ADVERTISEMENT

ಉಡುಪಿ: ಕಾಳಿಂಗ ಸರ್ಪಗಳ ಲಿಂಗಾನುಪಾತ ಕುಸಿತ !

ಪಶ್ಚಿಮಘಟ್ಟದಲ್ಲಿ ಆಗುಂಬೆ ಮಳೆಕಾಡು ಸಂಶೋಧನೆ ಕೇಂದ್ರದಿಂದ ಅಧ್ಯಯನ

ಪ್ರಜಾವಾಣಿ ವಿಶೇಷ
Published 17 ಅಕ್ಟೋಬರ್ 2019, 19:45 IST
Last Updated 17 ಅಕ್ಟೋಬರ್ 2019, 19:45 IST
ಕಾಳಿಂಗ ಸರ್ಪ
ಕಾಳಿಂಗ ಸರ್ಪ   

ಉಡುಪಿ: ಪಶ್ಚಿಮಘಟ್ಟದಲ್ಲಿ ಹಲವು ವರ್ಷಗಳಿಂದ ಕಾಳಿಂಗ ಸರ್ಪಗಳ ಅಧ್ಯಯನ ನಡೆಯುತ್ತಿದ್ದು, ಹಾವುಗಳ ಲಿಂಗಾನುಪಾತ ಪ್ರಮಾಣ ಕುಸಿತವಾಗಿರುವ ಶಂಕೆ ಮೂಡಿದೆ.

ಕಾಳಿಂಗ ಸರ್ಪಗಳ ಸಂಶೋಧನೆ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಯಾದ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರವು ಲಿಂಗಾನುಪಾತ ಕುಸಿತದ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.

ಕಾಡಂಜಿನಲ್ಲಿ ರಕ್ಷಣೆ ಮಾಡುವ 100 ಕಾಳಿಂಗಗಳ ಪೈಕಿ ಶೇ 94 ಗಂಡಾದರೆ, ಶೇ 6ರಷ್ಟು ಹೆಣ್ಣು ಕಂಡುಬರುತ್ತಿವೆ. ಇದಕ್ಕೆ ನಿಖವಾದ ಕಾರಣಗಳು ತಿಳಿದು ಬಂದಿಲ್ಲ. ಆದರೆ, ಲಿಂಗಾನುಪಾತ ವ್ಯತ್ಯಾಸವಾಗಲು ಕಾರಣ ಏನಿರಬಹುದು ಎಂಬ ಕುರಿತು ಅಧ್ಯಯನ ನಡೆಯುತ್ತಿದೆ ಎಂದು ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ಬೇಸ್ ಮ್ಯಾನೇಜರ್ ಜಯಕುಮಾರ್ ತಿಳಿಸಿದರು.

ADVERTISEMENT

ಗಂಡು ಕಾಳಿಂಗ ಸಾಮಾನ್ಯವಾಗಿ 7 ರಿಂದ 9 ಕೆ.ಜಿ ತೂಕವಿದ್ದರೆ, ಹೆಣ್ಣು 4 ಕೆ.ಜಿ ಆಸುಪಾಸಿನಲ್ಲಿರುತ್ತದೆ. ಹಾಗಾಗಿ, ಗಂಡಿನ ದಾಳಿಗೆ ಹೆಣ್ಣು ಬಲಿಯಾಗಿರುವ ಸಾಧ್ಯತೆಗಳಿವೆ. ಕಾಳಿಂಗ ಸ್ವಜಾತಿ ಭಕ್ಷಕ. ಕೇರೆ, ನಾಗರ ಹಾಗೂ ಇತರೆ ಹಾವುಗಳು ಸಿಗದಿದ್ದರೆ ಹೆಣ್ಣು ಹಾವನ್ನು ಗಂಡು ತಿಂದು ಹಾಕುತ್ತದೆ. ಇದೂ ಲಿಂಗಾನುಪಾತ ಕುಸಿತಕ್ಕೆ ಕಾರಣ ಇರಬಹುದು.

ಗಂಡು ಕಾಳಿಂಗ ಮಿಲನಕ್ಕೆ ಮಾತ್ರ ಹೆಣ್ಣನ್ನು ಹುಡುಕಿಕೊಂಡು ಹೋಗುತ್ತದೆ. ಉಳಿದ ಸಮಯದಲ್ಲಿ ಹೆಣ್ಣು ಹಾವನ್ನು ಭಕ್ಷಿಸುತ್ತದೆ. ಗಡಿ ಬಿಟ್ಟು ಬೇರೆಡೆಗೆ ಹೋದಾಗ ದಾಳಿ ನಡೆದು ಹೆಣ್ಣು ಹಾವುಗಳು ಮೃತಪಟ್ಟಿರಬಹುದು. ಹೀಗೆ, ಹಲವು ಕೋನಗಳಿಂದ ಅಧ್ಯಯನ ನಡೆಯುತ್ತಿದೆ ಎಂದು ಅವರು ವಿವರಿಸಿದರು.

