ADVERTISEMENT

ಮಳೆಗಾಲದ ಕಡಲಿನ ಸೌಂದರ್ಯ ಸವಿಯಲು ಸೀವಾಕ್‌ನತ್ತ ಪ್ರವಾಸಿಗರ ಲಗ್ಗೆ

ಬಾಲಚಂದ್ರ ಎಚ್.
Published 29 ಜೂನ್ 2019, 19:45 IST
Last Updated 29 ಜೂನ್ 2019, 19:45 IST
ಮಲ್ಪೆಯ ಸೀವಾಕ್‌ನ ಒಂದು ನೋಟ
ಮಲ್ಪೆಯ ಸೀವಾಕ್‌ನ ಒಂದು ನೋಟ   

ಉಡುಪಿ: ಕಡಲು ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆಯಲ್ಲಿ ಮಲ್ಪೆ ಬೀಚ್‌ಗಳಿಯಲು ಪ್ರವಾಸಿಗರಿಗೆ ನಿಷೇಧವಿದೆ. ಆದರೆ, ಸೀ ವಾಕ್‌ ಸೌಂದರ್ಯ ಸವಿಯಲು ಅಡ್ಡಿಯಿಲ್ಲ.

ವಾರಾಂತ್ಯದಲ್ಲಿ ಪ್ರವಾಸಿಗರ ದಂಡು:ವಾರಾಂತ್ಯ ಬಂದರೆ ಸೀವಾಕ್ ಪ್ರವಾಸಿಗರಿಂದ ತುಂಬಿಹೋಗುತ್ತದೆ. ಶಾಲಾ ಕಾಲೇಜು, ಕಚೇರಿಗಳಿಗೆ ರಜೆ ಇರುವ ಕಾರಣ ಕುಟುಂಬ ಸಮೇತವಾಗಿ ಸೀವಾಕ್‌ನ ಸೌಂದರ್ಯ ಸವಿಯಲು ಬೀಚ್‌ಗೆ ಲಗ್ಗೆ ಇಡುತ್ತಾರೆ. ಮಳೆ ಬಿಡುವುಕೊಟ್ಟರಂತೂ ಕಾಲಿಡಲು ಜಾಗವಿಲ್ಲದಷ್ಟು ಪ್ರವಾಸಿಗರು ತುಂಬಿರುತ್ತಾರೆ.

ಭೋರ್ಗರೆಯುವ ಕಡಲು:ಕಡಲು ಭೋರ್ಗರೆಯುವ ದೃಶ್ಯವನ್ನು ಕಣ್ತುಂಬಿಕೊಳ್ಳುವುದು ರೋಚಕ ಅನುಭವ. ಮಳೆಗಾಲದಲ್ಲಿ ಮಾತ್ರ ಇಂತಹ ಅನುಭವ ಪ್ರವಾಸಿಗರಿಗೆ ಸಿಗುತ್ತದೆ. ದೈತ್ಯ ಅಲೆಗಳು ಕಡಲಿನ ದಂಡೆಗೆ ಬಂದು ಅಪ್ಪಳಿಸುವ ರಮಣೀಯ ದೃಶ್ಯವನ್ನು ಈ ಅವಧಿಯಲ್ಲಿ ಆಸ್ವಾದಿಸಬಹುದು. ಹಾಗಾಗಿ, ಸಮುದ್ರಕ್ಕಿಳಿಯಲು ಅವಕಾಶ ಸಿಗದಿದ್ದರೂ ಸಮುದ್ರದೊಳಗೆ ನಿಂತು ಕಡಲಿನ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಸೀವಾಕ್‌ನತ್ತ ಮುಗಿಬೀಳುತ್ತಾರೆ.

ADVERTISEMENT

ಸಮುದ್ರದ ಮಧ್ಯೆ ಸಾಗುವಂಥ ಅನುಭವ:ಮಲ್ಪೆಯ ಸೇಂಟ್‌ ಮೇರಿಸ್ ಐಲ್ಯಾಂಡ್‌ನಂತೆಯೇ ಸೀವಾಕ್ ಕೂಡ ಪ್ರಸಿದ್ಧ ಪ್ರವಾಸಿ ಸ್ಥಳ. ಸಮುದ್ರವನ್ನು ಸೀಳಿ ಸಾಗುವಂತಹ ಅನುಭವ ಇಲ್ಲಿ ಸಿಗುತ್ತದೆ. ನಡೆದಾಡಲು ಅನುಕೂಲವಾಗುವಂತೆ ಮೂರು ಮೀಟರ್ ಅಗಲ ಹಾಗೂಸುಮಾರು 480 ಮೀಟರ್ ಉದ್ದವಾಗಿ ಸೀವಾಕ್ ನಿರ್ಮಾಣ ಮಾಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಎರಡೂ ಬದಿಗಳಲ್ಲಿ ಕಲ್ಲಿನ ರಾಶಿಹಾಕಲಾಗಿದೆ.

