ADVERTISEMENT

ತಿಂಗಳ ಬಳಿಕ ಕಡಲಿಗಿಳಿದ ನಾಡದೋಣಿಗಳು

ಭರ್ಜರಿ ಮೀನು ಬೇಟೆಯ ನಿರೀಕ್ಷೆಯಲ್ಲಿ ಮೀನುಗಾರರು

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 17:25 IST
Last Updated 5 ಜುಲೈ 2018, 17:25 IST
ಮಳೆಗಾಲದಲ್ಲಿ ದಡದಲ್ಲಿರುವ ಸಾಂಪ್ರದಾಯಿಕ ನಾಡದೋಣಿ
ಮಳೆಗಾಲದಲ್ಲಿ ದಡದಲ್ಲಿರುವ ಸಾಂಪ್ರದಾಯಿಕ ನಾಡದೋಣಿ   

ಶಿರ್ವ: ಕರಾವಳಿಯಲ್ಲಿ ಮಳೆಗಾಲದ ನಾಡದೋಣಿ ಮೀನುಗಾರಿಕೆ ಋತು ಆರಂಭವಾಗಿ ಒಂದು ತಿಂಗಳ ಬಳಿಕ ದೋಣಿಗಳು ಸಮುದ್ರಕ್ಕಿಳಿದಿದ್ದು, ಗುರುವಾರದಿಂದ ಸಾಂಪ್ರದಾಯಿಕ ಮೀನುಗಾರಿಕೆ ಚುರುಕುಗೊಂಡಿದೆ.

ಅತೀವ ಮಳೆ–ಗಾಳಿ, ಪ್ರತಿಕೂಲ ವಾತಾವರಣದಿಂದಾಗಿ ಕಡಲು ಪ್ರಕ್ಷುಬ್ಧಗೊಂಡಿದ್ದ ಕಾರಣ ನಾಡದೋಣಿಗಳು ಕಳೆದ ಒಂದು ತಿಂಗಳಿಂದ ಕಸುಬಿಲ್ಲದೇ ದಡದಲ್ಲೇ ಉಳಿದಿದ್ದವು. ಕರಾವಳಿಯಾದ್ಯಂತ ಸಮುದ್ರದಲ್ಲಿ ಮೀನುಗಾರಿಕೆಗೆ ಪೂರಕವಾದ ವಾತಾವರಣ ಇಲ್ಲದೆ ಮೀನುಗಾರರು ದಡದಲ್ಲೇ ಉಳಿದಿರುವ ದೋಣಿ ಮತ್ತು ಬಲೆಗಳೊಂದಿಗೆ ಕೈಚೆಲ್ಲಿ ಕುಳಿತಿದ್ದರು. ಆದರೆ, ಗುರುವಾರದಿಂದ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಚಟುವಟಿಕೆ ಗರಿಗೆದರಿರುವುದರಿಂದ ಕರಾವಳಿಯ ಮೀನುಮಾರುಕಟ್ಟೆಗಳಲ್ಲಿ ಆಗಷ್ಟೇ ಹಿಡಿದು ತಂದ ತಾಜಾ ಮೀನುಗಳ ಸುವಾಸನೆ ಮೀನುಪ್ರಿಯರನ್ನು ಸೆಳೆಯಲಾರಂಭಿಸಿದೆ.

ಮಳೆಗಾಲದಲ್ಲಿ ಜೂನ್‌ನಿಂದ ನಾಡದೋಣಿ ಮೀನುಗಾರಿಕೆಗೆ ಅವಕಾಶವಿದ್ದರೂ ವಿವಿಧ ಕಾರಣಗಳಿಂದಾಗಿ ಮೀನುಗಾರರಿಗೆ ಒಂದು ತಿಂಗಳು ಕೈ ತಪ್ಪಿ ಹೋಯಿತು. ಇದೀಗ ಜುಲೈನಲ್ಲಿ ಮೀನುಗಾರಿಕೆ ಚುರುಕುಗೊಂಡಿದೆ. ಆ.1ರಿಂದ ಮತ್ತೇ ಯಾಂತ್ರೀಕೃತ ದೋಣಿಗಳು ಸಮುದ್ರಕ್ಕೆ ಇಳಿಯಲಿವೆ. ಯಾಂತ್ರಿಕೃತ ಮೀನುಗಾರಿಕೆ ಕಳೆದ ಸೀಸನ್‌ನಲ್ಲಿ ಕುಂಟುತ್ತಾ ಸಾಗಿದ್ದರಿಂದ, ಈ ಬಾರಿ ಮಳೆಗಾಲದ ಮೀನುಗಾರಿಕೆ ಲಾಭದಾಯಕವಾಗಿ ಪರಿಣಮಿಸಬಹುದು ಎಂಬ ನಿರೀಕ್ಷೆ ಮೊಗವೀರರದ್ದು.

