ADVERTISEMENT

‘ನಮ್ಮ ಮಠದ ಪಟ್ಟದ ದೇವರನ್ನು ನಮಗೆ ಕೊಟ್ಟುಬಿಡಿ’

ಉಡುಪಿ ಶೀರೂರು ಮಠ ವಿವಾದ

ಪೃಥ್ವಿರಾಜ್ ಎಂ ಎಚ್
Published 6 ಜುಲೈ 2018, 10:48 IST
Last Updated 6 ಜುಲೈ 2018, 10:48 IST
ಉಡುಪಿ ಪರ್ಯಾಯ ಸಮಾರಂಭದಲ್ಲಿ ಅಷ್ಟಯತಿಗಳು... ಉಡುಪಿ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು, ಪೇಜಾವರ ಮಠದ ವಿಶ್ವೇಶ ತೀರ್ಥರು, ಸೋದೆ ಮಠದ ವಿಶ್ವೋತ್ತಮ ತೀರ್ಥರು, ಶಿರೂರು ಮಠದ ಲಕ್ಷ್ಮೀವರ ತೀರ್ಥರು, ಪಲಿಮಾರುಮಠದ ವಿದ್ಯಾಧೀಶ ತೀರ್ಥರು, ಕಾಣಿಯೂರು ಮಠದ ವಿಶ್ವಪ್ರಿಯ ತೀರ್ಥರು (ಚಿತ್ರ: ಪ್ರಜಾವಾಣಿ ಸಂಗ್ರಹ)
ಉಡುಪಿ ಪರ್ಯಾಯ ಸಮಾರಂಭದಲ್ಲಿ ಅಷ್ಟಯತಿಗಳು... ಉಡುಪಿ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು, ಪೇಜಾವರ ಮಠದ ವಿಶ್ವೇಶ ತೀರ್ಥರು, ಸೋದೆ ಮಠದ ವಿಶ್ವೋತ್ತಮ ತೀರ್ಥರು, ಶಿರೂರು ಮಠದ ಲಕ್ಷ್ಮೀವರ ತೀರ್ಥರು, ಪಲಿಮಾರುಮಠದ ವಿದ್ಯಾಧೀಶ ತೀರ್ಥರು, ಕಾಣಿಯೂರು ಮಠದ ವಿಶ್ವಪ್ರಿಯ ತೀರ್ಥರು (ಚಿತ್ರ: ಪ್ರಜಾವಾಣಿ ಸಂಗ್ರಹ)    

ಬೆಂಗಳೂರು:ಕೃಷ್ಣನ ಮುದ್ದುಮುಖ, ಮಧ್ವಸರೋವರ, ಅಷ್ಟಮಠಗಳು ಮತ್ತು ಕನಕದಾಸರ ನೆನಪನ್ನು ಹೊರತುಪಡಿಸಿದ ಉಡುಪಿಯ ಚಿತ್ರಣ ಅಪೂರ್ಣ. ಇದೀಗ ಉಡುಪಿ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಈ ಪಟ್ಟಿಗೆ ಹೊಸ ಸೇರ್ಪಡೆ ‘ಶೀರೂರು ಮಠದ ಪಟ್ಟದ ದೇವರ ಪೂಜೆ ಯಾರು ಮಾಡಬೇಕು’ ಎನ್ನುವ ವಿವಾದ. ‘ನಮ್ಮ ಮಠದ ದೇವರನ್ನು ನಮಗೆ ವಾಪಸ್ ಕೊಡಿ’ ಎಂದು ಕೇಳುತ್ತಿರುವ ಶೀರೂರು ಮಠದ ಲಕ್ಷ್ಮೀವರ ತೀರ್ಥರು ಇದೀಗ ನ್ಯಾಯಾಲಯಕ್ಕೆ ‘ಕೇವಿಯಟ್’ ಸಲ್ಲಿಸುವ ಮೂಲಕ ಸುದ್ದಿಯ ಕೇಂದ್ರವಾಗಿದ್ದಾರೆ. ಈ ವಿವಾದ ಸಮಗ್ರ ಚಿತ್ರಣ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

ಶೀರೂರು ಮಠದ ಲಕ್ಷ್ಮೀವರ ತೀರ್ಥರು

ಏನಿದು ವಿವಾದ?

