ADVERTISEMENT

ಮೀನುಗಾರರ ಹೋರಾಟಕ್ಕೆ ಬೆಂಬಲ: ಪೇಜಾವರ ಶ್ರೀ

ಬೋಟ್‌ ಪತ್ತೆಗೆ ಶಕ್ತಿಮೀರಿ ಪ್ರಯತ್ನ: ಮೀನುಗಾರ ಮುಖಂಡರಿಗೆ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 15:43 IST
Last Updated 3 ಜನವರಿ 2019, 15:43 IST
ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಗುರುವಾರ ಮಲ್ಪೆ ಬಂದರಿಗೆ ಭೇಟಿನೀಡಿ ಮೀನುಗಾರ ಮುಖಂಡರ ಜತೆ ಮಾತನಾಡಿದರು.
ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಗುರುವಾರ ಮಲ್ಪೆ ಬಂದರಿಗೆ ಭೇಟಿನೀಡಿ ಮೀನುಗಾರ ಮುಖಂಡರ ಜತೆ ಮಾತನಾಡಿದರು.   

ಉಡುಪಿ: ನಾಪತ್ತೆಯಾಗಿರುವ ಮೀನುಗಾರರ ರಕ್ಷಣೆಗೆ ಶ್ರಮಿಸುತ್ತೇನೆ. ಮೀನುಗಾರರ ಹೋರಾಟಕ್ಕೆ ಬೆಂಬಲ ನೀಡುತ್ತೇನೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಮೀನುಗಾರರಿಗೆ ಭರವಸೆ ನೀಡಿದರು.

ಗುರುವಾರ ಮಲ್ಪೆ ಬಂದರಿಗೆ ಭೇಟಿನೀಡಿ ಮೀನುಗಾರ ಮುಖಂಡರೊಂದಿಗೆ ಮಾತನಾಡಿದ ಅವರು, ‘ಬೋಟ್ ನಾಪತ್ತೆಯಾಗಿರುವ ವಿಚಾರ ತಡವಾಗಿ ತಿಳಿಯಿತು. ಮೀನುಗಾರರ ರಕ್ಷಣೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸೇರಿದ್ದು. ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದು ಶ್ರೀಗಳು ಕಿವಿಮಾತು ಹೇಳಿದರು.

ಮೀನುಗಾರರನ್ನು ಅಪಹರಣ ಮಾಡಲಾಗಿದೆಯಾ ಎಂಬ ಶಂಕೆ ಮೂಡಿದೆ. ಎಲ್ಲ ದೃಷ್ಟಿಕೋನಗಳಿಂದಲೂ ತನಿಖೆ ನಡೆಯಬೇಕು. ಶೀಘ್ರವಾಗಿ ಮೀನುಗಾರರನ್ನು ಸುರಕ್ಷಿತವಾಗಿ ಕರೆತರಬೇಕು ಎಂದು ಶ್ರೀಗಳು ಆಗ್ರಹಿಸಿದರು.

ADVERTISEMENT

ಮೀನುಗಾರರ ಜತೆಗೆ ಅಷ್ಠಮಠಗಳು ಉತ್ತಮ ಬಾಂಧವ್ಯ ಹೊಂದಿವೆ. ಅವರ ಎಲ್ಲ ಹೋರಾಟಗಳಿಗೆ ಶ್ರೀಕೃಷ್ಣಮಠದ ಬೆಂಬಲ ಇರುತ್ತದೆ ಎಂದು ಆಶ್ವಾಸನೆ ನೀಡಿದರು.

ಇದೇವೇಳೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಮಾತನಾಡಿ, ‘ಮೀನುಗಾರರ ಕಣ್ಮರೆಯಿಂದಾಗ ಮಲ್ಪೆ ಬಂದರಿನಲ್ಲಿ ಕತ್ತಲೆ ಆವರಿಸಿದೆ. ಮೀನುಗಾರಿಕೆ ಸ್ಥಬ್ಧವಾಗಿದ್ದು, ಸಾವಿರಾರು ಬೋಟ್‌ಗಳು ಲಂಗರು ಹಾಕಿಕೊಂಡಿವೆ. ಮೀನುಗಾರರು ಸಂಕಷ್ಟದಲ್ಲಿದ್ದು, ಸರ್ಕಾರಗಳು ನೆರವಿಗೆ ದಾವಿಸಬೇಕು ಎಂದು ಒತ್ತಾಯಿಸಿದರು.

ಮೀನುಗಾರಿಕೆ ನಿಂತಿರುವುದರಿಂದ ಉದ್ಯಮದ ಮೇಲೆ ಅವಲಂಬಿತವಾಗಿರುವ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಸಮುದ್ರಕ್ಕಿಳಿಯಲು ಮೀನುಗಾರರು ಹಿಂದೇಟು ಹಾಕುತ್ತಿದ್ದಾರೆ.ನಾಪತ್ತೆಯಾದ ಮೀನುಗಾರರ ಕುಟುಂಬಗಳಿಗೆ ಸಾಂತ್ವನ ಹೇಳಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ಆತಂಕದಲ್ಲಿದ್ದಾರೆ ಎಂದರು.

ಬೋಟ್ ನಾಪತ್ತೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಬೋಟ್ ಪತ್ತೆ ನಡೆಸಬೇಕು ಎಂದು ಕುಂದರ್ ಒತ್ತಾಯಿಸಿದರು.

ಈ ಸಂದರ್ಭ ಮುಖಂಡರಾದ ಎಚ್‌.ಟಿ.ಕಿದಿಯೂರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.