ಉಡುಪಿ: ಮೇ ತಿಂಗಳಲ್ಲಿ ಬಿಸಿಲಿನ ಧಗೆ ಏರಿಕೆಯಾಗುತ್ತಿದ್ದಂತೆ ಗಿಡ, ಮರಗಳಲ್ಲಿ ಹೂವುಗಳು ಮರೆಯಾಗಿ ಜೇನು ಸಾಕಣೆದಾರರಿಗೂ ಇಳುವರಿ ಕುಸಿತ ಉಂಟಾಗುತ್ತದೆ.
ಸಾಮಾನ್ಯವಾಗಿ ಜನವರಿ ತಿಂಗಳಿನಿಂದ ಮೇ 15ರವರೆಗೆ ಜೇನು ಸಾಕಣೆಯಲ್ಲಿ ಅಧಿಕ ಇಳುವರಿ ಸಿಗುವ ಕಾಲವಾಗಿದೆ. ಆದರೆ ಈ ಬಾರಿ ಬಿಸಿಲಿನ ಧಗೆ ಅಧಿಕವಾಗಿರುವ ಕಾರಣ ಏಪ್ರಿಲ್ 15ರಿಂದಲೇ ಇಳುವರಿ ಕುಸಿದಿದೆ ಎನ್ನುತ್ತಾರೆ ಜೇನು ಸಾಕಣೆದಾರರು.
ಜಿಲ್ಲೆಯಲ್ಲಿ 600ಕ್ಕೂ ಅಧಿಕ ಜೇನು ಸಾಕಣೆದಾರರಿದ್ದಾರೆ. ಕೆಲವರು ಉಪಕೃಷಿಯಾಗಿ ಜೇನು ಸಾಕಣೆ ಮಾಡಿದರೆ, ಅದನ್ನೇ ಪೂರ್ಣ ಪ್ರಮಾಣದಲ್ಲಿ ನೆಚ್ಚಿಕೊಂಡವರೂ ಇದ್ದಾರೆ.
ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಜೇನು ಸಾಕಣೆ ಮಾಡುವವರಿಗೆ ಅತ್ಯುತ್ತಮ ಇಳುವರಿ ಸಿಗುತ್ತದೆ. ಈ ಬಾರಿ ಏಪ್ರಿಲ್ 15ರವರೆಗೆ ಉತ್ತಮ ಇಳುವರಿ ಸಿಕ್ಕಿದೆ. ಆದರೆ ಅನಂತರ ಕುಸಿತ ಕಂಡಿದೆ ಎಂದು ಜೇನು ಸಾಕಣೆದಾರರು ತಿಳಿಸುತ್ತಾರೆ.
ಕಡಿಮೆ ನಿರ್ವಹಣೆ ವೆಚ್ಚ ಹಾಗೂ ಹೆಚ್ಚು ಲಾಭದಾಯಕ ಆಗಿರುವ ಕಾರಣಕ್ಕೆ ಜಿಲ್ಲೆಯಲ್ಲಿ ಹೆಚ್ಚಿನವರು ಜೇನು ಸಾಕಣೆಯತ್ತ ಮುಖ ಮಾಡಿದ್ದಾರೆ. ಜೊತೆಗೆ ಅದರ ಉಪ ಉತ್ಪನ್ನವಾದ ಜೇನು ಮೇಣದಿಂದಲೂ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ತೋಟಗಾರಿಕೆ ಇಲಾಖೆ ಅಡಿಯಲ್ಲಿ ನೀಡುವ ತರಬೇತಿ ಪಡೆದು ಹಲವು ಮಂದಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ.
‘ಉಷ್ಣಾಂಶ 35 ಡಿಗ್ರಿ ಸೆಲ್ಶಿಯಸ್ ಒಳಗೆ ಇದ್ದರೆ ಜೇನು ಕೃಷಿಯಲ್ಲಿ ಉತ್ತಮ ಇಳುವರಿ ಬರುತ್ತದೆ. 40 ಡಿಗ್ರಿ ಸೆಲ್ಶಿಯಸ್ ದಾಟಿದರೆ ಜೇನು ಕೃಷಿಗೆ ಏಟು ಬೀಳುತ್ತದೆ. ಜೊತೆಗೆ ಅಕಾಲಿಕವಾಗಿ ಮಳೆ ಬಂದರೂ ಸಮಸ್ಯೆಯಾಗುತ್ತದೆ. ಹೂವಿನ ಪರಾಗಗಳು ಒದ್ದೆಯಾಗುವುದರಿಂದ ಜೇನಿನಲ್ಲಿ ನೀರಿನಂಶ ಹೆಚ್ಚಾಗಿ ಹುಳಿಯಾಗುತ್ತದೆ’ ಎನ್ನುತ್ತಾರೆ ಜೇನು ಸಾಕಣೆದಾರ ಕಾರ್ಕಳದ ಈದುವಿನ ಶೈಲೇಶ್ ಮರಾಠೆ.
