ADVERTISEMENT

ಕೃಷ್ಣನೂರಿನಲ್ಲಿ ಅಷ್ಟಮಿ ಸಂಭ್ರಮ: ಸೆ.3ಕ್ಕೆ ವಿಟ್ಲಪಿಂಡಿ ಉತ್ಸವ

‌ನಾಳೆ ಮಧ್ಯರಾತ್ರಿ ತುಳಸಿ ಕಟ್ಟೆಯಲ್ಲಿ ಕೃಷ್ಣಾರ್ಘ್ಯ ಪ್ರಧಾನ: ಪಲಿಮಾರು ವಿದ್ಯಾಧೀಶ ಶ್ರೀ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 17:34 IST
Last Updated 1 ಸೆಪ್ಟೆಂಬರ್ 2018, 17:34 IST
ಶ್ರೀಕೃಷ್ಣಮಠದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಂಗೋಲಿ ಬಿಡಿಸುವ ಸ್ಪರ್ಧೆಯನ್ನು ಪಲಿಮಾರು ಶ್ರೀಗಳು ವೀಕ್ಷಿಸಿದರು.
ಶ್ರೀಕೃಷ್ಣಮಠದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಂಗೋಲಿ ಬಿಡಿಸುವ ಸ್ಪರ್ಧೆಯನ್ನು ಪಲಿಮಾರು ಶ್ರೀಗಳು ವೀಕ್ಷಿಸಿದರು.   

ಉಡುಪಿ: ಶ್ರೀಕೃಷ್ಣಮಠದಲ್ಲಿ ಸೆ.2ರಂದು ಭಕ್ತಿ, ಸಂಭ್ರಮ, ಸಡಗರದಿಂದ ಶ್ರೀಕೃಷ್ಣ ಜಯಂತಿಯನ್ನು ಆಚರಿಸಲಾಗುವುದು ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ತಿಳಿಸಿದರು.

ಕೃಷ್ಣಮಠದ ಕನಕ ಮಂಟಪದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೆ.2ರಂದು ಬೆಳಿಗ್ಗೆ 6ಕ್ಕೆ ಕೃಷ್ಣನಿಗೆ ಲಕ್ಷಾರ್ಚನೆ ನಡೆಯಲಿದೆ. 9 ಗಂಟೆಗೆ ಮಹಾಪೂಜೆ ನಡೆಯಲಿದೆ. 10ಕ್ಕೆ ಲಡ್ಡಿಗೆ ಮೂಹೂರ್ತ ನಡೆಯಲಿದೆ ಎಂದರು.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 7ಕ್ಕೆ ಪ್ರವೀಣ್ ಗೋಡ್ಖಿಂಡಿ ಅವರ ಸಂಗೀತ, ರಾತ್ರಿ 10ಕ್ಕೆ ಕೃಷ್ಣಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ, ರಾತ್ರಿ 11.48ಕ್ಕೆ ಶ್ರೀಕೃಷ್ಣಮಠದ ತುಳಸಿಕಟ್ಟೆಯಲ್ಲಿ ಶ್ರೀಕೃಷ್ಣಾರ್ಘ್ಯ ಪ್ರದಾನ ನಡೆಯಲಿದೆ ಎಂದು ತಿಳಿಸಿದರು.

ADVERTISEMENT

ಸೆ.3 ವಿಟ್ಲಪಿಂಡಿ ಉತ್ಸವದಂದು ದಿನವಿಡೀ ಶ್ರೀಕೃಷ್ಣ ಲೀಲೋತ್ಸವಗಳು ನಡೆಯಲಿದೆ. ಭಕ್ತಿಪ್ರಧಾನ, ಸಾಂಸ್ಕೃತಿಕ, ಮನರಂಜನೆಯ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 6ಕ್ಕೆ ಮಹಾಮಂಗಳಾರತಿ, 10.30ಕ್ಕೆ ಕನಕಗೋಪುರದ ಎದುರು ದಹಿಹಂಡಿ ಉದ್ಘಾಟನೆ, 11ಕ್ಕೆ ರಾಜಾಂಗಣದಲ್ಲಿ ಕೃಷ್ಣ ಪ್ರಸಾದ ಉದ್ಘಾಟನೆ ಹಾಗೂ ಭಕ್ತರಿಗೆ ಹಾಲುಪಾಯಸ ಹಾಗೂ ಗುಂಡಿಟ್ಟು ಲಡ್ಡಿಗೆ ವಿಶೇಷ ಪ್ರಸಾದ ವಿತರಿಸಲಾಗುವುದು ಎಂದರು.

ಮಧ್ಯಾಹ್ನ 3ಕ್ಕೆ ವಿಟ್ಲಪಿಂಡಿ ಉತ್ಸವ ಸಂಭ್ರಮ ಕಳೆಗಟ್ಟಲಿದ್ದು, ಮೊಸರು ಕುಡಿಕೆ ಹೊಡೆಯುವ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಕ್ಕೆ ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ 7ಕ್ಕೆ ಪೂಜೆ ನೆರವೇರಲಿದೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು.

ಚಿಣ್ಣರ ಸಂತರ್ಪಣೆ ಯೋಜನೆಯಡಿ ಶಾಲೆಗಳಿಗೆ ಲಡ್ಡು, ಚಕ್ಕಲಿ ಪೊಟ್ಟಣಗಳನ್ನು ವಿತರಿಸಲಾಗುವುದು. 8ರಂದು ಶ್ರೀಕೃಷ್ಣ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು. ಸೆ.9ರಂದು ಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ ಹಮ್ಮಿಕೊಳ್ಳಲಾಗಿದೆ ಎಂದರು.

ಶನಿವಾರ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣ ಕುರಿತು ಚಿತ್ರಬಿಡಿಸುವ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಜತೆಗೆ ಮಹಿಳೆಯರಿಗೆ ಹೂಕಟ್ಟುವ ಸ್ಪರ್ಧೆ ಆಯೋಜಿಸಲಾಗಿತ್ತು. ರಾಜಾಂಗಣದಲ್ಲಿ ಮಕ್ಕಳು ನೃತ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.