ADVERTISEMENT

ಜನರು ಮೂಢನಂಬಿಕೆಯ ದಾಸರಾಗುತ್ತಿರುವುದು ವಿ‍ಪರ್ಯಾಸ: ಹಯವದನ ಮೂಡಸಗ್ರಿ

ಕುಂದಾಪುರ: ಸೌಜನ್ಯಾ ಹತ್ಯೆ ನ್ಯಾಯಕ್ಕಾಗಿ ಜನಾಗ್ರಹ ಸಭೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 6:34 IST
Last Updated 11 ಅಕ್ಟೋಬರ್ 2025, 6:34 IST
ಕುಂದಾಪುರ ಹೆಂಚು ಕಾರ್ಮಿಕರ ಭವನದಲ್ಲಿ ಸೌಜನ್ಯಾ ಹತ್ಯೆ ನ್ಯಾಯಕ್ಕಾಗಿ ಜನಾಗ್ರಹ ಸಭೆ ನಡೆಯಿತು
ಕುಂದಾಪುರ ಹೆಂಚು ಕಾರ್ಮಿಕರ ಭವನದಲ್ಲಿ ಸೌಜನ್ಯಾ ಹತ್ಯೆ ನ್ಯಾಯಕ್ಕಾಗಿ ಜನಾಗ್ರಹ ಸಭೆ ನಡೆಯಿತು   

ಕುಂದಾಪುರ: ‘ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಕಳ್ಳತನ, ಮೌಢ್ಯದಂತಹ ಘಟನೆಗಳನ್ನು ನೋಡಿಯೂ ನೋಡದಂತಿರುವ ಜನರು ಮೂಢನಂಬಿಕೆಗಳ ದಾಸರಾಗುತ್ತಿರುವುದು ವ್ಯವಸ್ಥೆಯ ವಿಪರ್ಯಾಸ’ ಎಂದು ನಿವೃತ್ತ ಉಪನ್ಯಾಸಕ ಹಯವದನ ಆಚಾರ್ಯ ಮೂಡಸಗ್ರಿ ಹೇಳಿದರು.

ಇಲ್ಲಿನ ಹೆಂಚು ಕಾರ್ಮಿಕರ ಭವನದಲ್ಲಿ ಗುರುವಾರ ಸಂಜೆ ಸೌಹಾರ್ದ ಕರ್ನಾಟಕ ಸಂಘಟನೆಯ ಕುಂದಾಪುರ ಘಟಕದ ಆಶ್ರಯದಲ್ಲಿ ನಡೆದ ಸೌಜನ್ಯ ಹತ್ಯೆಯ ನ್ಯಾಯಕ್ಕಾಗಿ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು.

ಆಳುವ ವರ್ಗಕ್ಕೆ ಜನರು ಮೋಸ ಹೋಗುತ್ತಾ ಇರಬೇಕು, ಮೂಢನಂಬಿಕೆಯ ದಾಸ್ಯರಾಗಿಯೇ ಉಳಿಯಬೇಕು. ಮೂಢನಂಬಿಕೆ ನಿಯಂತ್ರಣಕ್ಕೆ ಕಾನೂನು ಮಾಡಿದರೂ, ಕಠಿಣ ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ. ದೊಡ್ಡ ಜನ ಎಂದು ಗುರುತಿಸಿಕೊಂಡವರಿಗೆ ಕ್ಷೇತ್ರದ ದೇವರ ಮೇಲೆಯೇ ನಂಬಿಕೆ ಇಲ್ಲ. ಸೌಜನ್ಯಾ ಅತ್ಯಾಚಾರ ಮಾಡಿದವರು ಯಾರೇ ಆಗಿದ್ದರೂ ಅವರಿಗೆ ಕಾನೂನು ಅಡಿ ಶಿಕ್ಷೆಯಾಗಬೇಕು. ನ್ಯಾಯ ಕೇಳುವ ದನಿ ಅಡಗಿಸುವ ಪ್ರಯತ್ನದ ವಿರುದ್ಧ ಸಂಘಟಿತ ಹೋರಾಟ ನಡೆಯಬೇಕು ಎಂದರು.

