ADVERTISEMENT

ಎಸ್‌ಡಿಪಿಐ ಗೆಲುವಿನಿಂದ ಕಂಗೆಟ್ಟಿರುವ ಸೊರಕೆ: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 13:18 IST
Last Updated 4 ನವೆಂಬರ್ 2022, 13:18 IST
ಕುಯಿಲಾಡಿ ಸುರೇಶ್ ನಾಯಕ್
ಕುಯಿಲಾಡಿ ಸುರೇಶ್ ನಾಯಕ್   

ಉಡುಪಿ: ಕಾಪು ಪುರಸಭೆ ಚುನಾವಣೆಯಲ್ಲಿ ಎಸ್‍ಡಿಪಿಐ ಗೆಲುವಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಮುಖಂಡ ವಿನಯ ಕುಮಾರ ಸೊರಕೆ ಸುಳ್ಳು ಹೇಳುವುದನ್ನು ಕಾಯಕ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಲೇವಡಿ ಮಾಡಿದ್ದಾರೆ.

ಬಿಜೆಪಿ ನಾಯಕರು ದನಗಳ್ಳರನ್ನು ರಕ್ಷಿಸಿಲ್ಲ; ರಕ್ಷಿಸುವುದೂ ಇಲ್ಲ. ಮಾಜಿ ಸಚಿವ ಸೊರಕೆ ದನಗಳ್ಳರನ್ನು ಶಿಕ್ಷಿಸಿ, ದನ ಕೊಂದವರನ್ನು ಬಂಧಿಸಿ ಎಂದು ಹೇಳಿದವರಲ್ಲ ಎಂದು ಟೀಕಿಸಿದ್ದಾರೆ.

ದನಗಳ್ಳರನ್ನು ಬಿಜೆಪಿ ಶಾಸಕ ಲಾಲಾಜಿ ಮೆಂಡನ್ ರಕ್ಷಿಸಿದ್ದಾರೆ; ಠಾಣೆಗೆ ಕರೆ ಮಾಡಿ ದನಗಳನ್ನು ಬಿಡಿಸಿದ್ದಾರೆ ಎಂಬ ವಿನಯ ಕುಮಾರ್ ಸೊರಕೆ ಅವರ ಆರೋಪ ಸತ್ಯಕ್ಕೆ ದೂರವಾದುದು. ಚುನಾವಣೆ ಹತ್ತಿರವಾಗುತ್ತಿರುವುದರಿಂದ ಬಿಜೆಪಿ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಕಾಪು ಪುರಸಭೆಯಲ್ಲಿ ಎಸ್‍ಡಿಪಿಐ ಮೂರು ಸ್ಥಾನ ಗೆದ್ದಿರುವುದು ಸೊರಕೆ ಅವರ ನಿದ್ದೆಗೆಡಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಬಿಜೆಪಿ ಎಸ್‍ಡಿಪಿಐ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಸೊರಕೆ ಹೇಳಿಕೆ ಹಾಸ್ಯಾಸ್ಪದ. ಎಸ್‍ಡಿಪಿಐ ಸಿಎಎ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಸೊರಕೆ ಭಾಗವಹಿಸಿದ್ದರು. ಇದರಿಂದ ಎಸ್‍ಡಿಪಿಐ ಜತೆಗಿನ ಅವರ ಸಂಬಂಧವನ್ನು ಜಿಲ್ಲೆಯ ಜನರು ಅರಿತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಪು ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ ಎಂಬುದು ಸೊರಕೆ ಅವರಿಗೆ ಖಾತರಿಯಾಗಿದೆ. ಲಾಲಾಜಿ ಮೆಂಡನ್ ವಿರುದ್ಧ ಆರೋಪ ಮಾಡುತ್ತಿರುವುದಕ್ಕೆ ಅವರ ಬಳಿ ಸಾಕ್ಷ್ಯಗಳಿದ್ದರೆ ಬಹಿರಂಗಪಡಿಸಲಿ. ಹಿಂದೂಗಳ ಓಟಿನ ಆಸೆಗೆ ನಾಟಕೀಯವಾಗಿ ಎಸ್‌ಡಿಪಿಐ ಪಕ್ಷವನ್ನು ದೂರುತ್ತಿದ್ದಾರೆ. ಹಿಜಾಬ್ ವಿಚಾರದಲ್ಲಿ ಅವರು ತೆಗೆದುಕೊಂಡ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.