ADVERTISEMENT

ದೇಶ ಸುತ್ತುತ್ತಾ ಪರಿಸರ ಜಾಗೃತಿ: ನಿತ್ಯಾನಂದ ಅಡಿಗರ ಬೈಕ್ ಯಾತ್ರೆ

ಬಾಲಚಂದ್ರ ಎಚ್.
Published 24 ಜೂನ್ 2019, 19:31 IST
Last Updated 24 ಜೂನ್ 2019, 19:31 IST
ವಿದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಸಂಭ್ರಮದಲ್ಲಿ ಪರಿಸರ ಪ್ರೇಮಿ ನಿತ್ಯಾನಂದ ಅಡಿಗ
ವಿದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಸಂಭ್ರಮದಲ್ಲಿ ಪರಿಸರ ಪ್ರೇಮಿ ನಿತ್ಯಾನಂದ ಅಡಿಗ   

ಜಾಗತಿಕ ತಾಪಮಾನ ಹೆಚ್ಚಳ, ಅಂತರ್ಜಲ ಕುಸಿತ, ಬರಡಾಗುತ್ತಿರುವ ಕೃಷಿಭೂಮಿ, ಹೀಗೆ, ಪ್ರಕೃತಿಯ ಮೇಲಿನ ದೌರ್ಜನ್ಯದ ವಿರುದ್ಧ ಜನಜಾಗೃತಿ ಮೂಡಿಸಲು ಬೈಕ್‌ನಲ್ಲಿ ದೇಶ–ವಿದೇಶಗಳನ್ನು ಸುತ್ತಿ ಬಂದಿದ್ದಾರೆ ವೃತ್ತಿಯಲ್ಲಿ ಅರ್ಚಕರಾಗಿರುವ ಪ್ರವೃತ್ತಿಯಲ್ಲಿ ಪರಿಸರ ಪ್ರೇಮಿಯಾಗಿರುವ ನಿತ್ಯಾನಂದ ಅಡಿಗರು.

30 ವರ್ಷ ಪ್ರಾಯದ ಅಡಿಗರು,ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕರು. ಎಂಬಿಎ, ಆಗಮ ಪ್ರವೀಣ ಪದವಿ ಪಡೆದಿದ್ದರೂ ನೆಲದ ಸೆಳೆತಕ್ಕೆ ಸಿಕ್ಕು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಧ್ಯಾತ್ಮದ ಜತೆಗೆ ಪ್ರಕೃತಿಯೊಂದಿಗೆ ಬೆಸೆದುಕೊಂಡಿದ್ದಾರೆ.

ಪರಿಸರ ಸಂರಕ್ಷಣೆಯ ಬಗ್ಗೆ ವಿಭಿನ್ನವಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈಚೆಗೆ ಯಶಸ್ವಿಯಾಗಿ ಬೈಕ್‌ ಯಾತ್ರೆ ಮುಗಿಸಿದ್ದಾರೆ. ನೇಪಾಳ, ಭೂತಾನ್, ಬಾಂಗ್ಲಾದೇಶಕ್ಕೆ ತೆರಳಿ ಪರಿಸರ ಪ್ರೇಮದ ಜತೆಗೆ ದೇಶ ಪ್ರೇಮ ಮೆರೆದಿದ್ದಾರೆ. 18 ದಿನಗಳ 10,200 ಕಿ.ಮೀ ದೂರದ ಸುಧೀರ್ಘ ಯಾತ್ರೆಯ ನೆನಪುಗಳನ್ನು ಅಡಿಗರು ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ.

ADVERTISEMENT

‘ಮೇ 29ಕ್ಕೆ ಕೊಲ್ಲೂರಿನಿಂದ ಆರಂಭವಾದ ಯಾತ್ರೆ ಜೂನ್ 16ಕ್ಕೆ ಮುಕ್ತಾಯವಾಯಿತು. ಈ ಅವಧಿಯಲ್ಲಿ ವಿಭಿನ್ನ ಸಂಸ್ಕತಿ, ಭಾಷೆ, ಪ್ರಾದೇಶಿಕ ವೈವಿಧ್ಯತೆಯನ್ನು ಅರಿಯಲು ಸಾಧ್ಯವಾಯಿತು. ನೆಲ, ಜಲ, ಪ್ರಕೃತಿಯ ರಕ್ಷಣೆಯ ಕುರಿತು, ಭಿನ್ನ ಭಾಷಿಗರ ಜತೆ ಸಂವಾದ ಮಾಡುವ ಅವಕಾಶ ದೊರೆಯಿತು ಎಂದರು.