‘ಆರೋಗ್ಯ ಸಮಸ್ಯೆಯಿಂದಾಗಿ ನನಗೆ ಪಟ್ಟದ ದೇವರ ಪೂಜೆ ಮಾಡಲು ಸಾಧ್ಯವಿಲ್ಲ’ ಎಂದು ಶೀರೂರು ಮಠದ ಲಕ್ಷ್ಮೀವರ ತೀರ್ಥರು ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ತೀರ್ಥರಿಗೆ ತಮ್ಮ ಮಠದ ಪಟ್ಟದ ದೇವರುಗಳ ವಿಗ್ರಹಗಳನ್ನು ಪೂಜಿಸಲು ಕೊಟ್ಟಿದ್ದರು. ನಂತರದ ದಿನಗಳಲ್ಲಿ ಈ ವಿಗ್ರಹಗಳಿಗೆ ಕೃಷ್ಣಮಠದಲ್ಲಿ ಪೂಜೆ ನಡೆಯುತ್ತಿತ್ತು. ಲಕ್ಷ್ಮೀವರ ತೀರ್ಥರು ತಮ್ಮ ಆರೋಗ್ಯ ಸುಧಾರಿಸಿದ ಬಳಿಕ ದೇವರ ಮೂರ್ತಿಗಳನ್ನು ಹಿಂದಿರುಗಿಸಲು ಕೇಳಿದ್ದರು.‘ಲಕ್ಷ್ಮೀವರ ತೀರ್ಥರು ಯತಿಧರ್ಮ ಪಾಲಿಸುತ್ತಿಲ್ಲ’ ಎಂದು ದೂರಿರುವ ಇತರ ಯತಿಗಳು, ‘ಶಿಷ್ಯ ಸ್ವೀಕಾರ ಮಾಡದ ಹೊರತು ದೇವರ ವಿಗ್ರಹಗಳನ್ನು ವಾಪಸ್ ಕೊಡುವುದಿಲ್ಲ’ ಎಂದು ಷರತ್ತು ವಿಧಿಸಿದ್ದರು. ಈ ವಿಚಾರ ಈಗ ವಿವಾದವಾಗಿ ಬೆಳೆದಿದೆ. ನ್ಯಾಯಾಲಯದ ಮೆಟ್ಟಿಲು ಹತ್ತಿದೆ.

ADVERTISEMENT

ಕೇವಿಯಟ್ ಏಕೆ?

‘ಪಟ್ಟದ ದೇವರನ್ನು ಹಸ್ತಾಂತರಿಸುವ ವಿಚಾರದಲ್ಲಿ ನ್ಯಾಯಾಲಯದಲ್ಲಿ ಇತರ ಯತಿಗಳು ದಾವೆ ಹೂಡಿದಲ್ಲಿ ಏಕಪಕ್ಷೀಯ ಆದೇಶ ಹೊರಡಿಸಬಾರದು’ ಎಂದು ಉಡುಪಿ ನ್ಯಾಯಾಲಯಕ್ಕೆ ಲಕ್ಷ್ಮೀವರ ತೀರ್ಥರು ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ. ಪೇಜಾವರ ಮಠದ ವಿಶ್ವೇಶ ತೀರ್ಥರು, ವಿಶ್ವಪ್ರಸನ್ನ ತೀರ್ಥರು, ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು, ಸೋದೆ ಮಠದ ವಿಶ್ವವಲ್ಲಭ ತೀರ್ಥರು, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು, ಅದಮಾರು ಮಠದ ವಿಶ್ವಪ್ರಿಯ ತೀರ್ಥರು ಹಾಗೂ ಈಶಪ್ರಿಯ ತೀರ್ಥರನ್ನು ಪ್ರತಿವಾದಿಗಳು ಎಂದು ಉಲ್ಲೇಖಿಸಲಾಗಿದೆ. ಇದೇ 23ರಿಂದ ಚಾತುರ್ಮಾಸ್ಯ ಆರಂಭವಾಗಲಿದೆ. ಅಷ್ಟರೊಳಗೆ ವಿವಾದ ಇತ್ಯರ್ಥವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಭಕ್ತರು ಈ ಬೆಳವಣಿಗೆಯನ್ನು ಅಚ್ಚರಿಯಿಂದ ಗಮನಿಸುತ್ತಿದ್ದಾರೆ.

ಪಟ್ಟದ ದೇವರು ಎಂದರೆ ಏನು?

