ADVERTISEMENT

SSLCಯಲ್ಲಿ ಪ್ರಥಮಸ್ಥಾನಿ ಭೂಮಿಕಾ ಪೈಗೆ ಗಗನಯಾನಿಯ ಆಸೆ

ಕಟಪಾಡಿಯ ಅಜ್ಜಿಯ ಮನೆಯಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 9 ಮೇ 2023, 4:05 IST
Last Updated 9 ಮೇ 2023, 4:05 IST
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಭೂಮಿಕಾ ಪೈ ಕಟಪಾಡಿಯ ಅಜ್ಜಿಯ ಮನೆಯಲ್ಲಿ ಸಂಭ್ರಮ ಆಚರಿಸಿದರು
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಭೂಮಿಕಾ ಪೈ ಕಟಪಾಡಿಯ ಅಜ್ಜಿಯ ಮನೆಯಲ್ಲಿ ಸಂಭ್ರಮ ಆಚರಿಸಿದರು   

ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಪೂರ್ಣಾಂಕಗಳನ್ನು ಪಡೆಯುವ ಮುಲಕ ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಪಡೆದಿರುವ ಭೂಮಿಕಾ ಪೈ ಕಟಪಾಡಿಯಲ್ಲಿರುವ ಅಜ್ಜಿಯ ಮನೆಯಲ್ಲಿ ಸೋಮವಾರ ತಾಯಿ ಹಾಗೂ ಸಂಬಂಧಿಗಳೊಂದಿಗೆ ಸಂಭ್ರಮ ಆಚರಿಸಿದರು.

ಮೂಲತಃ ಉಡುಪಿಯವರಾಗಿರುವ ಭೂಮಿಕಾ ಪೈ ಬೆಂಗಳೂರಿನಲ್ಲಿ ಪೋಷಕರಾದ ರಮೇಶ್‌ ಪೈ ಹಾಗೂ ರಮ್ಯಾ ಪೈ ಜತೆ ನೆಲೆಸಿದ್ದು ಅಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಾಧನೆಯ ಸಂಭ್ರಮವನ್ನು ಪತ್ರಿಕೆಯ ಜತೆ ಹಂಚಿಕೊಂಡ ಭೂಮಿಕಾ ಪೈಗೆ ಭವಿಷ್ಯದಲ್ಲಿ ಬಾಹ್ಯಾಕಾಶಯಾನಿಯಾಗುವ ಆಸೆ ಇದೆಯಂತೆ.

‘625 ಅಂಕ ಬರುವ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ನಿರೀಕ್ಷೆಗೂ ಮೀರಿ ಅಂಕ ಬಂದಿರುವುದು ಖುಷಿಕೊಟ್ಟಿದೆ. ಬೆಳಗಿನ ಜಾವ ಎದ್ದು ಓದುವ ಹವ್ಯಾಸ ಇರಲಿಲ್ಲ. ಶಾಲೆ ಬಿಟ್ಟ ಬಳಿಕ ಸಂಜೆಯ ಹಾಗೂ ರಾತ್ರಿಯ ಹೊತ್ತು ಓದಿಗೆ ಹೆಚ್ಚು ಸಮಯ ಮೀಸಲಿಡುತ್ತಿದ್ದೆ. ಕಷ್ಟದ ವಿಷಯಗಳಿಗೆ ಹೆಚ್ಚು ಸಮಯ ಮೀಸಲಿಡುತ್ತಿದ್ದೆ. ಎಲ್ಲಿಯೂ ಟ್ಯೂಷನ್‌ಗೆ ಹೋಗಿರಲಿಲ್ಲ’ ಎಂದು ಭೂಮಿಕಾ ತಿಳಿಸಿದರು.

ADVERTISEMENT

ಶಾಲೆಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ವಿಶೇಷ ತರಗತಿಗಳು, ಶಿಕ್ಷಕರ ಪ್ರೋತ್ಸಾಹ, ಸಹಕಾರ ಸಾಧನೆಗೆ ಪ್ರಮುಖ ಕಾರಣ. ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಭೂಮಿಕಾ ಪೈ ತಿಳಿಸಿದರು.

ತಾಯಿ ರಮ್ಯಾ ಪೈ ಮಾತನಾಡಿ, ‘ಮಗಳು ರಾಜ್ಯ ಮೊದಲ ರ‍್ಯಾಂಕ್ ಪಡೆದಿರುವುದು ಹೆಮ್ಮೆ ಹಾಗೂ ಖುಷಿ ತಂದಿದೆ. ಶಾಲೆ ಹಾಗೂ ಮನೆಯಲ್ಲಿ ಶ್ರದ್ಧೆಯಿಂದ ಓದುತ್ತಿದ್ದಳು. ಮಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಮುಂದೆ ಆಕೆಯ ಇಷ್ಟದಂತೆ ಓದಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.