ADVERTISEMENT

ದ.ಕ. ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಮಾತನಾಡಿ,‌ ಧರ್ಮಸ್ಥಳದಲ್ಲಿ ನಡೆದಿರುವ ಭೂಮಾಫಿಯಾ, ಕಾನೂನು ಭಂಜಕ ಚಟುವಟಿಕೆಗಳ ವಿರುದ್ಧ ಹಿಂದಿನಿಂದಲೂ ಎಡಪಂಥೀಯ ಸಂಘಟನೆಗಳು ಸಮಾನ ಮನಸ್ಕರೊಂದಿಗೆ ಹೋರಾಟ ಸಂಘಟಿಸುತ್ತಾ ಬಂದಿವೆ. ಅಂತಃಕರಣ, ಆತ್ಮಸಾಕ್ಷಿ ಇದ್ದಲ್ಲಿ ಧರ್ಮಸ್ಥಳದಲ್ಲಿ ನಡೆದಿರುವ ಅನುಮಾನಾಸ್ಪದ ಸಾವಿನ ಪ್ರಕರಣಗಳ ಬಗ್ಗೆ ಹೆಗ್ಗಡೆ ಅವರೇ ನ್ಯಾಯಯುತ ತನಿಖೆಗೆ ಆಗ್ರಹಿಸಬೇಕು ಎಂದರು.

ಪತ್ರಕರ್ತ ಶಶಿಧರ ಹೆಮ್ಮಾಡಿ ಮಾತನಾಡಿ, ಬುರುಡೆ ಸಿಕ್ಕಿಲ್ಲ ಎಂದ ತಕ್ಷಣ ಆರೋಪಗಳೆಲ್ಲ ಬುರುಡೆಯಾಗುವುದಿಲ್ಲ. ಕ್ಷೇತ್ರದ ಮೇಲೆ, ಅಲ್ಲಿನ ದೇವರುಗಳ ಮೇಲೆ ಅಥವಾ ಹೆಗ್ಗಡೆ ಅವರ ಮೇಲೆ ಯಾರು ಆರೋಪ ಮಾಡಿಲ್ಲ. ಕಳೆದ ಐದು ವರ್ಷಗಳಿಂದ ಕೇಳಿ ಬರುತ್ತಿರುವ ಅಕ್ರಮ, ದೌರ್ಜನ್ಯ, ಅನುಮಾನಾಸ್ಪದ ಸಾವುಗಳ ಕುರಿತು ಸಮಗ್ರ ತನಿಖೆಯ ಅಗತ್ಯವಿದೆ. ಸರಿಯಾದ ರೀತಿಯಲ್ಲಿ ತನಿಖೆಯಾದಲ್ಲಿ ಪ್ರಸ್ತುತ ಯಾರು ಇತರರ ಮೇಲೆ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೋ ಅವರ ಷಡ್ಯಂತ್ರಗಳು ಬೆಳಕಿಗೆ ಬರುವ ಸಾಧ್ಯತೆ ನಿಚ್ಚಳವಾಗಿದೆ ಎಂದರು.

ಕಾರ್ಮಿಕ ಸಂಘಟನೆಯ ಮುಖಂಡ ಮಹಾಬಲ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಪ್ರಮುಖರಾದ ಎಚ್. ನರಸಿಂಹ, ಚಂದ್ರಶೇಖರ ವಡೇರಹೋಬಳಿ, ಎ. ರಾಮಕೃಷ್ಣ ಹೇರ್ಳೆ, ಗಣೇಶ್ ಮೆಂಡನ್, ರವಿ ವಿ.ಎಂ, ರಾಜು ದೇವಾಡಿಗ, ಆಶಾ ಕರ್ವೆಲ್ಲೊ, ಬಲ್ಕಿಸ್ ಬಾನು, ರಾಜೇಶ್ ವಡೇರಹೋಬಳಿ, ರಮೇಶ್ ವಡೇರಹೋಬಳಿ, ತಿಮ್ಮಪ್ಪ ಗುಲ್ವಾಡಿ, ಶಂಕರ ಕೆಂಚನೂರು, ಸದಾನಂದ ಬೈಂದೂರು, ರಾಜು ಬೆಟ್ಟನಮನೆ, ರಾಜಾ ಬಿಟಿಆರ್, ಅಶೋಕ್ ಹಟ್ಟಿಯಂಗಡಿ ಭಾಗವಹಿಸಿದ್ದರು. ರಮೇಶ್ ಗುಲ್ವಾಡಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.