ಯಾತ್ರೆಯ ಅವಧಿಯಲ್ಲಿ ಭವ್ಯ ಭಾರತವೇ ಕಣ್ತುಂಬಿಕೊಂಡಂತಾಯಿತು. ಜತೆಗೆ, ವಿದೇಶಗಳಲ್ಲಿ ಭಾರತದ ತ್ರಿವರ್ಣ ಹಾರಿಸುವ ಕನಸೂ ನೇರವೇರಿತು ಎಂದು ಅಡಿಗರು ಪ್ರವಾಸದ ಅನುಭವವನ್ನು ಹಂಚಿಕೊಂಡರು.

ಬೈಕ್‌ ಪ್ರವಾಸದ ಮುಖ್ಯ ಉದ್ದೇಶವೇ ಪರಿಸರ ಸಂರಕ್ಷಣೆ. ವಿಭಿನ್ನವಾಗಿ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಬೈಕ್‌ ಯಾತ್ರೆ ಮಾಡಲು ನಿರ್ಧರಿಸಿದೆ. ಯುವಕರನ್ನು ಪರಿಸರದತ್ತ ಸೆಳೆಯಲು ವಿದೇಶಿ ಮೂಲದ ಹಾರ್ಲೆ ಡೇವಿಡ್‌ಸನ್‌ ಬೈಕ್‌ ಅನ್ನು ಯಾತ್ರೆಗೆ ಬಳಸಿಕೊಳ್ಳಲಾಯಿತು ಎಂದರು.

ಯಾತ್ರೆಯ ಅವಧಿಯಲ್ಲಿ ಹಾರ್ಲೆ ಡೇವಿಡ್‌ಸನ್‌ ಬೈಕ್‌ ನೋಡಲು ಗುಂಪು ಗುಂಪಾಗಿ ಯುವಕರು ಬರುತ್ತಿದ್ದರು. ಈ ಅವಕಾಶವನ್ನು ಬಳಸಿಕೊಂಡು ಯಾತ್ರೆಯ ಉದ್ದೇಶವನ್ನು ಅವರಿಗೆ ತಿಳಿಸುತ್ತಿದ್ದೆ. ಪರಿಸರ ಸಂರಕ್ಷಣೆಯ ಕುರಿತು ಅಭಿಪ್ರಾಯಗಳನ್ನು ಮಂಡಿಸುತ್ತಿದ್ದೆ ಎಂದರು.

ಹೈದರಾಬಾದ್‌, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ನೇಪಾಳ ಮಾರ್ಗವಾಗಿ ಭೂತಾನ್‌ ತಲುಪಿದೆ. ಅಲ್ಲಿನ ಜನರೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಿದೆ. ಪರಿಸರ ಜಾಗೃತಿ ಕರಪತ್ರಗಳನ್ನು ಹಂಚಿ, ಚರ್ಚಿಸಿದೆ ಎಂದರು.

ಬಾಂಗ್ಲಾದೇಶದೊಳಗೆ150 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಬೈಕ್‌ಗಳಿಗೆ ಪ್ರವೇಶವಿಲ್ಲ. ಹಾಗಾಗಿ, ಬಾಂಗ್ಲಾದ ಗಡಿಯಲ್ಲಿ ದೇಶದ ಸೈನಿಕರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಅವರೂ ಪರಿಸರ ಕಾಳಜಿಯನ್ನು ಪ್ರಶಂಸಿಸಿದರು. ಮೂರು ದೇಶಗಳಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿ ಮರಳಿದೆ ಎಂದರು.

ಕರಾವಳಿಯಲ್ಲಿ ನೀರಿಗೆ ಕ್ಷಾಮ ಎದುರುಗಿರುವುದು ಆತಂಕಕಾರಿ ವಿಚಾರ. ಬೇಸಿಗೆಯಲ್ಲೂ ಇಲ್ಲಿನ ತೋಡುಗಳಲ್ಲಿ ನೀರು ಜಿನುಗುತ್ತಿತ್ತು. ಈಗ ಮಳೆಗಾಲದಲ್ಲೇ ನೀರು ಕಾಣುತ್ತಿಲ್ಲ. ಅಂತರ್ಜಲ ಕುಸಿದಿದೆ. ಕೃಷಿಯಿಂದ ಯುವಕರು ವಿಮುಖರಾಗುತ್ತಿದ್ದಾರೆ. ಭೂಮಿಗೆ ನೀರಿಂಗಿಸುವ ಕೆಲಸ ಆಗುತ್ತಿಲ್ಲ. ಭವಿಷ್ಯದ ದೃಷ್ಟಿಯಿಂದ ಪರಿಸರವನ್ನು ಕಾಪಾಡಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.