ಬ್ರಹ್ಮಾವರ ಸಕ್ಕರೆ ಕಾರ್ಖಾನೆ
ಉಡುಪಿ: 2025–26ನೇ ಸಾಲಿನ ರಾಜ್ಯ ಬಜೆಟ್ ಕೆಲ ದಿನಗಳಲ್ಲೆ ಮಂಡನೆಯಾಗುವ ಸಾಧ್ಯತೆ ಇದ್ದು, ಜಿಲ್ಲೆಯ ಜನರಲ್ಲಿ ಹಲವು ನಿರೀಕ್ಷೆಗಳು ಗರಿಗೆದರಿವೆ.
ಈ ಹಿಂದಿನ ಬಜೆಟ್‌ಗಳಲ್ಲಿ ಘೋಷಿಸಿರುವ ಹಲವು ಯೋಜನೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಪ್ರಮುಖ ಬೇಡಿಕೆಗಳಿಗೂ ಮನ್ನಣೆ ಸಿಕ್ಕಿಲ್ಲ ಎಂಬ ಅಳಲಿನ ನಡುವೆಯೂ ಹೊಸ ನಿರೀಕ್ಷೆಗಳು ಜನರಲ್ಲಿ ಚಿಗುರೊಡೆದಿವೆ.
ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕೆಂಬುದು ಇಲ್ಲಿನ ಜನರ ಬಹುಕಾಲದ ಬೇಡಿಕೆಯಾಗಿದೆ. ವೈದ್ಯಕೀಯ ಕಾಲೇಜಿಗಾಗಿ ಈ ಹಿಂದೆ ನಿವೇಶನವನ್ನು ಕೂಡ ಗುರುತಿಸಲಾಗಿತ್ತಾದರೂ ವೈದ್ಯಕೀಯ ಕಾಲೇಜು ಮಾತ್ರ ಸಾಕಾರವಾಗಿಲ್ಲ.
ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯಾದರೆ ವೈದ್ಯಕೀಯ ಶಿಕ್ಷಣವು ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸುಲಭವಾಗಿ ಕೈಗೆಟುಕಬಹುದು ಎನ್ನುವುದು ಹಲವರ ಅಭಿಪ್ರಾಯವಾಗಿದೆ.
ಉಡುಪಿ ನಗರಕ್ಕೆ ದಿನದ 24 ಗಂಟೆಯೂ ಕುಡಿಯುವ ನೀರು ಒದಗಿಸುವ ಗುರಿಯನ್ನು ಹೊಂದಿರುವ ವಾರಾಹಿ ಕುಡಿಯುವ ನೀರಿನ ಯೋಜನೆಯು ಕುಂಟುತ್ತಾ ಸಾಗಿ ಈಗ ಅಂತಿಮ ಹಂತಕ್ಕೆ ತಲುಪಿದೆ. ವಾರಾಹಿ ಯೋಜನೆಯ ಮೂಲಕ ಕೇವಲ ಕುಡಿಯುವ ನೀರು ಒದಗಿಸಿದರೆ ಸಾಲದು. ವಾರಾಹಿ ಬಲದಂಡೆಯನ್ನು ಬಳಸಿಕೊಂಡು ಕೃಷಿಗೆ ನೀರುಣಿಸುವ ಯೋಜನೆಯನ್ನು ಕೂಡ ಕಾರ್ಯರೂಪಕ್ಕೆ ತರಬೇಕು ಎನ್ನುವ ಕೂಗು ಜನರಿಂದ ಬಹು ಹಿಂದಿನಿಂದಲೂ ಕೇಳಿ ಬರುತ್ತಿದೆ.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕು ಎಂಬುದು ಕೂಡ ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ಈ ಹಿಂದೆ ಸರ್ಕಾರಗಳು ಆಶ್ವಾಸನೆಗಳನ್ನು ನೀಡಿತ್ತಾದರೂ ಅದು ಜಾರಿಗೆ ಬಂದಿಲ್ಲ ಎನ್ನುತ್ತಾರೆ ಜನರು.
ಈ ಕಾರ್ಖಾನೆಯ 110 ಎಕರೆ ಪ್ರದೇಶದಲ್ಲಿ ಕರಾವಳಿಯ ಮೂರು ಜಿಲ್ಲೆಗಳ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಕ್ಕರೆ ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಉದ್ದಿಮೆಗಳನ್ನು ಸ್ಥಾಪಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕೆಂಬ ಪ್ರಯತ್ನಗಳು ಎರಡು ದಶಕಗಳಿಂದಲೂ ನಡೆಯುತ್ತಿವೆ. ಆದರೆ ಅದು ಸಫಲವಾಗಿಲ್ಲ.
ಜಿಲ್ಲೆಯಲ್ಲಿ ಕೃಷಿ ಕಾಲೇಜು ಪ್ರಾರಂಭಿಸಬೇಕೆಂಬ ಆಗ್ರಹಗಳು ಕೂಡ ರೈತಾಪಿ ವರ್ಗದಿಂದ ಹಲವು ವರ್ಷಗಳಿಂದಲೇ ಕೇಳಿಬರುತ್ತಿವೆ. ಬ್ರಹ್ಮಾವರ ಪ್ರದೇಶದಲ್ಲಿ ಕೃಷಿ ಕಾಲೇಜು ಆರಂಭವಾದರೆ ಹೆಚ್ಚಿನ ಅನುಕೂಲವಾಗಲಿದೆ. ಯುವಜನರನ್ನೂ ಕೃಷಿಯತ್ತ ಆಕರ್ಷಿಸಲು ಸಾಧ್ಯವಿದೆ ಎಂಬ ವಾದಗಳೂ ಕೇಳಿ ಬಂದಿವೆ.
ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ನಿವಾರಿಸಿ ಜನರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸಬೇಕೆಂಬ ಒತ್ತಾಯಗಳೂ ಕೇಳಿ ಬಂದಿವೆ. ಅತ್ಯಾಧುನಿಕ ಸೌಲಭ್ಯಗಳುಳ್ಳ ನೂತನ ಜಿಲ್ಲಾಸ್ಪತ್ರೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ಮರವಂತೆ ಮತ್ತು ಗಂಗೊಳ್ಳಿ ಪ್ರದೇಶಗಳಲ್ಲಿ ಸಾಕಷ್ಟು ಮೀನುಗಾರಿಗೆ ಚಟುವಟಿಕೆಗಳು ನಡೆಯುತ್ತಿದ್ದರೂ. ಈ ಎರಡು ಪ್ರದೇಶಗಳಲ್ಲಿ ಸುಸಜ್ಜಿತ ಬಂದರು ಇನ್ನೂ ಸಾಕಾರವಾಗಿಲ್ಲ ಎಂಬುದು ಮೀನುಗಾರರ ಅಳಲಾಗಿದೆ.
ಹಿಂದಿನ ಬಜೆಟ್‌ನಲ್ಲಿ ಸೀ ಆಂಬ್ಯುಲೆನ್ಸ್ ಘೋಷಿಸಲಾಗಿತ್ತು. ಆದರೆ ಅದು ಇದುವರೆಗೂ ಜಿಲ್ಲೆಗೆ ತಲುಪಿಲ್ಲ ಎನ್ನುತ್ತಾರೆ ಜನರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕಾಲು ಸಂಕ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಯೂ ಇನ್ನೂ ಪೂರ್ಣರೂಪದಲ್ಲಿ ಸಾಕಾರವಾಗಿಲ್ಲ ಎಂದೂ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.