ಮಾಧ್ವಮಠಗಳ ಪೀಠಾಧೀಶರು ದೇವರ ಪೂಜೆ ಮಾಡುವಾಗ ತಮ್ಮ ಮಠಗಳ ಪರಂಪರೆಯ ಭಾಗವಾಗಿರುವಕೆಲ ನಿರ್ದಿಷ್ಟ ವಿಗ್ರಹಗಳನ್ನು ಪಟ್ಟದ ದೇವರು ಎಂದು ಗೌರವಿಸುವುದು ವಾಡಿಕೆ. ಸ್ವಾಮಿಗಳು ಪೂಜೆ ಮಾಡುವ ಪೂಜಾಮಂಟಪದಲ್ಲಿ ಈ ವಿಗ್ರಹಗಳು ಉಚ್ಚಸ್ಥಾನದ ಗೌರವ ಪಡೆಯುತ್ತವೆ. ಭಕ್ತರ ಮನಸಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತವೆ. ಸಾಮಾನ್ಯವಾಗಿ ಈ ವಿಗ್ರಹಗಳಿಗೆ ‘ಮಧ್ವಾಚಾರ್ಯ ಕರಾರ್ಚಿತ’ ಎನ್ನುವ ಹೆಚ್ಚುಗಾರಿಕೆಯ ಗೌರವ, ಭಾವಾನಾತ್ಮಕ ನಂಟು ಇರುತ್ತದೆ. ಇವು ಮಧ್ವಾಚಾರ್ಯರು ಆಯಾ ಮಠಗಳ ಮೂಲಪುರುಷರಿಗೆ ಆಶೀರ್ವದಿಸಿಕೊಟ್ಟ ವಿಗ್ರಹಗಳು’ ಎನ್ನುವುದು ಭಕ್ತರು ನಂಬಿಕೆ. ಪೀಠಾಧಿಪತಿಗಳಿಗೆ ಅನಾರೋಗ್ಯ ಮೊದಲಾದ ಅನಿವಾರ್ಯ ತೊಂದರೆಗಳು ಕಾಣಿಸಿಕೊಂಡಾಗ ಆಯಾ ಮಠಗಳ ಕಿರಿಯ ಯತಿಗಳು ಪಟ್ಟದ ದೇವರ ಪೂಜೆ ಮಾಡುತ್ತಾರೆ. ಕಿರಿಯ ಯತಿಗಳು ಇಲ್ಲದಿದ್ದ ಪಕ್ಷದಲ್ಲಿ, ಉಡುಪಿ ಅಷ್ಟಮಠಗಳ ಪಟ್ಟದ ದೇವರಿಗೆ ಕೃಷ್ಣಮಠದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ.

ಶೀರೂರು ಮಠದ ಪಟ್ಟದ ದೇವರು. ಶ್ರೀದೇವಿ–ಭೂದೇವಿ ಸಹಿತ ವಾಮನ ವಿಠ್ಠಲ

ಶೀರೂರು ಮಠದ ಪಟ್ಟದ ದೇವರು ಯಾರು?

ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ವಾಮನ ತೀರ್ಥರು (ಕ್ರಿ.ಶ. 1249– 1327) ಶೀರೂರು ಮಠದ ಮೂಲ ಪುರುಷರು. ಶ್ರೀದೇವಿ–ಭೂದೇವಿ ಸಹಿತ ವಿಠ್ಠಲನ ವಿಗ್ರಹ ಶೀರೂರು ಮಠದ ಪಟ್ಟದ ದೇವರು. ಈ ವಿಗ್ರಹವನ್ನು ವಾಮನ ವಿಠ್ಠಲ ಎಂದೂ ಭಕ್ತರು ಪ್ರೀತಿಯಿಂದ ಕರೆಯುತ್ತಾರೆ. 1971ರಲ್ಲಿ ಶೀರೂರು ಮಠದ ಪೀಠಾಧಿಪತಿಗಳಾದ ಲಕ್ಷ್ಮೀವರ ತೀರ್ಥರು 47 ವರ್ಷಗಳಿಂದ ಈ ದೇವರ ವಿಗ್ರಹಗಳನ್ನು ಪೂಜಿಸುತ್ತಿದ್ದಾರೆ.

ಯತಿಧರ್ಮ ಪಾಲನೆ ಎಂದರೇನು?