ಸಾಮಾನ್ಯವಾಗಿ ಮೊಟ್ಟೆಯೊಡೆದು 30 ಕಾಳಿಂಗ ಮರಿಗಳು ಹೊರಬಂದರೆ, ಕೊನೆಗೆ ಒಂದೆರಡು ಮಾತ್ರ ಬದುಕುಳಿಯುತ್ತವೆ. ಉಳಿದವು ಗೂಬೆ, ಕಾಡು ಕೋಳಿ, ಕೆಂಭೂತಗಳ ಪಾಲಾಗುತ್ತವೆ. ಕೆಲವೊಮ್ಮೆ ತಾಯಿ ಹಾವು ಮರಿಗಳನ್ನು ತಿನ್ನುತ್ತವೆ ಎಂದು ಆಹಾರ ಸರಪಳಿಯ ಕುರಿತು ಮಾಹಿತಿ ನೀಡಿದರು.

ಪಿಟ್‌ ಟ್ಯಾಗ್ ಅಳವಡಿಕೆ:ಕಾಳಿಂಗಗಳ ಕ್ಷೇತ್ರ, ಆಹಾರ ಪದ್ಧತಿ, ಸಂತಾನಾಭಿವೃದ್ಧಿ ಸೇರಿದಂತೆ ಸಮಗ್ರ ಅಧ್ಯಯನಕ್ಕೆ ಹಾವುಗಳ ದೇಹಕ್ಕೆ ಪಿಟ್‌ ಟ್ಯಾಗ್ ಅಳವಡಿಕೆ ನಡೆಯುತ್ತಿದೆ. ಪಶ್ಚಿಮಘಟ್ಟ ವ್ಯಾಪ್ತಿಯ 6 ಜಿಲ್ಲೆಗಳಲ್ಲಿ ಪಿಟ್‌ ಟ್ಯಾಗ್ ಅಳವಡಿಕೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದೆ ಎಂದು ಜಯಕುಮಾರ್ ತಿಳಿಸಿದರು.

ಪಿಟ್‌ ಟ್ಯಾಗ್‌ ಆಧಾರ್ ಕಾರ್ಡ್‌ ಮಾದರಿಯಲ್ಲಿ ಯುನಿಕ್‌ ಐಡೆಂಟಿಟಿ ಸಂಖ್ಯೆಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಹಾವುಗಳ ತೂಕ, ಗಾತ್ರ, ಕ್ಷೇತ್ರವ್ಯಾಪ್ತಿ ಸೇರಿದಂತೆ ಸಮಗ್ರ ಮಾಹಿತಿ ಸೇರಿಸಲಾಗಿರುತ್ತದೆ. ದೊಡ್ಡ ಜೀರಿಗೆ ಕಾಳಿನಷ್ಟು ಗಾತ್ರದ ಟ್ಯಾಗ್ ಅನ್ನು ಹಾವಿನ ಬಾಲದ ಕೆಳಭಾಗಕ್ಕೆ ಸಿರಿಂಜ್ ಮೂಲಕ ಸೇರಿಸಲಾಗುತ್ತದೆ.

ಬಳಿಕಕಾಡಿನೊಳಗೆ ಬಿಡಲಾಗುತ್ತದೆ. ಹಾವು ಕಾಡಿನಲ್ಲಿ ಎಷ್ಟು ದೂರ ಚಲಿಸುತ್ತದೆ. ಸಂತಾನೋತ್ಪತ್ತಿಗೆ ಯಾವ ಪ್ರದೇಶವನ್ನು ಆಶ್ರಯಿಸುತ್ತದೆ. ಗುಣ ಲಕ್ಷಣ, ಆಹಾರ ಪದ್ಧತಿ ಹೀಗೆ ಹಲವು ವಿಚಾರಗಳನ್ನು ಅಧ್ಯಯನ ಮಾಡಬಹುದು.ಈಗಾಗಲೇ 182 ಹಾವುಗಳಿಗೆ ಅಳವಡಿಸಲಾಗಿದೆ. ಈ ಚಿಪ್‌ಗಳ ಅಳವಡಿಕೆಯಿಂದ ಹಾನಿಯಿಲ್ಲ ಎಂದು ತಿಳಿಸಿದರು.

‘ಹಾವುಗಳ ಗಣತಿ ಸಾಧ್ಯ’
ಪಿಟ್‌ ಟ್ಯಾಗ್‌ ಅಳವಡಿಕೆಯಿಂದ ಕಾಳಿಂಗಗಳ ಗಣತಿ ಸುಲಭ. ಚಿಪ್‌ ಅಳವಡಿಸಿರುವ ಹಾವು ಪಶ್ಚಿಮಘಟ್ಟದ ಯಾವುದೇ ಭಾಗದಲ್ಲಿ ಸಿಕ್ಕರೂ ಅದರ ದೇಹ ಸ್ಕ್ಯಾನ್ ಮಾಡಿದಾಗ ಸಂಪೂರ್ನ ವಿವರ ಲಭ್ಯವಾಗುತ್ತದೆ. ಚಿಪ್ ಇಲ್ಲವಾದರೆ, ಹೊಸದಾಗಿ ಅಳವಡಿಸಬಹುದು. ಇದರಿಂದ ಸುಲಭವಾಗಿ ಗಣತಿ ಮಾಡಬಹುದು. ಈಗಾಗಲೇ ವಿದೇಶಗಳಲ್ಲಿ ಪ್ರಾಣಿ, ಪಕ್ಷಿಗಳ ಗಣತಿಗೆ ಈ ಮಾದರಿಯನ್ನು ಬಳಸಲಾಗುತ್ತಿದೆ ಎಂದು ಜಯಕುಮಾರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.