‘ಜನವರಿಯಿಂದ ಮೇ ವರೆಗೆ ಪ್ರತೀ 10 ದಿವಸಗಳಿಗೊಮ್ಮೆ ಪೆಟ್ಟಿಗೆಯಿಂದ ಜೇನು ತೆಗೆಯುತ್ತೇವೆ. ಮೇ 15ರ ನಂತರ ಜೇನು ತೆಗೆಯುವುದಿಲ್ಲ ಅದನ್ನು ಮಳೆಗಾಲದಲ್ಲಿ ಜೇನು ನೊಣಗಳಿಗೆ ತಿನ್ನಲು ಬಿಟ್ಟಿರುತ್ತೇವೆ’ ಎಂದು ಅವರು ಹೇಳುತ್ತಾರೆ.
‘ವಾತಾವರಣದಲ್ಲಿ ತಾಪಮಾನ ಹೆಚ್ಚಾದಾಗ ರಾಣಿ ನೊಣವು ಮೊಟ್ಟೆ ಇಡುವ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುತ್ತದೆ. ದಿನಕ್ಕೆ ಸುಮಾರು 1500 ರಷ್ಟು ಮೊಟ್ಟೆ ಇಡುವ ರಾಣಿ ನೊಣವು ಈ ಸಂದರ್ಭದಲ್ಲಿ ಸುಮಾರು 300 ರಷ್ಟು ಮೊಟ್ಟೆಗಳನ್ನು ಮಾತ್ರ ಇಡುತ್ತದೆ. ಇದರಿಂದ ಪೆಟ್ಟಿಗೆಯಲ್ಲಿ ನೊಣಗಳ ಸಂಖ್ಯೆ ಕಡಿಮೆಯಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ.
ನಾನು 80 ಜೇನು ಪೆಟ್ಟಿಗೆ ಇಟ್ಟಿದ್ದೇನೆ. ಈ ವರ್ಷ ಏಪ್ರಿಲ್ ಮೇ ತಿಂಗಳಲ್ಲಿ ಬಿಸಿಲಿನ ಧಗೆಯಿಂದಾಗಿ ಎರಡು ಕ್ವಿಂಟಲ್‌ನಷ್ಟು ಇಳುವರಿ ಕಡಿಮೆ ಬಂದಿದೆಶೈಲೇಶ್ ಮರಾಠೆ ಜೇನು ಸಾಕಣೆದಾರ ಈದು ಕಾರ್ಕಳ
‘ಬಿಸಿಲಿನಲ್ಲಿ ಪೆಟ್ಟಿಗೆ ಇಡಬಾರದು’ ಜೇನು ಕೃಷಿಕರು ಜೇನು ಪೆಟ್ಟಿಗೆಗಳನ್ನು ಇರಿಸುವಾಗ ಹೆಚ್ಚು ಬಿಸಿಲು ಬೀಳುವ ಜಾಗದಲ್ಲಿ ಇರಿಸಬಾರದು. ಹಾಗೆ ಇಟ್ಟರೆ ಬೇಸಿಗೆಯ ಬಿಸಿಲಿಗೆ ಜೇನು ಪೆಟ್ಟಿಗೆಯೊಳಗಿನ ಮೇಣ ಕರಗಿ ಹಾನಿಯಾಗುತ್ತದೆ. ಹೊಸದಾಗಿ ಜೇನು ಕೃಷಿ ಮಾಡುವವರಿಗೆ ಇದರ ಬಗ್ಗೆ ಮಾಹಿತಿ ಇರುವುದಿಲ್ಲ. ಅಂತಹವರಿಗೆ ಹೆಚ್ಚು ತರಬೇತಿ ನೀಡುವ ಅಗತ್ಯ ಇದೆ. ತೋಟಗಾರಿಕೆ ಇಲಾಖೆಯು ಹೆಚ್ಚು ಹೆಚ್ಚು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎನ್ನುತ್ತಾರೆ ಶೈಲೇಶ್ ಮರಾಠೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.