ಮಧ್ವಾಚಾರ್ಯರು ‘ಯತಿಪ್ರಣವಕಲ್ಪ’ ಗ್ರಂಥದಲ್ಲಿ ಹೇಳಿರುವ ಜೀವನಕ್ರಮವನ್ನು ಮಾಧ್ವಮಠಗಳು ಪಾಲಿಸುತ್ತವೆ. ಯತಿಗಳು ಬ್ರಹ್ಮಚರ್ಯ ಪಾಲನೆ ಮಾಡಬೇಕು. ದಿನಕ್ಕೆ ಎರಡು ಸಲ ಸ್ನಾನ ಮಾಡಿ ದೇವರ ‍ಪೂಜೆ ಮಾಡಬೇಕು. ಮಡಿಯಲ್ಲಿ ತಯಾರಿಸಿದ ಆಹಾರವನ್ನೇ ಸೇವಿಸಬೇಕು. ನೊಂದವರಿಗೆ ಸಾಂತ್ವನ ಹೇಳಬೇಕು. ಶಿಷ್ಯರಿಗೆ ಮತ್ತು ಭಕ್ತರಿಗೆ ಪಾಠ ಮಾಡಬೇಕು. ಮಧ್ವಾಚಾರ್ಯರು ಸೂಚಿಸಿರುವ ಜಪಗಳನ್ನು ನಿರಂತರ ಮಾಡಬೇಕು ಎನ್ನುವುದು ಮಾಧ್ವ ಪರಂಪರೆಯಲ್ಲಿ ಯತಿಧರ್ಮದ ಭಾಗ.

ಹೇಳಿಕೆಗಳೇ ಕಾರಣವಾದವೇ?

’ನನಗೂ ಮಕ್ಕಳಿದ್ದಾರೆ, ಅಷ್ಟಮಠದ ಎಲ್ಲ ಸ್ವಾಮಿಗಳಿಗೂ ಮಕ್ಕಳಿದ್ದಾರೆ. ನಮಗೆ ಎಂಟನೇ ವಯಸ್ಸಿಗೆ ಸನ್ಯಾಸ ಕೊಡುತ್ತಾರೆ. ಆಗ ನಮಗೆ ಬುದ್ಧಿ–ಲೋಕಜ್ಞಾನ ಇರುವುದಿಲ್ಲ. ಪ್ರಾಯ ಬಂದ ಮೇಲೆ ಆಸೆ ಬರುವುದು ಸಹಜ. ಮನುಷ್ಯನಿಗೇ ಆಸೆಗಳೇ ಇರಲ್ವಾ? ಅದನ್ನು ಸಹಿಸಿಕೊಳ್ಳೋದು ಹೇಗೆ. ಮತ್ತೆ ಬೇಡ ಅನ್ಸುತ್ತೆ. ಅಷ್ಟಮಠದ ಎಲ್ಲ ಸ್ವಾಮೀಜಿಗಳಿಗೂ ಮಕ್ಕಳಿದ್ದಾರೆ. ...ಯವರೊಂದಿಗೂ ಸಂಬಂಧ ಇಟ್ಟುಕೊಂಡಿದ್ದಾರೆ. ಅದೆಲ್ಲ ಉಡುಪಿಯ ಜನರಿಗೆ ಗೊತ್ತಿರುವ ವಿಷಯ. ಅದು ಬಯಲಾದರೆ ಉಡುಪಿ ಮರ್ಯಾದೆ ಹೋಗುತ್ತದೆ’ ಎಂದು ಲಕ್ಷ್ಮೀವರ ತೀರ್ಥರು ಈಚೆಗೆ ಖಾಸಗಿಸುದ್ದಿ ವಾಹಿನಿಯ ರಹಸ್ಯ ಕಾರ್ಯಾಚರಣೆಯಲ್ಲಿ ವರದಿಗಾರ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ್ದರು. ‘ನಾನು ಸನ್ಯಾಸ ಧರ್ಮ ಪಾಲನೆ ಮಾಡುತ್ತಿಲ್ಲ’ ಎಂದೂ ಹೇಳಿದ್ದರು.

ಲಕ್ಷ್ಮಿವರತೀರ್ಥರ ಈ ನಡವಳಿಕೆಗಳು ಯತಿಧರ್ಮ ಪಾಲನೆಯ ಸ್ಪಷ್ಟ ಉಲ್ಲಂಘನೆ ಎಂಬುದು ಅಷ್ಟ ಮಠಗಳ ಹಿರಿಯ ಯತಿಗಳ ಅಭಿಪ್ರಾಯ. ‘ಸನ್ಯಾಸಿ ಅಲ್ಲದವರು ಪಟ್ಟದ ದೇವರಿಗೆ ಪೂಜೆ ಮಾಡುವುದು ಸರಿಯಲ್ಲ, ಶೀರೂರು ಶ್ರೀಗಳಿಗೆ ಪಟ್ಟದ ದೇವರನ್ನು ಕೊಡದೆ ಇರಲು ಅನ್ಯ ಕಾರಣಗಳು ಇಲ್ಲ’ ಎಂದುಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ನೀಡಿರುವ ಹೇಳಿಕೆಯನ್ನು ಈ ಹಿನ್ನೆಲೆಯಲ್ಲಿಯೇ ಅರ್ಥೈಸಲಾಗುತ್ತಿದೆ.

