ADVERTISEMENT

ಮಟ್ಟುಗುಳ್ಳದ ಸಂಶೋಧನೆ ಅಗತ್ಯವಿದೆ: ಸೋದೆ ಶ್ರೀ

ಮಟ್ಟುಗುಳ್ಳ ಕೃಷಿಯ ಸುಸ್ಥಿರ ಅಭಿವೃದ್ಧಿ ಕುರಿತ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 15:41 IST
Last Updated 27 ಫೆಬ್ರುವರಿ 2020, 15:41 IST
‘ಮಟ್ಟುಗುಳ್ಳ ಕೃಷಿಯ ಸುಸ್ಥಿರ ಅಭಿವೃದ್ಧಿ’ ಕುರಿತ ವಿಚಾರ ಸಂಕಿರಣವನ್ನು ಸೋದೆ ಮಠದ ವಿಶ್ವವಲ್ಲಭ ಉದ್ಘಾಟಿಸಿದರು.
‘ಮಟ್ಟುಗುಳ್ಳ ಕೃಷಿಯ ಸುಸ್ಥಿರ ಅಭಿವೃದ್ಧಿ’ ಕುರಿತ ವಿಚಾರ ಸಂಕಿರಣವನ್ನು ಸೋದೆ ಮಠದ ವಿಶ್ವವಲ್ಲಭ ಉದ್ಘಾಟಿಸಿದರು.   

ಉಡುಪಿ: ಎಲ್ಲ ತರಕಾರಿ ಬೆಳೆಗಳಿಗಿಂತ ಮಟ್ಟುಗುಳ್ಳ ಭಿನ್ನವಾಗಿದ್ದು, ಮಟ್ಟುವಿನ ಮಣ್ಣಿನ ಗುಣ, ಗುಳ್ಳದ ಬೀಜದ ಮಹತ್ವದ ಬಗ್ಗೆ ಸಂಶೋಧನೆ ನಡೆಯಬೇಕಿದೆ ಎಂದು ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ ಹೇಳಿದರು.

ಮಣಿಪಾಲ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಎಂಐಎಂ) ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಮಟ್ಟುಗುಳ್ಳ ಕೃಷಿಯ ಸುಸ್ಥಿರ ಅಭಿವೃದ್ಧಿ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಖಾದ್ಯಪ್ರಿಯರಿಗೆ ಮಟ್ಟುಗುಳ್ಳದ ಪರಿಚಯವಿದೆ. ಮಟ್ಟುಗುಳ್ಳ ಎಂಬ ತರಕಾರಿ ಜಗತ್ತಿನಾದ್ಯಂತ ಪಸರಿಸಿ ಮಟ್ಟು ಗ್ರಾಮದ ಹೆಸರನ್ನು ಗುರುತಿಸುವಂತೆ ಮಾಡಿದೆ. ವಾದಿರಾಜು ಗುಳ್ಳದ ಬೀಜ ನೀಡಿದ್ದರಿಂದ ಮಟ್ಟುಗುಳ್ಳ ವಿಶ್ವಮಟ್ಟದಲ್ಲಿ ಹೆಸರು ಪಡೆದಿದೆ. ಗುಳ್ಳವನ್ನು ಮಟ್ಟು ಭೂಮಿಯಲ್ಲಿ ಬೆಳೆದರೆ ಮಾತ್ರ ಅದರ ರುಚಿ ಬರುತ್ತದೆ. ಇದುವೇ ಆ ಬೀಜದ ಮಹತ್ವ. ಈ ಬೀಜವನ್ನು ವಾದಿರಾಜರು ಬಂಗಾಳದಿಂದ ತಂದಿದ್ದರು ಎಂಬ ಮಾಹಿತಿ ಇದೆ ಎಂದರು.‌

ADVERTISEMENT

‘ಕೃಷಿಯಲ್ಲಿ ಲಾಭ ಕಡಿಮೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಆದರೆ, ಮಧ್ಯವರ್ತಿಗಳ ಹಾವಳಿಯಿಂದ ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ದರ ಸಿಗದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಮಟ್ಟುಗುಳ್ಳವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಗುಳ್ಳದ ಮಾರುಕಟ್ಟೆ ವಿಸ್ತರಿಸಬೇಕು’ ಎಂದು ಸ್ವಾಮೀಜಿ ಸಲಹೆ ನೀಡಿದರು.

ಉತ್ತಮ ದರ:ಪೆರಂಪಳ್ಳಿ ಗುಳ್ಳವನ್ನು ಮಟ್ಟುಗುಳ್ಳ ಎಂದು ವಂಚಿಸಿ ಮಾರಾಟ ಮಾಡಲಾಗುತ್ತಿತ್ತು. ಅದಕ್ಕಾಗಿ ಮಟ್ಟುಗುಳ್ಳಕ್ಕೆ ಸ್ಟಿಕ್ಕರ್‌ ಅಂಟಿಸಿ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ವಂಚನೆಗೆ ತಡೆಬಿದ್ದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮಟ್ಟುಗುಳ್ಳಕ್ಕೆ ಒಳ್ಳೆಯ ದರ ಸಿಗುತ್ತಿದೆ.