ADVERTISEMENT

‘ಯಾಂತ್ರಿಕ ಮೀನುಗಾರಿಕೆಯ ನಿಷೇಧದ ಎರಡು ತಿಂಗಳ ಈ ಅವಧಿಯಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಸುಗಮವಾಗಬೇಕು. ಉಳಿದಿರುವ ಒಂದು ತಿಂಗಳಲ್ಲಿ ಯಾವ ರೀತಿ ಮತ್ಸ್ಯ ಸಂಪತ್ತು ಮೀನುಗಾರ ಬಲೆಗೆ ಬೀಳಲಿದೆ ಎಂದು ಕಾದು ನೋಡಬೇಕಿದೆ. ಈಗಷ್ಟೆ ಮೀನುಗಾರಿಕೆ ಆರಂಭವಾಗಿರುವುದರಿಂದ ಸ್ಪಷ್ಟವಾಗಿ ಏನನ್ನೂ ಹೇಳುವುದಕ್ಕೆ ಸಾಧ್ಯವಿಲ್ಲ’ ಎಂಬುದು ಹಿರಿಯ ಮೀನುಗಾರರ ಅಭಿಪ್ರಾಯವಾಗಿದೆ.

‘ಕಡಲಾಳದಲ್ಲಿ ತೂಫಾನ್ ಎದ್ದು ನೀರಿನ ಬದಲಾವಣೆಯಿಂದಾಗಿ ವಿವಿಧ ಜಾತಿಯ ಮೀನುಗಳು ತೀರದತ್ತ ಬಂದಲ್ಲಿ ಮಾತ್ರ ನಾಡದೋಣಿ ಮೀನುಗಾರಿಕೆಯಿಂದ ಉತ್ತಮ ಬೇಟೆ ಸಿಗುತ್ತದೆ. ಈ ಬಾರಿ ಚಂಡಮಾರುತದ ಪರಿಣಾಮದಿಂದ ತೂಫಾನ್ ಆಗಿದ್ದು, ಮಳೆಗಾಲದಲ್ಲಿ ಉಂಟಾಗುವ ನಿಜ ತೂಫಾನ್ ಏಳದಿರುವುದು ನಾಡದೋಣಿ ಮೀನುಗಾರರಲ್ಲಿ ನಿರಾಶೆ ಮೂಡಿಸಿದೆ. ಇದುವರೆಗೆ ಶೇ 25ರಷ್ಟು ದೋಣಿಗಳು ಮಾತ್ರ ಒಂದೆರಡು ಬಾರಿ ಸಮುದ್ರಕ್ಕೆ ತೆರಳಿದ್ದು, ಅಲ್ಪಸ್ವಲ್ಪ ಮೀನಿನೊಂದಿಗೆ ವಾಪಾಸಾಗಿದ್ದವು. ಈ ಬಾರಿ ಮಳೆ ಸಾಕಷ್ಟು ಬಂದರೂ ಕೂಡಾ ನೆರೆ ನೀರು ಪೂರ್ಣ ಪ್ರಮಾಣದಲ್ಲಿ ಸಮುದ್ರಕ್ಕೆ ಸೇರಿಲ್ಲ. ರಭಸವಾಗಿ ಬರುವ ನೆರೆ ನೀರಿನೊಂದಿಗೆ ಬಂದ ತ್ಯಾಜ್ಯ ಸಮುದ್ರ ಸೇರುವಾಗ ಮೀನುಗಳು ಆಹಾರವನ್ನು ಅರಸಿ ಸಮುದ್ರ ತೀರಕ್ಕೆ ಬರುತ್ತವೆ. ಆಗ ಮಾತ್ರ ಮತ್ಸ್ಯ ಸಂಪತ್ತು ಹೇರಳವಾಗಿ ಸಿಗುತ್ತದೆ’ ಎನ್ನುತ್ತಾರೆ ಹಿರಿಯ ಮೀನುಗಾರ ವಾಸು ಕಾಂಚನ್ ಮಲ್ಪೆ.

