ಉಡುಪಿ: ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿಯೂ ಸಹ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಜೀವ ಹಾನಿ ಹಾಗೂ ಆಸ್ತಿ ಹಾನಿ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು.
ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಗಾರು ಮಳೆಯು ಆಗಸ್ಟ್ ಕೊನೆಯವರೆಗೂ ಬರಲಿದೆ, ನೆರೆ ಯಾವಾಗ ಬೇಕಾದರೂ ಉಂಟಾಗುವ ಸಾಧ್ಯತೆಗಳಿರುತ್ತವೆ. ಇವುಗಳ ನಿರ್ವಹಣೆಗೆ ಅಧಿಕಾರಿಗಳು ಸನ್ನದ್ಧರಾಗಿರಬೇಕು. ನಗರ ಹಾಗೂ ಗ್ರಾಮೀಣ ಭಾಗದ ತಗ್ಗು ಪ್ರದೇಶಗಳಲ್ಲಿ ಮಳೆಯ ನೀರು ನುಗ್ಗಿ ನೆರೆ ಉಂಟಾಗುವ ಸಾಧ್ಯತೆಗಳಿರುವ ಪ್ರದೇಗಳಲ್ಲಿ ಕುಟುಂಬಗಳನ್ನು ತಕ್ಷಣದಲ್ಲಿಯೇ ಬೇರೆಡೆಗೆ ಸ್ಥಳಾಂತರಿಸುವುದು ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಲು ಯೋಜನೆಗಳನ್ನು ರೂಪಿಸಿಕೊಂಡು, ಸಮಸ್ಯೆಯಾದಲ್ಲಿ ಕೂಡಲೇ ನೆರವಿಗೆ ಧಾವಿಸಬೇಕು ಎಂದರು.
ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ 50ರಷ್ಟು ಹೆಚ್ಚಾಗಿದ್ದು, ಪ್ರಸ್ತುತ ಈವರೆಗೆ ಒಟ್ಟಾರೆ ಶೇ 17 ರಷ್ಟು ಹೆಚ್ಚು ಮಳೆಯಾಗಿದೆ. ಕೆಲವು ನದಿಗಳು ಅಪಾಯದ ಮಟ್ಟ ಮೀರಿ ಹರಿದಿವೆ. ಎನ್.ಡಿ.ಆರ್.ಎಫ್ ನಿಯಮಾವಳಿ ಅನ್ವಯ ನಷ್ಟ ಪರಿಹಾರ ನೀಡಲು ಮಾಹಿತಿಗಳನ್ನು ಕ್ರೋಢೀಕರಿಸಿ ನೀಡಬೇಕು ಎಂದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿ.ಡಿ.ಒಗಳ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯು ಆಗಿಂದಾಗ್ಗೆ ಸಭೆ ನಡೆಸಬೇಕು ಎಂದ ಅವರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿಯೂ ಸಹ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಇ.ಒ. ಗಳೊಂದಿಗೆ ಸಮನ್ವಯತೆ ಹೊಂದಿ ತುರ್ತು ಸಂದರ್ಭದಲ್ಲಿ ಸ್ಪಂದಿಸಬೇಕು ಎಂದರು.
ಕಾಲು ಸಂಕ, ಸಣ್ಣ, ಪುಟ್ಟ ಕಟ್ಟಡಗಳ ದುರಸ್ತಿ ಕಾರ್ಯ, ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಮತ್ತಿತರ ತಾತ್ಕಾಲಿಕ ಕಾಮಗಾರಿಗಳನ್ನು ಕೈಗೊಳ್ಳಲು ಎನ್.ಡಿ.ಆರ್.ಎಫ್‌ನ ಅನುದಾನವನ್ನು ಬಳಕೆ ಮಾಡಿಕೊಳ್ಳಬಹುದು. ಹಾನಿ ವರದಿ ನೀಡುವ ಮುನ್ನ ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ಮಾಡಿ ನಿಖರ ನಷ್ಟದ ವರದಿ ನೀಡಬೇಕು ಎಂದರು.
ಕೆಲವು ಮೀನುಗಾರಿಕೆ ಚಟುವಟಿಕೆಗೆ ಇರುವ ರಸ್ತೆಗಳು ಹಾನಿಗೀಡಾಗಿವೆ ಎಂಬ ದೂರುಗಳೂ ಕೇಳಿ ಬರುತ್ತಿವೆ. ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ, ಅವುಗಳ ನಿರ್ವಹಣೆಗೆ ಅಗತ್ಯವಿರುವ ಪ್ರಸ್ತಾವನೆಯನ್ನು ಕೂಡಲೇ ನೀಡಬೇಕೆಂದು ಸೂಚನೆ ನೀಡಿದರು.
