ADVERTISEMENT

ಬಾಲಸನ್ಯಾಸ ಅಷ್ಠಮಠಗಳ ಪರಂಪರೆ: ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ ಆಯ್ಕೆ

ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ ಆಯ್ಕೆ, ಮೇ 13ಕ್ಕೆ ಸನ್ಯಾಸ ಸ್ವೀಕಾರ, 14ಕ್ಕೆ ಪಟ್ಟಾಭಿಷೇಕ: ಸೋದೆ ಶ್ರೀ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 16:14 IST
Last Updated 21 ಏಪ್ರಿಲ್ 2021, 16:14 IST
ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಅನಿರುದ್ಧ ಸರಳತ್ತಾಯ ಬುಧವಾರ ಶೀರೂರು ಮೂಲಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಅನಿರುದ್ಧ ಸರಳತ್ತಾಯ ಬುಧವಾರ ಶೀರೂರು ಮೂಲಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.   

ಉಡುಪಿ: ‘ಅಷ್ಠಮಠಗಳಲ್ಲಿ ಬಾಲಸನ್ಯಾಸ ಸ್ವೀಕಾರ ಹಿಂದಿನಿಂದ ನಡೆದುಕೊಂಡು ಬಂದ ಪರಂಪರೆಯಾಗಿದ್ದು, ಬಾಲಸನ್ಯಾಸ ಸ್ವೀಕಾರ ತಪ್ಪಲ್ಲ’ ಎಂದು ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

ಬುಧವಾರ ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ ಘೋಷಣೆ ಸಂದರ್ಭ ಮಾತನಾಡಿದ ಶ್ರೀಗಳು, ‘ಮಧ್ವಾಚಾರ್ಯರ ಕಾಲದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಕೈಬಿಡಲು ಸಾಧ್ಯವಿಲ್ಲ. ಮಠಗಳಲ್ಲಿ ಸಂಪ್ರದಾಯ ಪಾಲನೆ ಮುಖ್ಯ. ಸೋದೆ ಮಠದ ಯತಿಯಾದಾಗ ನನಗೂ 15 ವರ್ಷವಾಗಿತ್ತು’ ಎಂದು ಬಾಲಸನ್ಯಾಸವನ್ನು ಸಮರ್ಥಿಸಿಕೊಂಡರು.

ಬಾಲಸನ್ಯಾಸ ಸ್ವೀಕರಿಸಬಾರದು ಎಂದು ಅಷ್ಠಮಠಾಧೀಶರು ನಿರ್ಣಯ ತೆಗೆದುಕೊಂಡಿಲ್ಲ. ಹಿಂದೆ, ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಬಾಲ ಸನ್ಯಾಸತ್ವದ ವಿರುದ್ಧ ಹೇಳಿಕೆ ನೀಡಿದ್ದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಅಷ್ಠಮಠಗಳ ಒಮ್ಮತದ ಅಭಿಪ್ರಾಯವಲ್ಲ ಎಂದರು.

ADVERTISEMENT

ಲಿಖಿತ ಸಂವಿಧಾನ ಇಲ್ಲ:

ಕನಿಷ್ಠ 10 ವರ್ಷ ವೇದಾಧ್ಯಯನ ಮಾಡಿರುವ ಹಾಗೂ 21 ವರ್ಷ ತುಂಬಿರುವ ವಟುವನ್ನು ಮಾತ್ರ ಅಷ್ಠಮಠಗಳಿಗೆ ಯತಿಗಳನ್ನಾಗಿ ನೇಮಕ ಮಾಡಬೇಕು ಎಂಬ ಯಾವ ಲಿಖಿತ ಸಂವಿಧಾನವೂ ಕೃಷ್ಣಮಠದಲ್ಲಿ ಇಲ್ಲ. ಇದ್ದಿದ್ದರೆ, ಉಳಿದ ಮಠಗಳಿಂಂದ ಆಕ್ಷೇಪ ಕೇಳಿಬರುತ್ತಿತ್ತು. ಶೀರೂರು ಮಠದ ಉತ್ತರಾಧಿಕಾರಿ ಆಯ್ಕೆಗೆ ಎಲ್ಲ ಮಠಾಧೀಶರ ಸಮ್ಮತಿ ಇದೆ ಎಂದರು.

ಸನ್ಯಾಸದತ್ತ ಒಲವು:

ಶೀರೂರು ಮಠಕ್ಕೆ ಯೋಗ್ಯ ಉತ್ತರಾಧಿಕಾರಿ ಆಯ್ಕೆ ಸಂದರ್ಭ ಅನಿರುದ್ಧ ಸರಳತ್ತಾಯ ಅವರ ಜಾತಕ ಪರಿಶೀಲಿಸಿದಾಗ ಸನ್ಯಾಸ ಹಾಗೂ ಪೀಠಾಧಿಪತಿ ಯೋಗವಿರುವುದು ಕಂಡುಬಂತು. ಬಾಲ್ಯದಿಂದಲೂ ಆಧ್ಯಾತ್ಮದತ್ತ ಅತೀವ ಸೆಳೆತ ಹಾಗೂ ಕೃಷ್ಣನ ಪೂಜೆ ಮಾಡುವ ಅದಮ್ಯ ಆಸೆ ಹೊಂದಿರುವುದು ಗಮನಕ್ಕೆ ಬಂತು. 2 ವರ್ಷ ಹಲವು ಪರೀಕ್ಷೆಗಳನ್ನು ನಡೆಸಿ ತೃಪ್ತಿಯಾದ ಬಳಿಕವೇ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು. ಸನ್ಯಾಸ ಸ್ವೀಕಾರಕ್ಕೆ ಬಾಲಕನ ಮೇಲೆ ಯಾರ ಒತ್ತಡವೂ ಇಲ್ಲ, ಸ್ವಯಂ ನಿರ್ಧಾರ ಎಂದು ಶ್ರೀಗಳು ತಿಳಿಸಿದರು.

