
ಹೆಬ್ರಿ: ಪೆರ್ಡೂರು ಭೈರವನಾಥೇಶ್ವರ ಸೇವಾ ಸಮಿತಿ ವತಿಯಿಂದ ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ‘ಹಿರಿಯೆರೊಟ್ಟಿಗೊಂಜಿ ದಿನ’ ಕಾರ್ಯಕ್ರಮದಲ್ಲಿ ಜಿಲ್ಲೆಯ 60ರಿಂದ 96 ವರ್ಷ ವಯಸ್ಸಿನ ನೂರಾರು ಹಿರಿಯ ನಾಗರಿಕರು ಆಟವಾಡಿ, ಹಾಡಿ– ಕುಣಿದು ಸಂಭ್ರಮಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೆರ್ಡೂರು ಭೈರವನಾಥೇಶ್ವರ ಸೇವಾ ಸಮಿತಿ ಗೌರವಾಧ್ಯಕ್ಷ ಶಾಂತಾರಾಮ ಸೂಡ, ಇಂದು ಮುಂದುವರಿದ ಕುಟುಂಬಗಳಲ್ಲಿ ವೃದ್ಧಾಪ್ಯ ಶಾಪವಾಗಿ ಪರಿಣಮಿಸಿದೆ. ನೀರಸ ಜೀವನವಾಗಿ ಹೆಚ್ಚಿನವರು ಮನರಂಜನೆಯಿಂದ ವಂಚಿತರಾಗಿದ್ದಾರೆ. ಅಂತಹ ಹಿರಿಯರಿಗೆ ಜೀವನೋತ್ಸಾಹ ತುಂಬಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿವೆ. ನಮ್ಮ ಸಮಿತಿ ಸಮಾಜದ ಕೊರತೆಗಳನ್ನು ಗಮನದಲ್ಲಿರಿಸಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಹೊಸತನ ನೀಡುತ್ತಿರುವುದು ಸಂತಸದ ಸಂಗತಿ ಎಂದರು.
ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್ ಮಾತನಾಡಿ, ದೇವರ ನಂತರದ ಸ್ಥಾನ ಹೆತ್ತವರದು. ಅವರಿಗೆ ವೃದ್ಧಾಪ್ಯದಲ್ಲಿ ಮಕ್ಕಳಂತೆಯೇ ಪ್ರೀತಿ, ಕಾಳಜಿ ತೋರಿಸಬೇಕು. ಯೌವನದಿಂದ ವೃದ್ಧಾಪ್ಯಾದವರೆಗೂ ಜೀವನವಿಡಿ ಕುಟುಂಬದ ಸುಖ ಸಂತೋಷಕ್ಕಾಗಿ ನಿಸ್ವಾರ್ಥದಿಂದ ದುಡಿದು, ಬಾಳಿನ ಮುಸ್ಸಂಜೆಯಲ್ಲಿ ನಿಸ್ತೇಜರಾಗಿ ಬದುಕುವ ಪರಿಸ್ಥಿತಿ ಇಂದಿನ ಹೆಚ್ಚಿನ ಮನೆಗಳ ಹಿರಿಯರದ್ದಾಗಿದೆ. ಹಿರಿಯರು ತಮ್ಮಿಷ್ಟದಂತೆ ಬದುಕುವ ಸ್ವಾತಂತ್ರ್ಯ ಕಳೆದುಕೊಂಡಿದ್ದಾರೆ. ಇವುಗಳನ್ನು ಗಮನಿದಲ್ಲಿರಿಸಿ ಹಿರಿಯರೂ ಕಿರಿಯರಂತೆಯೇ ಸಂತಸ, ಸಂಭ್ರಮದಿಂದ ಕಾಲಕಳೆಯಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ನಾಟಿ ವೈದ್ಯರಾಗಿ ಸೇವೆ ಸಲ್ಲಿಸಿದ್ದ ರಾಧಾ ಶೆಟ್ಟಿ ಹೊಳಿಂಜೆ, ಸುಂದರಿ ಆಚಾರ್ಯ ಬುಕ್ಕಿಗುಡ್ಡೆ ಅವರನ್ನು ಸಮ್ಮಾನಿಸಲಾಯಿತು. ಹಿರಿಯ ನಾಗರಿಕರ ಜಾಗೃತಿಗಾಗಿ ಶ್ರಮಿಸುತ್ತಿರುವ ನಿತ್ಯಾನಂದ ಭಟ್ ಉಡುಪಿ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್, ಗೌರವಾಧ್ಯಕ್ಷ ಕೆ. ಶಾಂತಾರಾಮ ಸೂಡ, ಪ್ರಮುಖರಾದ ನಿತ್ಯಾನಂದ ಭಟ್, ಕಾರ್ಯದರ್ಶಿ ರವೀಂದ್ರ ನಾಡಿಗ್, ಜತೆ ಕಾರ್ಯದರ್ಶಿ ಸತೀಶ್ ಕುಲಾಲ್ ಭಾಗವಹಿಸಿದ್ದರು. ಪ್ರತಿಕ್ಷಾ ಕೋಟ್ಯಾನ್ ಪ್ರಾರ್ಥಿಸಿದರು. ಉಪೇಂದ್ರ ಆಚಾರ್ಯ ನಿರೂಪಿಸಿದರು. ಪ್ರಭಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.