ಡೆಂಗಿ ಪ್ರಕರಣಗಳು ಮಳೆಗಾಲದಲ್ಲಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಎಲ್ಲಾ ಇಲಾಖೆಯ ಅಧಿಕಾರಿಗಳು ಎಚ್ಚರದಿಂದ ಇದ್ದು, ಮಳೆಯ ನೀರು ಎಲ್ಲೆಂದರಲ್ಲಿ ನಿಂತುಕೊಳ್ಳದಂತೆ ನೋಡಿಕೊಳ್ಳಬೇಕು. ಕಲ್ಲುಕೋರೆಗಳಲ್ಲಿ ಸಹ ನೀರು ನಿಲ್ಲದಂತೆ ಎಚ್ಚರ ವಹಿಸಲು ಮಾಲೀಕರಿಗೆ ಸೂಚನೆ ನೀಡಬೇಕು. ಫಾಗಿಂಗ್ ಹಾಗೂ ರಾಸಾಯನಿಕ ಸಿಂಪಡನೆ ಮಾಡುವಂತೆ ತಿಳಿಸಬೇಕು ಎಂದರು.
ಈವರೆಗೆ 5 ಮಲೇರಿಯಾ ಪ್ರಕರಣಗಳು ಕಂಡು ಬಂದಿವೆ. ಇವುಗಳೂ ಸಹ ಹೆಚ್ಚಾಗದಂತೆ ಜಾಗೃತಿ ವಹಿಸಬೇಕು ಎಂದು ಸೂಚನೆ ನೀಡಿದರು.
ಮುಂದಿನ ಎರಡು, ಮೂರು ದಿನಗಳಲ್ಲಿ ಮುಖ್ಯಮಂತ್ರಿಗಳು ಕಡಲ್ಕೊರೆತ ಸೇರಿದಂತೆ ಮಳೆ ಹಾನಿಯ ಕುರಿತು ಪ್ರತ್ಯೇಕ ಸಭೆಯನ್ನು ನಡೆಸಲಿದ್ದಾರೆ. ಸಭೆಗೆ ಮಾಹಿತಿ ನೀಡಲು ಹಾಗೂ ಅನುದಾನ ಪಡೆಯಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ನಷ್ಟಗಳ ವಿವರವನ್ನು ಫೋಟೊದೊಂದಿಗೆ ಇಲಾಖಾವಾರು ಅತೀ ಶೀಘ್ರದಲ್ಲಿ ನೀಡಬೇಂದು ಸೂಚನೆ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಕರಾವಳಿ ಕಾವಲು ಪಡೆಯ ಎಸ್‌ಪಿ ಮಿಥುನ್ ಎಚ್.ಎನ್., ಡಿಎಫ್‌ಒ ಗಣಪತಿ, ಪೌರಾಯುಕ್ತ ರಾಯಪ್ಪ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರ್‌ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಮರ ತೆರವುಗೊಳಿಸಿ
ಮಳೆಯಿಂದಾಗಿ ಹಳೆಯ ವಿದ್ಯುತ್ ತಂತಿಗಳು ಬಿದ್ದು ಜೀವ ಹಾನಿ ಉಂಟಾಗುವ ಸಂಭವವಿರುವುದರಿಂದ ಹಳೆಯ ತಂತಿಗಳನ್ನು ಬದಲಾಯಿಸಲು ಮೆಸ್ಕಾಂ ಇಲಾಖೆಯವರು ಕ್ರಮ ಕೈಗೊಳ್ಳಬೇಕು ಈಗಾಗಲೇ ರಸ್ತೆ ಬದಿಗಳ ಅಪಾಯಕಾರಿ ಮರಗಳನ್ನು ತೆರವುಗೊಳಿಸಲಾಗಿದೆ. ಕೆಲವು ಖಾಸಗಿಯವರ ಜಾಗದಲ್ಲಿಯೂ ಸಹ ಅಪಾಯಕಾರಿಯಾದ ಮರಗಳು ಇವೆ ಎಂದು ದೂರುಗಳು ಕಂಟ್ರೋಲ್ ರೂಂಗಳಿಗೆ ಬರುತ್ತಿವೆ. ಇವುಗಳ ತೆರವಿಗೆ ಅಗತ್ಯ ಕ್ರಮ ವಹಿಸಬೇಕು. ಅದರ ಖರ್ಚನ್ನು ಖಾಸಗಿ ಮಾಲೀಕರಿಂದ ತೆರಿಗೆ ರೀತಿಯಲ್ಲಿ ವಸೂಲಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.