ADVERTISEMENT

ವಿಶ್ವೇಶತೀರ್ಥ ಸ್ಮೃತಿ ವನಕ್ಕೆ ಭೂಮಿ ಪೂಜೆ ಮೇ 7ರಂದು

ಬ್ರಹ್ಮಾವರದ ನೀಲಾವರ ಗೋಶಾಲೆಯ ಬಳಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 4 ಮೇ 2022, 15:35 IST
Last Updated 4 ಮೇ 2022, 15:35 IST
ಉದ್ದೇಶಿತ ಸ್ಮೃತಿವನದ ನೀಲನಕ್ಷೆ
ಉದ್ದೇಶಿತ ಸ್ಮೃತಿವನದ ನೀಲನಕ್ಷೆ   

ಉಡುಪಿ: ಪದ್ಮವಿಭೂಷಣ ಪುರಸ್ಕೃತ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳ ಸ್ಮರಣಾರ್ಥ ಉಡುಪಿ ಜಿಲ್ಲೆಯ ನೀಲಾವರದಲ್ಲಿ ನಿರ್ಮಾಣವಾಗಲಿರುವ ಸ್ಮೃತಿ ವನಕ್ಕೆ ಭೂಮಿ ಪೂಜಾ ಕಾರ್ಯಕ್ರಮ ಮೇ 7ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ ಎಂದು ಮಠದ ದಿವಾನರಾದ ಎಂ ರಘುರಾಮಾಚಾರ್ಯ ತಿಳಿಸಿದರು.

ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಗಳ ಸಾನ್ನಿಧ್ಯದಲ್ಲಿ ಸಮಾರಂಭ ನಡೆಯಲಿದ್ದು, ಅರಣ್ಯ ಸಚಿವ ಉಮೇಶ ಕತ್ತಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ.ಸುನಿಲ್ ಕುಮಾರ್, ರಾಜ್ಯ ಪಶ್ಚಿಮ ಘಟ್ಟ ಮತ್ತು ಜೈವಿಕ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ಮಟ್ಟಾರು ರತ್ನಾಕರ ಹೆಗ್ಡೆ, ನೀಲಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಕುಮಾರ್, ಜಿಲ್ಲಾಧಿಕಾರಿ ಕೂರ್ಮಾರಾವ್ ಉಪಸ್ಥಿತರಿರಲಿದ್ದಾರೆ. ಭೂಮಿ ಪೂಜೆಯ ಬಳಿಕ ಸಭಾ ಕಾರ್ಯಕ್ರಮವು ಗೋಶಾಲೆಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಗಂಗಾ ಶ್ರೀಗಳ ಹೆಸರಲ್ಲಿ ಸ್ಮೃತಿ ವನ ನಿರ್ಮಾಣಕ್ಕಾಗಿ ತಲಾ ₹ 2 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಿದ್ದರು. ಬಳಿಕ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಸಚಿವ ಉಮೇಶ ಕತ್ತಿ ಹಾಗೂ ಶಾಸಕ ರಘುಪತಿ ಭಟ್ಟರ ಮುತುವರ್ಜಿಯಿಂದ ಸ್ಮೃತಿವನ ಅನುಷ್ಠಾನಕ್ಕೆ ಬರುತ್ತಿದೆ.

ADVERTISEMENT

ಸ್ಮೃತಿವನ ನೀಲಾವರ ಗೋಶಾಲೆಯ ಆಸುಪಾಸಿನಲ್ಲೇ ನಿರ್ಮಾಣವಾದರೆ ಗೋಶಾಲೆ ನೋಡಲು ಬರುವವರು ಸ್ಮೃತಿ ವನವನ್ನೂ ವೀಕ್ಷಿಸಬಹುದು ಎಂಬುದು ವಿಶ್ವಪ್ರಸನ್ನ ತೀರ್ಥರ ಅಪೇಕ್ಷೆಯಾಗಿತ್ತು. ಅದರಂತೆ ನೀಲಾವರ ಗೋಶಾಲೆಗೆ ತಾಗಿಕೊಂಡೇ ಇರುವ ಎರಡು ಎಕರೆ ಸರ್ಕಾರಿ ಭೂಮಿ ಸ್ಮೃತಿವನ ಸ್ಥಾಪನೆಯಾಗುತ್ತಿದೆ. ಸ್ಮೃತಿವನದ ಶಿಲಾನ್ಯಾಸದ ದಿನವೇ ಮುಂಜಾನೆ ಗೋಶಾಲೆ ಆವರಣದಲ್ಲಿರುವ ಅಶ್ವತ್ಥ ವೃಕ್ಷಕ್ಕೆ ಉಪನಯನ ಹಾಗೂ ವಿವಾಹ ವಿಧಿಗಳನ್ನು ನಡೆಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಠದ ಸಿಇಒ ಸುಬ್ರಹ್ಮಣ್ಯ ಭಟ್ ಸಗ್ರಿ, ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ, ನೀಲಾವರ ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಕುಮಾರ್, ವಾಸುದೇವ ಭಟ್ ಪೆರಂಪಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.