ADVERTISEMENT

ಕೃಷಿಕರಿಗೆ ಸಮಸ್ಯೆ ತಂದೊಡ್ಡುವ ಕಿಂಡಿ ಅಣೆಕಟ್ಟು, ವಾರಾಹಿ ಯೋಜನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2023, 14:21 IST
Last Updated 24 ಆಗಸ್ಟ್ 2023, 14:21 IST
ಬ್ರಹ್ಮಾವರ ತಾಲ್ಲೂಕಿನ ಆರೂರಿನಲ್ಲಿ ನದಿ ನೀರಿನ ಸೆಳೆತದಿಂದ ಕೃಷಿ ಭೂಮಿ ನದಿ ಪಾಲಾಗಿರುವುದು.
ಬ್ರಹ್ಮಾವರ ತಾಲ್ಲೂಕಿನ ಆರೂರಿನಲ್ಲಿ ನದಿ ನೀರಿನ ಸೆಳೆತದಿಂದ ಕೃಷಿ ಭೂಮಿ ನದಿ ಪಾಲಾಗಿರುವುದು.   

ಬ್ರಹ್ಮಾವರ: ಉಗ್ಗೇಲ್‌ಬೆಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಮತ್ತು ಆರೂರಿನಲ್ಲಿ ವಾರಾಹಿ ಯೋಜನೆಯ ಪೈಪ್‌ಲೈನ್‌ ಅಳವಡಿಸಲು ಹೊಳೆಯಲ್ಲಿ ನಿರ್ಮಿಸಲ್ಪಟ್ಟ ಕಿರು ಸೇತುವೆ ಕಾಮಗಾರಿಯಿಂದ ನದಿ ತೀರದ ಗದ್ದೆಗಳು ಕೊಚ್ಚಿಕೊಂಡು ಹೋಗಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ.

ಚಾಂತಾರು ಮತ್ತು ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಗ್ಗೇಲ್‌ಬೆಟ್ಟಿನಲ್ಲಿರುವ ಕಿಂಡಿ ಅಣೆಕಟ್ಟಿನಲ್ಲಿ ಪ್ರತಿ ವರ್ಷ ಮಳೆಗಾಲದ ಪ್ರವಾಹದ ಸಂದರ್ಭ ನೀರಿನಲ್ಲಿ ಹರಿದುಬರುವ ಮರದ ದಿಮ್ಮಿಗಳು, ಬಿದಿರು, ಕಸ ಕಡ್ಡಿಗಳಿಂದ ನೀರು ಸರಿಯಾಗಿ ಹರಿದು ಹೋಗದೇ ಪ್ರವಾಹದ ನೀರು ಆಸು ಪಾಸಿನ ಗದ್ದೆಗಳಲ್ಲಿ ನಿಂತು ಬೆಳೆ ನಾಶ ಆಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದಲ್ಲದೇ ಒಂದೇ ಬದಿಯಲ್ಲಿ ನೀರು ಹರಿಯುವುದರಿಂದ ನದಿ ತೀರದ ಗದ್ದೆಗಳು ಕೊಚ್ಚಿಕೊಂಡು ಹೋಗಿದೆ.

ಆದರೆ ಈ ಬಾರಿ ಮಳೆ ಕಡಿಮೆಯಾಗಿ ಕೇವಲ ಒಂದೇ ಬಾರಿ ಸಣ್ಣ ಪ್ರಮಾಣದಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, ಅದರಲ್ಲಿ ತೇಲಿ ಬಂದ ಮರ, ಬಿದಿರು, ಕಸ ಕಡ್ಡಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡಿದ್ದರೂ ಅದನ್ನು ತೆರವುಗೊಳಿಸುವ ಪ್ರಯತ್ನವನ್ನು ನೀರಾವರಿ ಇಲಾಖೆಯಾಗಲಿ, ಸ್ಥಳೀಯ ಪಂಚಾಯಿತಿ ಆಗಲಿ ಮಾಡಿಲ್ಲ.

ADVERTISEMENT
ಉಗ್ಗೇಲ್ಬೆಟ್ಟಿನ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡಿರುವ ಮರದ ದಿಮ್ಮಿಗಳು

ಪ್ರವಾಹದ ಸಂದರ್ಭದಲ್ಲಿ ಸ್ಥಳೀಯರು ಅಲ್ಪಸ್ವಲ್ಪ ಕಸ, ಮರದ ದಿಮ್ಮಿಗಳನ್ನು ತೆಗೆದಿದ್ದರೂ ದೊಡ್ಡ ದೊಡ್ಡ ಮರದ ದಿಮ್ಮಿಗಳು ಇನ್ನೂ ಅಣೆಕಟ್ಟಿನಲ್ಲಿ ಸಿಲುಕಿಕೊಂಡಿದೆ. ಇನ್ನೊಂದೆಡೆ ವಾರಾಹಿ ಯೋಜನೆಯ ಕುಡಿಯುವ ನೀರಿನ ಯೋಜನೆಗೆ ಆರೂರಿನಲ್ಲಿ ಹಾದು ಹೋಗುವ ಮಡಿಸಾಲು ಹೊಳೆಯಲ್ಲಿ ಪೈಪ್‌ ಅಳವಡಿಸಲು ಕಿರು ಸೇತುವೆ ನಿರ್ಮಿಸುವ ಸಂದರ್ಭ ಹಾಕಿದ ಮಣ್ಣನ್ನು ತೆರವುಗೊಳಿಸದೇ ಇದ್ದ ಕಾರಣ ನದಿ ನೀರಿನ ರಭಸಕ್ಕೆ ಅನೇಕ ಕೃಷಿಕರ ಗದ್ದೆಗಳು ನದಿ ಪಾಲಾಗುತ್ತಿದೆ. ಮಣ್ಣು ತೆರವುಗೊಳಿಸಲು ಹಲವು ಬಾರಿ ಹೇಳಿದ್ದರೂ ಅದಕ್ಕೆ ಕಿವಿಗೊಡದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರು ಶಾಪ ಹಾಕುತ್ತಿದ್ದಾರೆ.

ಕಿಂಡಿ ಅಣೆಕಟ್ಟುಗಳು ಮತ್ತು ವಾರಾಹಿ ಯೋಜನೆ ರೈತರಿಗೆ ಒಂದೆಡೆ ವರದಾನವಾದರೆ, ಇನ್ನೊಂದೆಡೆ ಹಾನಿಕಾರಕವೂ ಆಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇನ್ನಾದರೂ ಅಧಿಕಾರಿಗಳು ರೈತರ ಬಗ್ಗೆ ನಿರ್ಲಕ್ಷ್ಯ ತೋರದೇ ಯೋಜನೆಗಳನ್ನು ಸಮರ್ಪಕವಾಗಿ ರೈತರಿಗೆ ನೀಡಲಿ ಎನ್ನುವುದು ಎಲ್ಲರ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.