹ ಕೋವಿಡ್ ಲಕ್ಷಣಗಳಿದ್ದ ಮಕ್ಕಳನ್ನು ಶಾಲೆಗಳಿಗೆ ಕಳುಹಿಸದಂತೆ ಪೋಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಶಾಲೆಗಳು ಆರಂಭವಾಗಿದ್ದರೂ ಹಾಜರಾತಿ ಕಡ್ಡಾಯವಲ್ಲ; ಮನೆಯಲ್ಲಿಯೇ ಆನ್‌ಲೈನ್‌ ಪಾಠ ಕೇಳಬಹುದು. ವಾಟ್ಸ್‌ಆ್ಯಪ್‌ ಗ್ರೂಪ್ ಮಾಡಲಾಗಿದ್ದು, ಮಕ್ಕಳಿಗೆ ಮುದ್ರಿತ ಪಾಠಗಳನ್ನು ಕಳಿಸಲಾಗುತ್ತಿದೆ. ಶಾಲೆಗೆ ಬರುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಇಲ್ಲ. ಆದರೆ, ಸೋಂಕು ಹರಡದಂತೆ ಶಿಕ್ಷಣ ಇಲಾಖೆ ಅಗತ್ಯ ಮನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಪೋಷಕರು ಧೈರ್ಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬಹುದು ಎಂದು ಮನವಿ ಮಾಡುತ್ತಾರೆ ಎನ್‌.ಎಚ್‌.ನಾಗೂರ.

‘ಕಟ್ಟುನಿಟ್ಟಿನ ಸುರಕ್ಷತಾ ಕ್ರಮ ಜಾರಿ’

ಸೆ.1ರಿಂದ 9 ಹಾಗೂ 10ನೇ ತರಗತಿಗಳು ಆರಂಭವಾಗಿದ್ದು, ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಪರಿಣಾಮ, ಯಾವ ವಿದ್ಯಾರ್ಥಿಯಲ್ಲೂ ಸೋಂಕು ಕಾಣಿಸಿಕೊಂಡಿಲ್ಲ. ಶೇ 100ರಷ್ಟು ಸರ್ಕಾರಿ ಶಿಕ್ಷಕರು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಅನುದಾನಿತ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ಎಲ್ಲ ಶಿಕ್ಷಕರೂ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ. ಕೇರಳ ಜಿಲ್ಲೆಗೆ ಸಮೀಪವಿರುವುದರಿಂದ ಹಾಗೂ ಜಿಲ್ಲೆಯೊಂದಿಗೆ ನಂಟು ಹೊಂದಿರುವುದರಿಂದ ಕೋವಿಡ್ ಆತಂಕವಂತೂ ಇದೆ. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಸುರಕ್ಷತಾ ಕ್ರಮಗಳ ಪಾಲನೆಗೆ ಒತ್ತು ನೀಡಲಾಗಿದೆ ಎಂದು ಡಿಡಿಪಿಐ ಎನ್‌.ಎಚ್‌.ನಾಗೂರ ಹೇಳಿದರು.

ಶಾಲಾರಂಭಕ್ಕೆ ನಿಯಮಗಳು

– ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಅನುಮತಿ ಪತ್ರ ಕಡ್ಡಾಯ

–ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು, ಉಪಾಹಾರ ತರಬೇಕು

–ಅವಶ್ಯಕತೆಗೆ ಅನುಸಾರ ಶಾಲೆಯಲ್ಲಿ ಬಿಸಿನೀರಿನ ವ್ಯವಸ್ಥೆ ಮಾಡಬಹುದು

–ಭೌತಿಕ ಹಾಜರಾತಿ ಕಡ್ಡಾಯವಲ್ಲ; ಮನೆಯಲ್ಲೇ ಆನ್‌ಲೈನ್‌ ಅಥವಾ ಪರ್ಯಾಯ ವಿಧಾನದಲ್ಲಿ ಹಾಜರಾಗಬಹದು

– ಸೋಮವಾರದಿಂದ ಶುಕ್ರವಾರದವರೆಗೆ ಶಾಲೆ, ಶನಿವಾರ ರಜೆ

–ಪ್ರತಿ ಶನಿವಾರ ಸ್ಥಳೀಯ ಆಡಳಿತದಿಂದ ಶಾಲಾ ಕೊಠಡಿಗಳ ಸ್ಯಾನಿಟೈಸ್ ಮಾಡಿಸಬೇಕು

–ಶಾಲೆ ನಡೆಯುವ ಅವಧಿ ಬೆಳಿಗ್ಗೆ 10ರಿಂದ 1.30ರವರೆಗೆ

–ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳ ಒದಗಿಸುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.