ನಾಡದೋಣಿಗಳು ಕಡಲಿಗಿಳಿಯದಿದ್ದರೆ ಮೀನುಗಾರರ ಬದುಕು ದುಸ್ತರ

ಕರಾವಳಿಯಾದ್ಯಂತ ನೂರಕ್ಕೂ ಅಧಿಕ ನಾಡದೋಣಿ ಸಮೂಹಗಳು ಸಹಕಾರಿ ತತ್ವದಡಿ ಮಳೆಗಾಲದ ಮೀನುಗಾರಿಕೆಯಲ್ಲಿ ನಿರತರಾಗಿದ್ದು, ಒಂದು ಸಮೂಹದಲ್ಲಿ 30ರಿಂದ 60 ಮಂದಿ ಕೆಲಸಮಾಡುತ್ತಾರೆ. ಮಳೆಗಾಲದ ನಾಡದೋಣಿ ಮೀನುಗಾರಿಕೆ ವ್ಯವಸ್ಥೆಯಲ್ಲಿ ಲಾಭ, ನಷ್ಟವನ್ನು ಎಲ್ಲರೂ ಸಮನಾಗಿ ಹಂಚಿಕೊಳ್ಳುವ ಪರಿಪಾಠವಿದೆ.

ಉಡುಪಿ ತಾಲ್ಲೂಕಿನಲ್ಲಿ ನಾಡದೋಣಿ ಮೀನುಗಾರಿಕೆಯನ್ನು ನಡೆಸುವ 40ಕ್ಕೂ ಅಧಿಕ (ಡಿಸ್ಕೋಫಂಡ್) ತಂಡಗಳು ಇವೆ. ಇದರೊಂದಿಗೆ ಕಂತಲೆ, ಪಟ್ಟಬಲೆ, ಟ್ರಾಲ್, ಕೈರಂಪಣಿ ಮೂಲಕ ತೀರಾ ಹಳೆಯ ಸಾಂಪ್ರದಾಯಿಕ ವಿಧಾನದಲ್ಲೂ ಮೀನುಗಾರಿಕೆ ನಡೆಸಲಾಗುತ್ತದೆ. ಇವೆಲ್ಲವೂ ಗುರುವಾರದಿಂದ ಚುರುಕುಗೊಂಡಿದ್ದು, ಸಮುದ್ರ ಮೀನುಗಾರಿಕೆ ನಡೆಸಲು ಸನ್ನದ್ಧವಾಗಿವೆ.

ನಾಡದೋಣಿ ಮೀನುಗಾರಿಕೆ ಕಟಪಾಡಿ ಮಟ್ಟು, ಕೈಪುಂಜಾಲ್, ಪಡುಬಿದ್ರೆ ಉಚ್ಚಿಲ, ಕಾಪು, ಉದ್ಯಾವರ, ಮಲ್ಪೆ, ತೊಟ್ಟಂ, ಹೂಡೆ ಬೆಂಗ್ರೆ, ಗಂಗೊಳ್ಳಿವರೆಗೆ ಹರಡಿಕೊಂಡಿದೆ. 50 ವರ್ಷಗಳ ಹಿಂದೆ ಯಾಂತ್ರಿಕ ದೋಣಿಗಳು ಕಾಲಿಡುವ ಮುಂಚೆ ಕರಾವಳಿಯುದ್ದಕ್ಕೂ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಮಾತ್ರ ಅಸ್ತಿತ್ವದಲ್ಲಿತ್ತು. ಈಗ ನಾಡದೋಣಿ ಮೀನುಗಾರಿಕೆ ಯಾಂತ್ರಿಕ ಮೀನುಗಾರಿಕೆಯ ನಿಷೇಧ ಅವಧಿಯಲ್ಲಿ ಎರಡು ತಿಂಗಳು ಮಾತ್ರ ಚಾಲ್ತಿಯಲ್ಲಿದೆ. ಪ್ರಕೃತಿ ಮುನಿದರೆ ಅದೂ ಇಲ್ಲ. ಮಳೆಗಾಲದಲ್ಲಿ ಸಾಂಪ್ರದಾಯಿಕ ನಾಡದೋಣಿಗಳು ಕಡಲಿಗಿಳಿಯದಿದ್ದರೆ ಮೀನುಗಾರರ ಬದುಕು ಬಲು ದುಸ್ತರ ಎನ್ನುತ್ತಾರೆ ಮೀನುಗಾರ ಕಿಶೋರ್ ಕಾಂಚನ್ ಮಟ್ಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.