ADVERTISEMENT

‘ದಲಿತರ ಸ್ಥಿತಿಗತಿಗೆ ಬೆಳಕು ಚೆಲ್ಲಿದ್ದ ಕಾರಂತ’

ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭ, ಸಾಹಿತ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 4:56 IST
Last Updated 12 ಅಕ್ಟೋಬರ್ 2025, 4:56 IST
ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಅವರಿಗೆ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಯಿತು
ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಅವರಿಗೆ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಉಡುಪಿ: ದಲಿತರ ಭೂಮಿ ವಿಚಾರವಾಗಿ ಮೊತ್ತ ಮೊದಲು ಪ್ರಶ್ನೆ ಎತ್ತಿದವರು ಶಿವರಾಮ ಕಾರಂತರು. ದಲಿತರ ಸ್ಥಿತಿಗತಿಗಳಿಗೆ ಅವರು ತಮ್ಮ ‘ಚೋಮನ ದುಡಿ’ ಕಾದಂಬರಿಯಲ್ಲಿ ಬೆಳಕು ಚೆಲ್ಲಿದ್ದಾರೆ ಎಂದು ವಿದ್ವಾಂಸ ಪ್ರೊ.ಬಿ.ಎ. ವಿವೇಕ ರೈ ಹೇಳಿದರು.

ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ನಗರದ ಎಂಜಿಎಂ ಕಾಲೇಜಿನ ರವೀಂದ್ರ ಕಲಾಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ, ಸಾಹಿತ್ಯೋತ್ಸವ ಹಾಗೂ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಕಾರಂತರು ಹಳ್ಳಿ ಹಳ್ಳಿಗಳಲ್ಲಿ ತಿರುಗಾಡಿ ದಲಿತರಲ್ಲಿ ಜಾಗೃತಿ ಉಂಟುಮಾಡುವ ಕೆಲಸ ಮಾಡಿದ್ದರು. ಅವರ ಮಕ್ಕಳ ಶಿಕ್ಷಣದ ಬಗ್ಗೆಯೂ ತಿಳುವಳಿಕೆ ಮೂಡಿಸಿದ್ದರು ಎಂದರು.

ADVERTISEMENT

ಪ್ರಾಣಿಗಳು, ಬುಡಕಟ್ಟು ಜನರ ಸಂರಕ್ಷಣೆಯ ಆಶಯ ಕಾರಂತರಲ್ಲಿ ಗಾಢವಾಗಿತ್ತು. ಅದು ಅವರ ‘ಕುಡಿಯರ ಕೂಸು’ ಕಾದಂಬರಿಯಲ್ಲಿ ಪ್ರತಿಫಲಿವಾಗಿದೆ. ಅವರಲ್ಲಿದ್ದ ಸ್ತ್ರೀ ಸಂವೇದನೆಯು ‘ಸರಸಮ್ಮನ ಸಮಾಧಿ’ ಕಾದಂಬರಿಯಲ್ಲಿ ಬಿಂಬಿತವಾಗಿದೆ ಎಂದು ಹೇಳಿದರು.

ಕಾರಂತರಿಗೆ ಸೂಕ್ಷ್ಮ ಅವಲೋಕನಾ ಶಕ್ತಿ ಇತ್ತು ಆ ಕಾರಣಕ್ಕೆ ಅವರಿಗೆ ಅತ್ಯುತ್ತಮ ಕಾದಂಬರಿಗಳನ್ನು ಬರೆಯಲು ಸಾಧ್ಯವಾಯಿತು. ಅಪಾರ ಓದು, ಪ್ರಾಕ್ತನ ಕಲೆ, ಮಾನವ ವಿಜ್ಞಾನದ ಬಗ್ಗೆ ಅವರಿಗಿದ್ದ ಜ್ಞಾನದಿಂದ ಅತ್ಯುತ್ತಮವಾದ ಸಾಹಿತ್ಯ ಕೃತಿಗಳು ಮೂಡಿಬಂದಿವೆ ಎಂದರು.

ಪ್ರವಾಸ ಮಾಡುತ್ತಿದ್ದ ಕಾರಣ ವಿವಿಧ ಸಂಸ್ಕೃತಿಗಳನ್ನು ಅಧ್ಯಯನ ಮಾಡಲು ಕಾರಂತರಿಗೆ ಸಾಧ್ಯವಾಯಿತು. ಹಾಡು, ಕುಣಿತ, ಚಿತ್ರಕಲೆ ಎಲ್ಲವನ್ನೂ ಅವರು ಕಲಿತಿದ್ದರು ಎಂದು ಹೇಳಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ವಾಟಿಸಿದರು. ವಿಮರ್ಶಕ ಎಸ್.ಆರ್. ವಿಜಯ ಶಂಕರ್ ವಿಶೇಷ ಉಪನ್ಯಾಸ ನೀಡಿದರು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಾಗಪ್ಪ ಗೌಡ, ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸತೀಶ್‌ ಕೊಡವೂರು, ಸಂತೋಷ್‌ ನಾಯಕ್‌ ಪಟ್ಲ, ಆತ್ರಾಡಿ ಅಮೃತ ಶೆಟ್ಟಿ, ಜಿ.ಎಂ. ಷರೀಫ್ ಭಾಗವಹಿಸಿದ್ದರು.

ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿದರು. ಟ್ರಸ್ಟ್ ಅಧ್ಯಕ್ಷ ಗಣನಾಥ ಶೆಟ್ಟಿ ಎಕ್ಕಾರು ಪ್ರಸ್ತಾವಿಕವಾಗಿ ಮಾತನಾಡಿದರು. ಸಂಶೋಧಕಿ ರೇಖಾ ಬನ್ನಾಡಿ, ಜಾನಪದ ವಿದ್ವಾಂಸ ಎಸ್.ಎ. ಕೃಷ್ಣಯ್ಯ, ಯಕ್ಷಗಾನ ಕಲಾವಿದ ಶೇಖ್ ಮಹಮ್ಮದ್ ಗೌಸ್ ಕಾವ್ರಾಡಿ ಅವರಿಗೆ ವಿಶೇಷ ಪುರಸ್ಕಾರ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.