ಶಿಕ್ಷಕರು (ಪ್ರಾತಿನಿಧಿಕ ಚಿತ್ರ)
ಉಡುಪಿ: ರಾಜ್ಯದಲ್ಲಿ ಶಿಶುಕೇಂದ್ರಿತ ಅನುದಾನ ಯೋಜನೆಯಡಿ ಕಾರ್ಯನಿರ್ವಹಿಸುವ ವಿಶೇಷ ಶಾಲೆಗಳ ಶಿಕ್ಷಕರಿಗೆ ಸೇವಾ ಭದ್ರತೆ ಕಲ್ಪಿಸಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ.
ಶ್ರವಣ ದೋಷ, ದೃಷ್ಟಿದೋಷವಿರುವ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗಾಗಿ ವಿಶೇಷ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಟ್ರಸ್ಟ್‌ಗಳು ನಡೆಸುವ ಈ ಶಾಲೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರ ಅನುಪಾತಕ್ಕೆ ತಕ್ಕಂತೆ ಶಿಶುಕೇಂದ್ರಿತ ಅನುದಾನ ಬರುತ್ತಿದೆ.
ರಾಜ್ಯದಾದ್ಯಂತ ಶಿಶುಕೇಂದ್ರಿತ 160 ವಿಶೇಷ ಶಾಲೆಗಳಿದ್ದು, ಹಲವು ವರ್ಷಗಳಿಂದ ಶಿಕ್ಷಕರಾಗಿರುವ ತಮಗೆ ಇತರ ಶಾಲೆಗಳ ಶಿಕ್ಷಕರಿಗೆ ಸಿಗುವ ಯಾವುದೇ ಸೌಲಭ್ಯ ದೊರಕುತ್ತಿಲ್ಲ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.
ಶಿಶುಕೇಂದ್ರಿತ ವಿಶೇಷ ಶಾಲೆಗಳಲ್ಲಿ ವಿಶೇಷ ಶಿಕ್ಷಕರು ಗೌರವ ಧನದಲ್ಲಿ ಕೆಲಸ ಮಾಡಬೇಕಾಗಿದೆ. ಗೌರವ ಧನದ ಬದಲು ವೇತನ ನೀಡಬೇಕು ಎನ್ನುತ್ತಾರೆ ಉಡುಪಿ ಜಿಲ್ಲಾ ವಿಶೇಷ ಶಿಕ್ಷಕ– ಶಿಕ್ಷಕೇತರರ ಸಂಘದ ಅಧ್ಯಕ್ಷ ಎಚ್. ರವೀಂದ್ರ.
ವಿಶೇಷ ಶಿಕ್ಷಕರು ಐದು ವರ್ಷಕ್ಕೊಮ್ಮೆ ಭಾರತೀಯ ಪುನರ್ವಸತಿ ಮಂಡಳಿಯ (ಆರ್‌ಸಿಐ) ಮಾನ್ಯತೆ ನವೀಕರಿಸಬೇಕಾಗಿದೆ. ಅದರ ತರಬೇತಿಗಾಗಿ ಹಣ ಖರ್ಚು ಮಾಡಬೇಕಾಗಿದೆ. ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಇಂತಹ ಶಿಕ್ಷಕರಿದ್ದು ಉಡುಪಿ ಜಿಲ್ಲೆಯಲ್ಲಿ 150 ಜನ ಇದ್ದಾರೆ ಎನ್ನುತ್ತಾರೆ ಅವರು.
‘ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧೀನದ ರಾಜ್ಯ ವಿಶೇಷ ಅನುದಾನಿತ ಶಾಲೆಗಳ ಶಿಕ್ಷಕರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ನಮಗೂ ನೀಡಬೇಕು. ನಮ್ಮಲ್ಲಿ ಸೇವಾ ಹಿರಿತನ ಪರಿಗಣಿಸುವುದಿಲ್ಲವಾದ್ದರಿಂದ ಹಲವು ವರ್ಷಗಳಿಂದ ವಿಶೇಷ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಅನ್ಯಾಯವಾಗಿದೆ’ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ನೌಕರಿ ಕಳೆದುಕೊಳ್ಳುವ ಭೀತಿ: ಸಾಮಾನ್ಯ ಶಿಕ್ಷಕರ ವೇತನದ ಅರ್ಧಕ್ಕಿಂತಲೂ ಕಡಿಮೆ ವೇತನ ಪಡೆಯುತ್ತಿರುವ ಶಿಶುಕೇಂದ್ರಿತ ವಿಶೇಷ ಶಾಲೆಯ ಶಿಕ್ಷಕರಿಗೆ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದರೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗುತ್ತದೆ. ಈ ಕಾರಣಕ್ಕೆ ವಿಶೇಷ ಮಕ್ಕಳ ಪ್ರವೇಶಾತಿಗಾಗಿಯೂ ಈ ಶಿಕ್ಷಕರು ಅಲೆದಾಡಬೇಕಾಗಿದೆ.
ವಿಶೇಷ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲು ಶ್ರಮ ವಹಿಸಿದರೂ ಅದಕ್ಕಾಗಿ ಪ್ರಯಾಣ ಭತ್ಯೆ ಕೂಡ ಸಿಗುವುದಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಪ್ರತಿ ವರ್ಷ ವೇತನ ಹೆಚ್ಚಳವಾಗುವುದಿಲ್ಲ. ನಾಲ್ಕೊ ಐದೊ ವರ್ಷಗಳಿಗೊಮ್ಮೆ ಯಾವುದೇ ಮಾನದಂಡವಿಲ್ಲದೆ ವೇತನ ಹೆಚ್ಚಳ ಮಾಡಲಾಗುತ್ತಿದೆ. ಅದು ಕೂಡ ಅತಿ ಕಡಿಮೆ ಮೊತ್ತ ಎಂದು ವಿಶೇಷ ಶಿಕ್ಷಕರು ಹೇಳುತ್ತಾರೆ.
ಸಾಮಾನ್ಯ ಶಾಲೆಯ ಶಿಕ್ಷಕರಿಗೆ ಸಿಗುವ ಸವಲತ್ತುಗಳು ಸೇವಾ ಭದ್ರತೆ ನಿವೃತ್ತಿ ನಂತರದ ಸೌಲಭ್ಯಗಳು ನಮಗೂ ಸಿಗಬೇಕು. ಸರ್ಕಾರ ಗಮನ ಹರಿಸಿ ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಸಿಗುವಂತೆ ಮಾಡಬೇಕುಎಚ್. ರವೀಂದ್ರ ಉಡುಪಿ ಜಿಲ್ಲಾ ವಿಶೇಷ ಶಿಕ್ಷಕ ಶಿಕ್ಷಕೇತರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.