ADVERTISEMENT

ಉಡುಪಿ: ಸೇಂಟ್ ಮೇರಿಸ್‌ ದ್ವೀಪಕ್ಕೆ ದಿಗ್ಬಂಧನ

10 ದಿನಗಳಲ್ಲಿ 6 ಪ್ರವಾಸಿಗರ ಸಾವು: ನೀರಿಗಿಳಿಯದಂತೆ ತಡೆಬೇಲಿ

ಬಾಲಚಂದ್ರ ಎಚ್.
Published 1 ಮೇ 2022, 23:30 IST
Last Updated 1 ಮೇ 2022, 23:30 IST
ಮಲ್ಪೆಯ ಸೇಂಟ್ ಮೇರಿಸ್ ದ್ವೀಪದಲ್ಲಿ ಪ್ರವಾಸಿಗರು ನೀರಿಗಿಳಿಯದಂತೆ ತಡೆಬೇಲಿ ಹಾಕಿರುವುದು.
ಮಲ್ಪೆಯ ಸೇಂಟ್ ಮೇರಿಸ್ ದ್ವೀಪದಲ್ಲಿ ಪ್ರವಾಸಿಗರು ನೀರಿಗಿಳಿಯದಂತೆ ತಡೆಬೇಲಿ ಹಾಕಿರುವುದು.   

ಉಡುಪಿ: ಸೇಂಟ್‌ ಮೇರಿಸ್ ದ್ವೀಪ ಹಾಗೂ ಮಲ್ಪೆ ಬೀಚ್‌ನಲ್ಲಿ ಈಚೆಗೆ 6 ಪ್ರವಾಸಿಗರು ಮೃತಪಟ್ಟ ಹಿನ್ನೆಲೆಯಲ್ಲಿ ದ್ವೀಪದಲ್ಲಿ ಗರಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸರಣಿ ಪ್ರವಾಸಿಗರ ಸಾವಿನಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಪ್ರವಾಸಿಗರು ದ್ವೀಪದಲ್ಲಿ ಸಮುದ್ರಕ್ಕಿಳಿಯದಂತೆ ತೀರದ ಉದ್ದಕ್ಕೂ ತಡೆಬೇಲಿ ಹಾಕಿಸಿದೆ. ಅಲ್ಲಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಲಾಗಿದೆ. 8 ಮಂದಿ ಲೈಫ್‌ ಗಾರ್ಡ್‌ ಹಾಗೂ 6 ಭದ್ರತಾ ಸಿಬ್ಬಂದಿಯನ್ನು ದ್ವೀಪದಲ್ಲಿ ನಿಯೋಜಿಸಲಾಗಿದೆ.

ವಾಚ್ ಟವರ್‌:

ADVERTISEMENT

ದ್ವೀಪದಲ್ಲಿ ಪ್ರವಾಸಿಗರ ಚಲನವಲನಗಳ ಮೇಲೆ ಕಣ್ಣಿಡಲು ಎರಡು ವಾಚ್‌ ಟವರ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ದ್ವೀಪದ ಯಾವುದೇ ಭಾಗದಲ್ಲಿ ಸಮುದ್ರಕ್ಕಿಳಿಯುವವರನ್ನು ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವವರನ್ನು ಗುರುತಿಸಲು ಸಾಧ್ಯವಾಗಲಿದೆ.

ಮಲ್ಪೆ ಬೀಚ್‌ನಿಂದ ಸೇಂಟ್ ಮೇರಿಸ್ ಐಲ್ಯಾಂಡ್‌ಗೆ ಇಳಿಯುವ ಪ್ರವಾಸಿಗರಿಗೆ ಎಚ್ಚರಿಕೆ ಹಾಗೂ ಜಾಗೃತಿಯ ಸಂದೇಶಗಳನ್ನು ಮುಟ್ಟಿಸಲು ಲೌಡ್‌ ಸ್ಪೀಕರ್‌ಗಳನ್ನು ಹಾಕಲಾಗಿದೆ. ಅಪಾಯಕಾರಿ ಸ್ಥಳಗಳಲ್ಲಿ ನೀರಿಗಿಳಿಯದಂತೆ, ಸೆಲ್ಫಿ ತೆಗೆದುಕೊಳ್ಳಲು ಬಂಡೆಗಳನ್ನು ಹತ್ತದಂತೆ ಸೂಚನೆಗಳನ್ನು ನೀಡಲಾಗುತ್ತಿದೆ.

