ADVERTISEMENT

ಉಡುಪಿ | ಸೌಜನ್ಯ ನ್ಯಾಯಕ್ಕಾಗಿ ಮೊಂಬತ್ತಿ ಬೆಳಗಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 6:48 IST
Last Updated 10 ಅಕ್ಟೋಬರ್ 2025, 6:48 IST
ಸೌಜನ್ಯ ನ್ಯಾಯಕ್ಕಾಗಿ ಮೊಂಬತ್ತಿ ಬೆಳಗಿಸಿ ಪ್ರತಿಭಟನೆ ನಡೆಯಿತು
ಸೌಜನ್ಯ ನ್ಯಾಯಕ್ಕಾಗಿ ಮೊಂಬತ್ತಿ ಬೆಳಗಿಸಿ ಪ್ರತಿಭಟನೆ ನಡೆಯಿತು   

ಉಡುಪಿ: ‘ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ’ಯ ವತಿಯಿಂದ ರಾಜ್ಯದಾದ್ಯಂತ ಕರೆ ನೀಡಿದ್ದ ಜನಾಗ್ರಹ ದಿನದ ಅಂಗವಾಗಿ ಉಡುಪಿ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ಗುರುವಾರ ಸೌಜನ್ಯ ಪರ ನ್ಯಾಯಕ್ಕಾಗಿ ಮೊಂಬತ್ತಿ ಹಿಡಿದು ಪ್ರತಿಭಟನೆ ನಡೆಯಿತು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಸೌಜನ್ಯ ಕೊಲೆ ನಡೆದು ಇಂದಿಗೆ 13 ವರ್ಷ ಕಳೆದರೂ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದಿರುವುದು ವ್ಯವಸ್ಥೆಯ ದುರಂತವಾಗಿದೆ ಎಂದರು.

ಧರ್ಮಸ್ಥಳ ಗ್ರಾಮದಲ್ಲಿ ನಡೆದ ನೂರಾರು ಅಸಹಜ ಸಾವುಗಳಿಗೂ ನ್ಯಾಯ ಸಿಕ್ಕಿಲ್ಲ. ಆರೋಪಿಗಳ ಪತ್ತೆ ಆಗಿಲ್ಲ. ಇಂತಹ ಅನ್ಯಾಯದ ವಿರುದ್ಧ ಹೋರಾಟ ತೀವ್ರಗೊಳಿಸಬೇಕು ಎಂದು ಅವರು ಹೇಳಿದರು.

ADVERTISEMENT

ರಾಜ್ಯ ಸರ್ಕಾರ ಎಸ್ಐಟಿ ತನಿಖೆ ನಡೆಸುತ್ತಿರುವುದನ್ನು ಅಭಿನಂದಿಸಬೇಕು. ಆದರೆ, ಎಸ್ಐಟಿ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದು, ಎಸ್ಐಟಿಗೆ ರಾಜ್ಯ ಸರ್ಕಾರ ಬಲ ನೀಡಬೇಕು. ಅಲ್ಲದೇ ಧರ್ಮಸ್ಥಳದಲ್ಲಿ ನಡೆದ ಎಲ್ಲಾ ಪ್ರಕರಣಗಳನ್ನು ಎಸ್ಐಟಿಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ ಮಾತನಾಡಿದರು. ಕವಿರಾಜ್ ಎಸ್. ಕಾಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜನವಾದಿ ಮಹಿಳಾ ಸಂಘಟನೆಯ ಸರೋಜ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಶ್ಚಂದ್ರ ನಾಯಕ್, ದಯಾನಂದ ಕೋಟ್ಯಾನ್, ಸಯ್ಯದ್, ರಮೇಶ್ ಉಡುಪಿ, ರಾಮ ಕಾರ್ಕಡ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು, ಬೀಡಿ ಸಂಘಟನೆಯ ಉಮೇಶ್ ಕುಂದರ್, ನಳಿನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.