ಅನಿರುದ್ಧ ಅವರ ತಂದೆ ಉದಯಕುಮಾರ್ ಸರಳತ್ತಾಯ ಮಾತನಾಡಿ, ಮಗನ ಜಾತಕವನ್ನು ಹಲವರ ಬಳಿ ಪರಿಶೀಲಿಸಿದಾಗ ಸನ್ಯಾಸ ಯೋಗ ಹಾಗೂ ಯತಿಯಾಗುವ ಯೋಗವಿರುವುದು ಸ್ಪಷ್ಟವಾಯಿತು. ಕೃಷ್ಣನ ಪೂಜೆ ಮಾಡುವುದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ ಎಂದು ಅರಿತು ಮಗನ ಆಸೆಯಂತೆ ಸನ್ಯಾಸತ್ವಕ್ಕೆ ಒಪ್ಪಿಗೆ ನೀಡಲಾಯಿತು ಎಂದರು.

ತಾಯಿ ಶ್ರೀವಿದ್ಯಾ ಮಾತನಾಡಿ, ಮಗನ ಇಚ್ಛೆಯಂತೆ ನಡೆಯಬೇಕಾಗಿರುವುದು ಪೋಷಕರ ಕರ್ತವ್ಯ. ಅದರಂತೆ, ಸನ್ಯಾಸದತ್ತ ಒಲವು ತೋರಿದ ಮಗನ ಆಸೆಯನ್ನು ಈಡೇರಿಸುತ್ತಿದ್ದೇವೆ ಎಂದರು.

ಶೀರೂರು ಮಠಕ್ಕೆ ನೂತನ ಯತಿ

ಧರ್ಮಸ್ಥಳದ ನಿಡ್ಲೆ ಮೂಲದ ಎಂ.ಉದಯಕುಮಾರ್ ಸರಳತ್ತಾಯ ಹಾಗೂ ಶ್ರೀವಿದ್ಯಾ ದಂಪತಿ ಪುತ್ರ ಅನಿರುದ್ಧ ಸರಳತ್ತಾಯ ಅವರು ಶೀರೂರು ಮಠದ 31ನೇ ಯತಿಗಳಾಗಿ ಆಯ್ಕೆಯಾಗಿದ್ದಾರೆ. ಮೇ 14ರಂದು ಮಧ್ಯಾಹ್ನ 12.35ರಿಂದ 12.50ರ ನಡುವಿನ ಅಭಿಜಿನ್‌ ಮುಹೂರ್ತದಲ್ಲಿ ನೂತನ ಯತಿಗಳ ಪಟ್ಟಾಭಿಷೇಕ ನಡೆಯಲಿದೆ. ಅದಕ್ಕೂ ಮುನ್ನ 13ರಂದು ಬೆಳಿಗ್ಗೆ 7.35ರಿಂದ 8ಗಂಟೆಯ ನಡುವಿನ ಮುಹೂರ್ತದಲ್ಲಿ ಕ್ಕೆ ಸನ್ಯಾಸ ಸ್ವೀಕಾರ ನಡೆಯಲಿದೆ.

‘ಕೃಷ್ಣನ ಪೂಜೆ ಮಾಡುವಾಸೆ’

ಬಾಲ್ಯದಿಂದಲೂ ಕೃಷ್ಣನ ಪೂಜೆ ಮಾಡುವ ಆಸೆ ಇತ್ತು. ಶೀರೂರು ಮಠಕ್ಕೆ ಯತಿಗಳ ಅವಶ್ಯಕತೆ ಇರುವ ವಿಚಾರ ತಿಳಿದು ತಂದೆಯ ಬಳಿ ಹೋಗಿ ಶೀರೂರು ಮಠಕ್ಕೆ ಸ್ವಾಮೀಜಿಯಾಗುವ ಇಂಗಿತ ವ್ಯಕ್ತಪಡಿಸಿದೆ. ಜಾತಕ ಪರಿಶೀಲನೆ, ವಿಮರ್ಶೆಯ ಬಳಿಕ ಯತಿಯಾಗುವ ಯೋಗ ಕೂಡಿಬಂದಿದೆ. ಲೌಕಿಕ ಹಾಗೂ ಅಲೌಕಿಕ ಶಿಕ್ಷಣ ಪಡೆಯುವ ಆಸೆ ಇದೆ.

– ಅನಿರುದ್ದ ಸರಳತ್ತಾಯ, ಶೀರೂರು ಮಠದ ನಿಯೋಜಿತ ಯತಿ

ಈ ಸಂದರ್ಭ ಮಠದ ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿ, ರತ್ನಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.