ಹಿಂದೆ ಎಕರೆಯಲ್ಲಿ ಮಟ್ಟುಗುಳ್ಳ ಬೆಳೆಯುತ್ತಿದ್ದವರು, ಈಗ ಎರಡು ಎಕರೆ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ. ಇಳುವರಿ ಕೂಡ ಹೆಚ್ಚಿದೆ ಎಂದು ಮಟ್ಟುಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ದಯಾನಂದ ಬಂಗೇರ ಹೇಳಿದರು.

ಮಟ್ಟುಗುಳ್ಳವನ್ನು ಎರಡ್ಮೂರು ತಿಂಗಳು ಹಾಳಾಗದಂತೆ ಶೇಖರಿಸಿಡಬಹುದು. ಅದಕ್ಕಾಗಿ ಸುಸಜ್ಜಿತ ಕೊಠಡಿಯ ಅಗತ್ಯವಿದ್ದು, ಸ್ವಂತ ಜಾಗ ಹುಡುಕಾಟದಲ್ಲಿದ್ದೇವೆ. ನಬಾರ್ಡ್‌ನಿಂದ ನೆರವು ಸಿಗುವ ಭರವಸೆ ಇದೆ. ಸದ್ಯ ಇರುವ ಮಟ್ಟುಗುಳ್ಳ ಬೆಳೆಗಾರರ ಸಂಘವನ್ನು ಸೊಸೈಟಿ ಮಾಡುವ ಉದ್ದೇಶವಿದ್ದು ಇದರ ಮೂಲಕವೇ ಗುಳ್ಳದ ಖರೀದಿ ಮತ್ತು ಮಾರಾಟ ನಡೆಯಲಿದೆ. ಬೆಳೆಗಾರರಿಗೆ ಶೂನ್ಯ ಬಡ್ಡಿದರಲ್ಲಿ ಸಾಲ ನೀಡುವ ಉದ್ದೇಶವೂ ಇದೆ ಎಂದರು.

ಉಡುಪಿ ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಕೃಷ್ಣರಾವ್‌ ಕೊಡಂಚ ಮಾತನಾಡಿ, ಮಟ್ಟು ಪ್ರದೇಶವನ್ನು ಮಟ್ಟುಗುಳ್ಳ ಬೆಳೆಸಲು ಸಿಮೀತಗೊಳಿಸಬೇಕು. ಸೂಕ್ತ ನಿಯಾಮವಳಿ ರೂಪಿಸಬೇಕು. ಇಲ್ಲದಿದ್ದರೆ ಈ ಪ್ರದೇಶ ಇತರೆ ಉದ್ದೇಶಗಳಿಗೆ ಉಪಯೋಗವಾಗುವ ಸಾಧ್ಯತೆಗಳಿವೆ. ಕೃಷಿ ಆಹಾರ ಉತ್ಪಾದನೆಯ ಕ್ಷೇತ್ರವಾಗಿದ್ದು, ಕೈಗಾರಿಕೆಯ ಮಾನ್ಯತೆ ಸಿಗಬೇಕು ಎಂದು ಅಭಿಪ್ರಾಯಪಟ್ಟರು.

ಎಂಐಎಂ ನಿರ್ದೇಶಕ ಡಾ. ರವೀಂದ್ರನಾಥ್‌ ನಾಯಕ್‌ ಸ್ವಾಗತಿಸಿದರು. ಸಂಸ್ಥೆಯ ಸೆಂಟರ್‌ ಫಾರ್‌ ಸೋಶಿಯಲ್‌ ಎಂಟರ್‌ಪ್ರಿನರ್‌ಶಿಫ್‌ ಸಂಯೋಜಕ ಡಾ. ಹರೀಶ್‌ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು.

‘ರಫ್ತು ಉದ್ದೇಶವಿದೆ’
ಮಟ್ಟುಗುಳ್ಳಕ್ಕೆ ಉತ್ತಮ ಮಾರುಕಟ್ಟೆಯಿದ್ದು, ವಿದೇಶಗಳಿಗೂ ರಫ್ತು ಮಾಡುವ ಉದ್ದೇಶವಿದೆ. ರಾಸಾಯನಿಕ ಗೊಬ್ಬರದ ಬದಲಾಗಿ ಎರೆಹುಳುವಿನ ಹಾಗೂ ಹಟ್ಟಿಗೊಬ್ಬರ ಬಳಸುತ್ತಿದ್ದೇವೆ. ರಾಸಾಯನಿಕ ಸಿಂಪರಣೆ ಕಡಿಮೆ ಮಾಡಿದ್ದೇವೆ. ಇದರಿಂದ ಗುಳ್ಳದ ರುಚಿ ಮತ್ತಷ್ಟು ಹೆಚ್ಚಿದೆ ಎಂದು ಮಟ್ಟುಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ದಯಾನಂದ ಬಂಗೇರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.