ADVERTISEMENT

ಯೋಗಾಸನ: 6ನೇ ವಿಶ್ವ ದಾಖಲೆಗೆ ಸಜ್ಜಾದ ತನುಶ್ರೀ

ಜ.6ರಂದು ಸೇಂಟ್ ಸಿಸಿಲಿಸ್ ಶಾಲೆ ಆವರಣದಲ್ಲಿ ದಾಖಲೆ ಬರೆಯಲು ಸಿದ್ಧತೆ ನಡೆಸಿರುವ ಬಾಲಕಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 14:20 IST
Last Updated 4 ಫೆಬ್ರುವರಿ 2021, 14:20 IST
ತನುಶ್ರೀ ಪಿತ್ರೋಡಿ
ತನುಶ್ರೀ ಪಿತ್ರೋಡಿ   

ಉಡುಪಿ: ಯೋಗಾಸನದ ವಿವಿಧ ಭಂಗಿಗಳನ್ನು ಬಳಸಿಕೊಂಡು ಈಗಾಗಲೇ 5 ವಿಶ್ವ ದಾಖಲೆ ಮಾಡಿರುವ 11 ವರ್ಷದ ಬಾಲಕಿ ತನುಶ್ರೀ ಪಿತ್ರೋಡಿ 6ನೇ ವಿಶ್ವದಾಖಲೆಗೆ ಸಜ್ಜಾಗಿದ್ದಾಳೆ. ಜ.6ರಂದು ಸಂಜೆ 4.30ಕ್ಕೆ ಉಡುಪಿಯ ