ADVERTISEMENT

ಮಹಿಳೆಯರ ವಿವಾಹ ವಯಸ್ಸು 21ಕ್ಕೇರಿಸಿದರೆ ಹಿಂದೂಗಳಿಗೆ ಅನ್ಯಾಯ: ಶಿರಸಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 12:06 IST
Last Updated 21 ಡಿಸೆಂಬರ್ 2021, 12:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಮಹಿಳೆಯರ ಕನಿಷ್ಠ ವಿವಾಹದ ವಯಸ್ಸನ್ನು 21ಕ್ಕೆ ಏರಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಹಿಂದೂಗಳಿಗೆ ಅನ್ಯಾಯವಾಗಲಿದೆ ಎಂದು ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕೃಷ್ಣ ಮಠದಲ್ಲಿ ಪರ್ಯಾಯ ಅದಮಾರು ಮಠದ ಪರ್ಯಾಯ ಮಂಗಲೋತ್ಸವ 'ವಿಶ್ವಾರ್ಪಣಂ' ಸಮಾರಂಭದಲ್ಲಿ ಮಾತನಾಡಿದ ಸ್ವಾಮೀಜಿ, ಮುಸ್ಲಿಮರಿಗೆ ಹಾಗೂ ಕ್ರೈಸ್ತರಿಗೆ ವಿವಾಹದ ಕಾನೂನುಗಳು ಬೇರೆಯಿದ್ದು, ಹಿಂದೂಗಳಿಗೆ ಮಾತ್ರ ವಿವಾಹದ ಕನಿಷ್ಠ ವಯಸ್ಸನ್ನು ಏರಿಕೆ ಮಾಡಲು ಹೊರಟಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಮುಸ್ಲಿಮರ ವಿವಾಹದ ವಯಸ್ಸು ಕಡಿಮೆಯಿರುವುದರಿಂದ ಜನಸಂಖ್ಯಾ ಏರಿಕೆ ದರ ಹೆಚ್ಚಾಗಿದೆ. ಪ್ರತಿಯಾಗಿ, ಹಿಂದೂಗಳ ಜನಸಂಖ್ಯಾ ಏರಿಕೆ ದರ ಕಡಿಮೆಯಿದ್ದು, ಹಿಂದೂಸ್ತಾನದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗುವ ಅಪಾಯವಿದೆ. ಹಿಂದೂಗಳಿಗೆ ಅನ್ಯಾಯವಾಗುವುದನ್ನು ತಡೆಯಲು ಗಂಭೀರ ಚಿಂತನೆ ನಡೆಯಬೇಕು ಎಂದರು.

ADVERTISEMENT

ವಿವಾಹದ ವಯಸ್ಸು ಏರಿಕೆಯಿಂದ ತಡವಾಗಿ ವಿವಾಹಗಳು ನಡೆಯಲಿದ್ದು ವಿಚ್ಛೇದನಗಳು ಹೆಚ್ಚಾಗಲಿವೆ, ಕುಟುಂಬ ವ್ಯವಸ್ಥೆ ಶಿಥಿಲವಾಗುತ್ತವೆ. ಬಾಲ್ಯವಿವಾಹಕ್ಕೆ ಶಾಸ್ತ್ರಗಳಲ್ಲಿಯೂ ವಿರೋಧವಿದ್ದು, ಮದುವೆಗೆ 18 ಸೂಕ್ತ ವಯಸ್ಸು ಎಂದು ಸ್ವಾಮೀಜಿ ತಿಳಿಸಿದರು.

ಹಿಂದೂಗಳ ಪರ ಕೆಲಸ ಮಾಡಿ:

ದೇವಸ್ಥಾನಗಳಿಗೆ ಸ್ವಾಯತ್ತತೆ ನೀಡಲು ವಕ್ಫ್‌ ಬೋರ್ಡ್‌ ಮಾದರಿಯಲ್ಲಿ ಸರ್ಕಾರದ ಅನಗತ್ಯ ಹಸ್ತಕ್ಷೇಪ ಇಲ್ಲದ ಸ್ವಾಯತ್ತ ಮಂಡಳಿ ರಚನೆಯಾಗಬೇಕು. ಹಿಂದೂ ಧರ್ಮದ ರಕ್ಷಣೆಯಷ್ಟೆ ಆದ್ಯತೆ ಹಿಂದೂ ದೇವಾಲಯಗಳ ರಕ್ಷಣೆಗೂ ಸಿಗಬೇಕು. ದೇವಸ್ಥಾನಗಳು ವ್ಯವಸ್ಥಿತವಾಗಿ ನಡೆಯುತ್ತಿದ್ದರೂ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವುದು ಸಲ್ಲದು ಎಂದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಹಿಂದೂಗಳ ಪರವಾದ ಕೆಲಸಗಳು ನಡೆಯುತ್ತಿಲ್ಲ. ಸದ್ಯ ಅಸ್ತಿತ್ವದಲ್ಲಿರುವ ಧಾರ್ಮಿಕ ದತ್ತಿ ಕಾನೂನುಗಳು ವ್ಯವಸ್ಥಿತವಾಗಿಲ್ಲ ಎಂದು ಗಂಗಾಧರೇಶ್ವರ ಸರಸ್ವತಿ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.