ಸಂಜೆ ಪ್ರವಾಸಿಗರು ಹೆಚ್ಚು:ಸಂಜೆಯಾಗುತ್ತಿದ್ದಂತೆ ಸೀವಾಕ್‌ ಪ್ರವಾಸಿಗರಿಂದ ತುಂಬಿಹೋಗುತ್ತದೆ. ಸ್ಥಳೀಯರು ಕೂಡ ಸಂಜೆಯ ಹೊತ್ತು ಇಲ್ಲಿಗೆ ವಾಕ್ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಕುಟುಂಬ ಸಮೇತ ಸೀವಾಕ್‌ನಲ್ಲಿ ಸಾಗುತ್ತಾ ಕಡಲನ್ನು ಆಸ್ವಾದಿಸುವುದು ಸುಂದರ ಅನುಭವ ಎನ್ನುತ್ತಾರೆ ಗೃಹಿಣಿ ಸರಸ್ವತಿ ಭಟ್‌.

ಒಂದಾದ ಮೇಲೊಂದರಂತೆ ಬಂದು ಅಪ್ಪಳಿಸುವ ಅಲೆಗಳನ್ನು ನೋಡುತ್ತಿದ್ದರೆ ತುಂಬಾ ಖುಷಿಯಾಗುತ್ತದೆ. ಜತೆಗೆ, ಸಂಜೆಯ ತಂಪಾದ ಗಾಳಿ ಮನಸ್ಸು ಹಾಗೂ ದೇಹಕ್ಕೆ ಆಹ್ಲಾದ ನೀಡುತ್ತದೆ. ಸಂಜೆಯ ಸೂರ್ಯಾಸ್ತಮಾನವನ್ನು ವೀಕ್ಷಣೆ ಅದ್ಭುತ ಅನುಭವ ಎನ್ನುತ್ತಾರೆ ಪ್ರವಾಸಿಗರಾದ ರಾಮಕೃಷ್ಣ.

ರಜೆಯ ಅವಧಿಯಲ್ಲಿ ಮನೆಗೆ ಬಂದ ಅತಿಥಿಗಳನ್ನು ಮಲ್ಪೆ ಬೀಚ್‌ಗೆ ಕರೆದೊಯ್ದು ನೀರಿನಲ್ಲಿ ಆಟವಾಡಿಸಲು ಅವಕಾಶವಿಲ್ಲ. ಹಾಗಾಗಿ, ಸೀ ವಾಕ್‌ಗೆ ಕರೆತಂದಿದ್ದೇವೆ. ಇಲ್ಲಿನ ಸೌಂದರ್ಯ ಎಲ್ಲರಿಗೂ ಇಷ್ಟವಾಯಿತು ಎಂದು ಸ್ಥಳೀಯರಾದ ವೆಂಕಟೇಶ್ ತಿಳಿಸಿದರು.

ಸೀವಾಕ್‌ನ ಅರ್ಧದಾರಿ ಕ್ರಮಿಸುತ್ತಿದ್ದಂತೆ ಶಿಲ್ಪಗಳು ಗಮನ ಸೆಳೆಯುತ್ತವೆ. ಮೀನಿನ ಬುಟ್ಟಿಯನ್ನು ಹೊತ್ತು ಮನೆಗೆ ತೆರಳುತ್ತಿರುವ ಮೀನುಗಾರ ಕುಟುಂಬದ ಚಿತ್ರಣವನ್ನು ಅದ್ಭುತವಾಗಿ ನಿರ್ಮಿಸಲಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ಈ ಶಿಲ್ಪದ ಮುಂದೆ ನಿಂತು ಸೆಲ್ಫಿ ತೆಗೆಸಿಕೊಳ್ಳುವುದನ್ನು ಮರೆಯುವುದಿಲ್ಲ.

ಮಲ್ಪೆಯ ಸೀವಾಕ್ ರಾಜ್ಯದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಸಮುದ್ರದ ಬ್ರೇಕ್‌ವಾಟರ್ ಮೇಲೆ ನಿರ್ಮಿಸಿರುವ ಸೀವಾಕ್‌ನ ಎರಡೂ ಬದಿಯಲ್ಲಿ ಕೂರಲು ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರು ಮನದಣಿಯುವಷ್ಟು ಕಾಲ ಕುಳಿತು ಕಡಲಿನ ಸೌಂದರ್ಯ ಸವಿಯಬಹುದು.

ಸಂಜೆ ಪ್ರವಾಸಿಗರು ಹೆಚ್ಚು
ಸಂಜೆಯಾಗುತ್ತಿದ್ದಂತೆ ಸೀವಾಕ್‌ ಪ್ರವಾಸಿಗರಿಂದ ತುಂಬಿಹೋಗುತ್ತದೆ. ಸ್ಥಳೀಯರು ಕೂಡ ಸಂಜೆಯ ಹೊತ್ತು ಇಲ್ಲಿಗೆ ವಾಕ್ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಕುಟುಂಬ ಸಮೇತ ಸೀವಾಕ್‌ನಲ್ಲಿ ಸಾಗುತ್ತಾ ಕಡಲನ್ನು ಆಸ್ವಾದಿಸುವುದು ಸುಂದರ ಅನುಭವ ಎನ್ನುತ್ತಾರೆ ಗೃಹಿಣಿ ಸರಸ್ವತಿ ಭಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.