ADVERTISEMENT

ಜಿಹಾದಿಗಳಿಂದ ದುರುದ್ದೇಶದ ಕರೆ: ಶೋಭಾ ಕರಂದ್ಲಾಜೆ

ಅಮಿತ್‌ ಶಾಗೆ ಪತ್ರ ಬರೆದಿದ್ದಕ್ಕೆ ಬೆದರಿಕೆ ಕರೆ: ಆರೋಪ

​ಪ್ರಜಾವಾಣಿ ವಾರ್ತೆ
Published 5 ಮೇ 2020, 12:18 IST
Last Updated 5 ಮೇ 2020, 12:18 IST
ಶೋಭಾ ಕರಂದ್ಲಾಜೆ, ಸಂಸದೆ
ಶೋಭಾ ಕರಂದ್ಲಾಜೆ, ಸಂಸದೆ   

ಉಡುಪಿ: ‘ಕೊರೊನಾ ಸಂಕಷ್ಟದ ಸಮಯದಲ್ಲಿ ಒಂದು ದಿನವೂ ವಿಶ್ರಾಂತಿ ಪಡೆಯದೆ ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಬೇಸರ ವ್ಯಕ್ತಪಡಿಸಿದರು.

ಉಡುಪಿಯಲ್ಲಿ ಬೆಳಿಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿರುವ ವಿಚಾರ ಸಂಸದೆಯಾಗಿ ನಿಮ್ಮ ಗಮನಕ್ಕಿಲ್ಲವೇ ಎಂದು ವ್ಯಕ್ತಿಯೊಬ್ಬರು ಸೋಮವಾರ ಶೋಭಾ ಕರಂದ್ಲಾಜೆ ಅವರಿಗೆ ಕರೆ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಆಡಿಯೋ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳಲ್ಲಿ ಹೆಚ್ಚು ಸುದ್ದಿಯಾಗಿತ್ತು.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಂಸದೆ, ‘ಕುವೈತ್‌ನಲ್ಲಿ ಈಚೆಗೆ ಕೇರಳದ ಹಿಂದೂ ಚಾಲಕನಿಗೆ ಜಿಹಾದಿಗಳು ಕಪಾಳಮೋಕ್ಷ ಮಾಡಿದ್ದು, ಈ ಕೃತ್ಯದ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೆ. ಈ ಘಟನೆಯ ಬಳಿಕ ನೂರಾರು ಜಿಹಾದಿಗಳು ಬೆದರಿಕೆ ಹಾಗೂ ಅಶ್ಲೀಲ ಕರೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಸೋಮವಾರ ವ್ಯಕ್ತಿಯೊಬ್ಬ ದುರುದ್ದೇಶದಿಂದ ಕರೆ ಮಾಡಿದ್ದು ಈ ಆಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಬೇಸರವಿಲ್ಲ. ಉಡುಪಿ ಜಿಕ್ಕಮಗಳೂರು ಕ್ಷೇತ್ರದ ಸಂಸದೆಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಮತದಾರರಿಗೆ ಅಗೌರವ ತರುವ ಕೆಲಸ ಮಾಡಿಲ್ಲ’ ಎಂದು ಶೋಭಾ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.