ADVERTISEMENT

ಕೃತಿಗಳಿಂದ ಚಿರಾಯುವಾದ ಭೈರಪ್ಪ: ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್

ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ‘ಡಾ.ಎಸ್.ಎಲ್.ಭೈರಪ್ಪ ಸಂಸ್ಮರಣೆ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 5:10 IST
Last Updated 15 ಅಕ್ಟೋಬರ್ 2025, 5:10 IST
ಕಾಪು ಸಂಘ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಡಾ.ಎಸ್.ಎಲ್. ಭೈರಪ್ಪ ಸಂಸ್ಮರಣೆ’ ಕಾರ್ಯಕ್ರಮದಲ್ಲಿ ಗಣ್ಯರು ಭೈರಪ್ಪರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು
ಕಾಪು ಸಂಘ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಡಾ.ಎಸ್.ಎಲ್. ಭೈರಪ್ಪ ಸಂಸ್ಮರಣೆ’ ಕಾರ್ಯಕ್ರಮದಲ್ಲಿ ಗಣ್ಯರು ಭೈರಪ್ಪರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು   

ಕಾಪು (ಪಡುಬಿದ್ರಿ): ‘ಕಿತ್ತು ತಿನ್ನುವ ಬಡತನದ ಮಧ್ಯೆಯೇ ಶಿಕ್ಷಣ ಮುಂದುವರಿಸಿ, ಸಾಧನೆಯ ಶಿಖರ ಏರಿದ ಎಸ್‌.ಎಲ್‌. ಭೈರಪ್ಪ ನಮಗೆ ಸ್ಫೂರ್ತಿ ಆಗಬೇಕು’ ಎಂದು ಉಡುಪಿ ಎಂ.ಜಿ.ಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ ನುಡಿದರು.

ಕನ್ನಡ ಸಾಹಿತ್ಯ ಪರಿಷತ್‌ ಉಡುಪಿ ಜಿಲ್ಲೆ ಹಾಗೂ ಕಾಪು ತಾಲ್ಲೂಕು ಘಟಕದ ನೇತೃತ್ವದಲ್ಲಿ, ಸಾಹಿತ್ಯ ಸಂಘ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಭಾಗಿತ್ವದಲ್ಲಿ ಕಾಲೇಜಿನ ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಡಾ.ಎಸ್.ಎಲ್.ಭೈರಪ್ಪ ಸಂಸ್ಮರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೀವನದಲ್ಲಿ ಬರುವ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ, ಭಿನ್ನತೆಯನ್ನು ಒಪ್ಪಿಕೊಂಡ ಬಹುದೊಡ್ಡ ಔದಾರ್ಯದ ವ್ಯಕ್ತಿತ್ವದಿಂದ ಪ್ರತಿಯೊಬ್ಬರನ್ನೂ ಮುಟ್ಟುವಂತಾದ ಸಾಹಿತಿ ಭೈರಪ್ಪ. ಇವರ ಕೃತಿಗಳು ಚರ್ಚೆಗೆ ಒಳಗಾದ್ದರಿಂದ ಎಡ–ಬಲ ಚಿಂತಕರೂ ಕೊಂಡು ಓದಿದವರಿದ್ದಾರೆ. ಇವರ ಮೇರು ಕೃತಿಗಳು ಇಂದಿಗೂ ಸ್ಫೂರ್ತಿಯನ್ನು ತುಂಬಿವೆ. ಕೃತಿಗಳ ಮೂಲಕ ಚಿರಾಯುವಾದ ಸಾಹಿತಿ ಎಸ್.ಎಲ್.ಭೈರಪ್ಪ ಎಂದು ಬಣ್ಣಿಸಿದರು.

ADVERTISEMENT

ಕಾಲೇಜಿನ ಪ್ರಾಚಾರ್ಯ ಗೋಪಾಲೃಷ್ಣ ಎಂ.ಗಾಂವ್ಕರ್ ಮಾತನಾಡಿ, ‘ಹಲವಾರು ಸಾಹಿತ್ಯ ಕೃತಿಗಳಲ್ಲಿ ಅತೀ ಹೆಚ್ಚು ಆಸಕ್ತಿ ಮೂಡಿಸಿದ ಕೃತಿಗಳಿದ್ದರೆ ಅದು ಭೈರಪ್ಪರವರದ್ದು. ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಓದುಗರಾಬೇಕು. ಸಾಹಿತ್ಯ ವ್ಯಕ್ತಿತ್ವವನ್ನು ರೂಪಿಸುತ್ತದೆ. ದಿನನಿತ್ಯದ ವಾಸ್ತವಿಕತೆ ಅರಿಯಲು ಕಾದಂಬರಿಗಳನ್ನು ಓದಬೇಕು’ ಎಂದರು.

ಭೈರಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ‘ಭೈರಪ್ಪನವರು ಕಾದಂಬರಿ ಬರೆಯುವ ಪೂರ್ವದಲ್ಲಿ ಸಾಕಷ್ಟು ಸಿದ್ಧತೆ ಮಾಡಿಕೊಂಡು ನಿಖರವಾದ ಮಾಹಿತಿಯನ್ನು ಓದುಗರಿಗೆ ತಿಳಿಯುವಂತೆ ಅಭಿವ್ಯಕ್ತಿಗೊಳಿಸುತ್ತಿದ್ದರು. ಹಾಗಾಗಿ ಅವರ ಕಾದಂಬರಿಗಳಲ್ಲಿ ನಿತ್ಯ ಸತ್ಯವನ್ನು ಕಾಣಬಹುದಾಗಿದೆ’ ಎಂದರು.

ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ, ಸಾಹಿತ್ಯ ಸಂಘದ ನಿರ್ದೇಶಕ ಡಾ.ರವಿರಾಜ್ ಶೆಟ್ಟಿ ಅವರು, ಭೈರಪ್ಪರವರ ಸಾಹಿತ್ಯ ಸೇವೆಯ ಬಗ್ಗೆ ಅನುಭವ ಹಂಚಿಕೊಂಡರು.

ಕಸಾಪ ಕಾಪು ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಕಾಪು ಕಸಾಪ ಸಹಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು, ಸದಸ್ಯರಾದ ಮಧುಕರ್ ಎಸ್. ಕಲ್ಯಾ, ರಾಕೇಶ್ ಕುಂಜೂರು, ಜಿಲ್ಲಾ ಸಮಿತಿಯ ನರಸಿಂಹಮೂರ್ತಿ ರಾವ್, ಕಾಲೇಜಿನ ಸಹ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಘಟಕದ ಕೋಶಾಧ್ಯಕ್ಷರು, ಕಾರ್ಯಕ್ರಮ ಸಂಯೋಜಕರಾದ ವಿದ್ಯಾಧರ್ ಪುರಾಣಿಕ್ ನಿರೂಪಿಸಿದರು. ಆಂಗ್ಲ ಭಾಷಾ ವಿಭಾಗದ ಸಹ ಪ್ರಾಧ್ಯಾಪಕಿ ದೀಪಿಕಾ ಸುವರ್ಣ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.