ಮಳೆಗಾಲ ಆರಂಭವಾದ ಕೂಡಲೇ ದ್ವೀಪಕ್ಕೆ ಪ್ರವಾಸಿಗರ ನಿರ್ಬಂಧ ಇರುತ್ತದೆ. ಮಳೆಗಾಲ ಮುಗಿಯುವಷ್ಟರಲ್ಲಿ ದ್ವೀಪದಲ್ಲಿ ಸೆಲ್ಫಿ ಸ್ಟಾಂಡ್‌ಗಳನ್ನು ಹಾಕಲಾಗುವುದು. ದ್ವೀಪದ ಕುರಿತು ಸಮಗ್ರ ಮಾಹಿತಿ ನೀಡಲು ಹಾಗೂ ದ್ವೀಪವನ್ನು ಒಂದು ಸುತ್ತು ಹಾಕಿಸಲು ಟೂರಿಸ್ಟ್ ಗೈಡ್‌ಗಳನ್ನು ನೇಮಕ ಮಾಡಲಾಗುವುದು. ಇದರ ಜತೆಗೆ ಗರಿಷ್ಠ ಸುರಕ್ಷತಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು ಮಲ್ಪೆ ಬೀಚ್‌ ಕಾರ್ಯ ನಿರ್ವಾಹಕ ಅಧಿಕಾರಿ ಸುದೇಶ್‌ ಶೆಟ್ಟಿ.

10 ದಿನಗಳಲ್ಲಿ 6 ಮಂದಿ ಸಾವು:

ಏ.4ರಂದು ಬೆಂಗಳೂರಿನ ಜಾಲಹಳ್ಳಿಯ ಸಾಮ್ರಾಟ್ ಮಜುಂದಾರ್ (28) ಎಂಬಾತ ಸ್ನೇಹಿತನ ಮದುವೆಗೆ ಬಂದು ಮಲ್ಪೆಯ ರೆಸಾರ್ಟ್‌ನಲ್ಲಿ ಸ್ನೇಹಿತರೊಂದಿಗೆ ವಾಸ್ತವ್ಯ ಹೂಡಿ, ಬೀಚ್‌ನಲ್ಲಿ ಈಜುವಾಗ ಅಲೆಗಳ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದರು.

ಈ ಘಟನೆ ಮಾಸುವ ಬೆನ್ನಲ್ಲೇ ಏ.7ರಂದು ಕೇರಳದ ಕೊಟ್ಟಾಯಂನ ಮಂಗಳಂ ಎಂಜಿನಿಯರಿಂಗ್ ಕಾಲೇಜಿನಿಂದ ಸೇಂಟ್‌ ಮೇರಿಸ್‌ ದ್ವೀಪಕ್ಕೆ ಬಂದಿದ್ದ ಅಮಲ್ ಸಿ.ಅನಿಲ್‌, ಅಲನ್ ರೆಜಿ, ಆ್ಯಂಟೊನಿ ಶಿನಾಯಿ ದ್ವೀಪದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದೈತ್ಯ ಅಲೆಗಳ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪಿದ್ದರು.

ಈ ಘಟನೆ ನಡೆದು ವಾರ ಕಳೆಯುವಷ್ಟರಲ್ಲೇ ಏ.14ರಂದು ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಸತೀಶ್ ಎಂ.ನಂದಿಹಳ್ಳಿ ಹಾಗೂ ಸತೀಶ್ ಎಸ್‌.ಕಲ್ಯಾಣಶೆಟ್ಟಿ ಕೂಡ ದ್ವೀಪದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಅಲೆಗಳ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದರು.

ಕೇವಲ 10 ದಿನಗಳಲ್ಲಿ 6 ಪ್ರವಾಸಿಗರು ಮೃತಪಟ್ಟ ಪರಿಣಾಮ ಆತಂಕ ಸೃಷ್ಟಿಯಾಗಿತ್ತು. ಮಲ್ಪೆ ಬೀಚ್‌ ಹಾಗೂ ಸೇಂಟ್ ಮೇರಿಸ್‌ ಐಲ್ಯಾಂಡ್‌ನಲ್ಲಿ ಪ್ರವಾಸಿಗರಿಗೆ ಸುರಕ್ಷತೆ ನೀಡುವಲ್ಲಿ ಲೋಪಗಳಾಗಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಟೀಕೆಗಳು ಕೇಳಿಬಂದಿತ್ತು.

ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ರವಾಸಿಗರಿಗೆ ಗರಿಷ್ಠ ಸುರಕ್ಷತೆ ಒದಗಿಸುವಂತೆ ಮಲ್ಪೆ ಬೀಚ್ ನಿರ್ವಹಣಾ ಪ್ರಾಧಿಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಅದರಂತೆ, ಮಲ್ಪೆ ಹಾಗೂ ಸೇಂಟ್‌ ಮೇರಿಸ್‌ ದ್ವೀಪದಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

‘ಮಲ್ಪೆ ಬೀಚ್‌, ದ್ವೀಪದ ವೈಶಿಷ್ಟ್ಯ’

ಮಲ್ಪೆ ಬೀಚ್ ಹಾಗೂ ಸೇಂಟ್‌ ಮೇರಿಸ್‌ ಐಲ್ಯಾಂಡ್‌ ವಿಭಿನ್ನ ಹಾಗೂ ವಿಶಿಷ್ಟ ಭೌಗೋಳಿಕ ಪರಿಸರವನ್ನು ಹೊಂದಿದ್ದು, ಪ್ರವಾಸಿಗರ ಪಾಲಿನ ನೆಚ್ಚಿನ ತಾಣಗಳು ಎನಿಸಿಕೊಂಡಿವೆ. ಸ್ವಚ್ಛವಾದ ತೀರ, ನುಣಪಾದ ಹಾಗೂ ಮೈಗೆ ಹಿತ ಎನಿಸುವ ಮರಳು, ಸುಂದರ ಸೂರ್ಯಾಸ್ತಮಾನ ಮಲ್ಪೆ ಬೀಚ್‌ನ ವೈಶಿಷ್ಟ್ಯಗಳು. ಹಾಗೆಯೇ ಶಿಲ್ಪಿಯ ಅಪೂರ್ವ ಕೆತ್ತನೆಯಂತಿರುವ ಕಡಿದಾದ ಕಪ್ಪು ಕಲ್ಲುಗಳು, ತೀರದುದ್ದಕ್ಕೂ ಹರಡಿಕೊಂಡಿರುವ ಕಪ್ಪೆಚಿಪ್ಪುಗಳ ರಾಶಿ, ಭೌಗೋಳಿಕವಾಗಿ ವಿಶಿಷ್ಟ ಪರಿಸರ ಹೊಂದಿರುವ ಸೇಂಟ್ ಮೇರಿಸ್‌ ದ್ವೀಪ ತನ್ನ ಪುಟ್ಟ ಒಡಲಿನಲ್ಲಿ ಪ್ರಕೃತಿಯ ಸೌಂದರ್ಯವನ್ನೇ ಅಡಗಿಸಿಕೊಟ್ಟುಕೊಂಡಿದೆ.

‘ದ್ವೀಪದ ಮತ್ತೊಂದು ಮುಖ ಅಧ್ಯಯನ’

ಸೇಂಟ್‌ ಮೇರಿಸ್ ದ್ವೀಪ ವಿಶಿಷ್ಟವಾದ ಭೂರಚನೆ ಹಾಗೂ ಪರಿಸರ ಹೊಂದಿದ್ದು ಇಡೀ ದ್ವೀಪ ಅಧ್ಯಯನ ಯೋಗ್ಯವಾಗಿರುವ ಕಾರಣ ಪ್ರವಾಸಿಗರಿಗೆ ವಿಭಿನ್ನವಾದ ಅನುಭವ ಕಟ್ಟಿಕೊಡಲು ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆಯೊಂದಿಗೆ ಕಾರ್ಯಯೋಜನೆ ರೂಪಿಸುತ್ತಿದೆ. ದ್ವೀಪದಲ್ಲಿರುವ ಬೃಹತ್ ನೀಲ್ಗಲ್ಲುಗಳ ಮಾಹಿತಿ, ಕಡಲಜೀವಿಗಳ ವಿವರ, ಎಲ್ಲಿಯೂ ಕಾಣಸಿಗದಂತಹ ಕಪ್ಪೆಚ್ಚಿಪ್ಪುಗಳ ಬಗ್ಗೆ ಅಧ್ಯಯನ ನಡೆಸಿ ಪ್ರವಾಸಿಗರಿಗೆ ಮಾಹಿತಿ ನೀಡುವ ಉದ್ದೇಶವಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕೂರ್ಮಾರಾವ್‌.

ಸೆಲ್ಫಿ ಹುಚ್ಚಿಗೆ ಬಲಿಯಾದ ಜೀವಗಳು

ಸೇಂಟ್‌ ಮೇರಿಸ್ ದ್ವೀಪದಲ್ಲಿ ಮೃತಪಟ್ಟ ಐವರು ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳಲು ಹೋಗಿ ದುರಂತ ಅಂತ್ಯ ಕಂಡಿದ್ದಾರೆ. ಸಮುದ್ರದ ರೌದ್ರತೆಯ ಬಗ್ಗೆ ಅರಿವಿಲ್ಲದೆ, ಅಪಾಯಕಾರಿಯಾದ ಬಂಡೆಗಳ ತುದಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸ ಮಾಡಲು ಹೋಗಿ ಐದು ಮುಗ್ಧ ಜೀವಗಳು ಬಲಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.