ADVERTISEMENT

ಉಡುಪಿ | ಶಂಕರಪುರ ಮಲ್ಲಿಗೆ: ಇಳುವರಿ ಕುಸಿತ

ಹಬ್ಬದ ಋತುವಲ್ಲಿ ಏರಿಕೆಯಾದ ದರ: ಮಳೆ ತಂದ ಸಮಸ್ಯೆ

ನವೀನ್ ಕುಮಾರ್ ಜಿ.
Published 23 ಸೆಪ್ಟೆಂಬರ್ 2025, 5:11 IST
Last Updated 23 ಸೆಪ್ಟೆಂಬರ್ 2025, 5:11 IST
ಶಂಕರಪುರ ಮಲ್ಲಿಗೆ
ಶಂಕರಪುರ ಮಲ್ಲಿಗೆ   

ಉಡುಪಿ: ಕರಾವಳಿಯಲ್ಲಿ ಪ್ರಸಿದ್ಧಿ ಪಡೆದಿರುವ ಉಡುಪಿಯ ಶಂಕರಪುರ ಮಲ್ಲಿಗೆ ಬೆಳೆಗಾರರು ಈ ಬಾರಿ ಹಬ್ಬದ ಋತುವಲ್ಲಿಯೇ ಇಳುವರಿ ಕುಸಿತದಿಂದಾಗಿ ಸಂಕಷ್ಟಕ್ಕೊಳಗಾಗಿದ್ದಾರೆ.

ನವರಾತ್ರಿ ಹಬ್ಬ ಆರಂಭವಾಗುತ್ತಿದ್ದಂತೆ ಒಂದು ಅಟ್ಟಿ ಶಂಕರಪುರ ಮಲ್ಲಿಗೆಯ ದರ ₹2,100 ಕ್ಕೆ ಏರಿಕೆಯಾಗಿದೆ. ಆದರೆ ಗಿಡಗಳಲ್ಲಿ ಮಲ್ಲಿಗೆ ಮೊಗ್ಗುಗಳೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಬೆಳೆಗಾರರು.

ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಮಲ್ಲಿಗೆ ಗಿಡಗಳ ಬುಡದಲ್ಲಿ ಮಳೆ ನೀರು ನಿಂತು ಗಿಡಗಳ ಕಾಂಡ ಕೊಳೆತು ಇಳುವರಿ ಕುಸಿತವಾಗಿದೆ. ಕೆಲವೆಡೆ ಗಿಡಗಳೇ ನಾಶವಾಗಿವೆ ಎಂದೂ ಹೇಳುತ್ತಾರೆ.

ADVERTISEMENT

ಶಂಕರಪುರ ಮಲ್ಲಿಗೆಗೆ ಕರಾವಳಿಯಲ್ಲಿ ಹೆಚ್ಚಿನ ಬೇಡಿಕೆ ಇದೆ. ದೇವಾಲಯಗಳಲ್ಲಿ ದೇವರ ಅಲಂಕಾರಕ್ಕೆ, ಧಾರ್ಮಿಕ ಸಮಾರಂಭಗಳು, ಮದುವೆ, ಹಬ್ಬ ಹರಿದಿನಗಳಲ್ಲೂ ಇಲ್ಲಿನ ಜನರು ಈ ಮಲ್ಲಿಗೆಯನ್ನೇ ಬಳಸುತ್ತಾರೆ.

ಬೆಂಗಳೂರು, ಮುಂಬೈ ಸೇರಿದಂತೆ ಕರಾವಳಿಯವರು ನೆಲೆಸಿರುವ ಕಡೆಗಳಲ್ಲೂ ಶಂಕರಪುರ ಮಲ್ಲಿಗೆಗೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆಗೆ ಅನುಗುಣವಾಗಿ ಇಲ್ಲಿನ ಮಾರಾಟಗಾರರು ಮಲ್ಲಿಗೆಯನ್ನು ಕಳುಹಿಸಿಕೊಡುತ್ತಾರೆ.

ಈ ಬಾರಿ ಮಲ್ಲಿಗೆ ಹೂವುಗಳ ಇಳುವರಿ ತೀರಾ ಕುಸಿತವಾಗಿರುವ ಕಾರಣಕ್ಕೆ ಬೆಲೆ ಏರಿಕೆಯಾಗಿದೆ. ದೇವರ ಅಲಂಕಾರಕ್ಕೂ ಶಂಕರಪುರ ಮಲ್ಲಿಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಮಲ್ಲಿಗೆ ಕೃಷಿಕ ರಾಮಕೃಷ್ಣ ಶರ್ಮ ಬಂಟಕಲ್ಲು.

ಶಂಕರಪುರ ಮಲ್ಲಿಗೆಯನ್ನು ಬಾಳೆದಿಂಡಿನ ನಾರು ಬಳಸಿ, ಮೊಗ್ಗುಗಳನ್ನು ಕಟ್ಟಲಾಗುತ್ತದೆ ಈ ಕಾರಣಕ್ಕೆ ದೇವಾಲಯಗಳಲ್ಲಿ ದೇವರ ಅಲಂಕಾರಕ್ಕಾಗಿ ಈ ಮಲ್ಲಿಗೆಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎನ್ನುತ್ತಾರೆ ಅವರು.

ಹಬ್ಬದ ಋತುಗಳನ್ನು ಬಿಟ್ಟು ಉಳಿದ ಸಂದರ್ಭಗಳಲ್ಲಿ ಅಟ್ಟಿ ಮಲ್ಲಿಗೆಯ ದರ ₹500 ರಿಂದ 800 ರ ನಡುವೆ ಇರುತ್ತದೆ. ಸುಮಾರು 800 ಮೊಗ್ಗುಗಳಿರುವ ಗುಚ್ಛಕ್ಕೆ ಒಂದು ಚೆಂಡು ಎಂದು ಕರೆಯಲಾಗುತ್ತದೆ. ಇಂತಹ ನಾಲ್ಕು ಜನ ಸೇರಿ ಒಂದು ಅಟ್ಟಿಯಾಗುತ್ತದೆ.

‘ಹೂವಿನ ಕೊರತೆಯಿಂದಾಗಿ ಈ ಬಾರಿ ಪಿತೃಪಕ್ಷದಲ್ಲೇ ಶಂಕರಪುರ ಮಲ್ಲಿಗೆಯ ದರ ಅಟ್ಟಿಗೆ ₹2,100 ಇತ್ತು. ಬೇಡಿಕೆ ಜಾಸ್ತಿ ಇದೆ, ಆದರೆ ಮಲ್ಲಿಗೆ ಸಿಗುತ್ತಿಲ್ಲ’ ಎನ್ನುತ್ತಾರೆ ಶಂಕರಪುರದ ಮಲ್ಲಿಗೆ ಮಾರಾಟಗಾರ ಆರಿಫ್‌.

ಬಿಸಿಲಿನ ವಾತಾವರಣವಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಮಲ್ಲಿಗೆ ಸಿಗುತ್ತದೆ. ಈ ಬಾರಿ ಮಳೆಗಾಲದಲ್ಲಿ ಬಿಸಿಲೇ ಕಾಣದೆ ಮಲ್ಲಿಗೆ ಇಳುವರಿ ಕುಸಿದಿದೆ.
-ರಾಮಕೃಷ್ಣ ಶರ್ಮ, ಬಂಟಕಲ್ಲು ಮಲ್ಲಿಗೆ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.