ಈಗೇಕೆಮುಖ್ಯವಾಯಿತು?

ಇದೇ ತಿಂಗಳ 23ರಿಂದ ಚಾತುರ್ಮಾಸ್ಯ ಆರಂಭವಾಗುತ್ತದೆ. ಈ ಅವಧಿಯಲ್ಲಿ ಯತಿಗಳು ಸಂಚಾರ ನಿಲ್ಲಿಸಿ, ಒಂದೇ ಸ್ಥಳದಲ್ಲಿದ್ದು ದೇವರ ಪೂಜೆ, ಪಾರಾಯಣ, ಜಪ ಮತ್ತು ಉಪನ್ಯಾಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಕ್ರಮವಾಗಿ ಶಾಖಾ, ದಧಿ, ಕ್ಷೀರ ಮತ್ತು ದ್ವಿದಳ ನಿಷೇಧ ಪಾಲಿಸುತ್ತಾರೆ. ಚಾತುರ್ಮಾಸ್ಯದ ಒಳಗೆ ಪಟ್ಟದ ದೇವರ ಪೂಜಾ ವಿವಾದ ಬಗೆಹರಿಯುತ್ತದೆ ಎಂಬ ನಿರೀಕ್ಷೆ ಭಕ್ತರಲ್ಲಿತ್ತು. ಆದರೆ ಈಗ ಶೀರೂರು ಶ್ರೀಗಳು ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ವಿವಾದ ಹೊಸ ತಿರುವು ಪಡೆದುಕೊಂಡಿದೆ.

ಸುದ್ದಿ ಮಾಡಿದ ಅಷ್ಟಮಠಗಳ ವಿವಾದಗಳು

ಅಷ್ಟಮಠಗಳ ಪೈಕಿ ಶೀರೂರು, ಪುತ್ತಿಗೆ ಮತ್ತು ಪೇಜಾವರ ಮಠಗಳು ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿರುತ್ತವೆ. ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಧರ್ಮ ಪ್ರಸಾರಕ್ಕಾಗಿ ವಿದೇಶಕ್ಕೆ ಹೋಗಿದ್ದು ವಿವಾದಕ್ಕೆ ಕಾರಣವಾಗಿತ್ತು. ಸಮುದ್ರ ದಾಟಿರುವುರದಿಂದ ಯತಿಧರ್ಮದ ಉಲ್ಲಂಘನೆಯಾಗಿದೆ. ಸುಗುಣೇಂದ್ರ ತೀರ್ಥರು ಶಿಷ್ಯ ಸ್ವೀಕಾರ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಶೀರೂರು ಮಠದಲಕ್ಷ್ಮಿವರ ತೀರ್ಥರು ಅಷ್ಟಮಠಗಳ ಯತಿಗಳ ಕುರಿತು ಹೇಳಿಕೆಗಳನ್ನು ನೀಡಿದ್ದರು. ಸಾರ್ವಜನಿಕವಾಗಿ ಡ್ರಮ್‌ ಬಾರಿಸಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಪೇಜಾವರ ಮಠದ ವಿಶ್ವೇಶ ತೀರ್ಥರು ಕನಕನ ಕಿಂಡಿ ವಿವಾದ, ಇಫ್ತಾರ್ ಕೂಟ ಮತ್ತು ಲಿಂಗಾಯತ ಧರ್ಮದ ಕುರಿತ ಹೇಳಿಕೆಗಳಿಂದ ಈಚೆಗೆ ಸುದ್ದಿಯಲ್ಲಿದ್ದರು.

ಕಲಾವಿದರಿಗೆ ನೀಡಲು ಸಿದ್ಧಪಡಿಸಿರುವ ನೋಟುಗಳ ಹಾರಗಳೊಂದಿಗೆ ಶೀರೂರು ಮಠದಲಕ್ಷ್ಮೀವರತೀರ್ಥರು (ಚಿತ್ರ: ಪ್ರಜಾವಾಣಿ ಸಂಗ್ರಹ, 12/09/17)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.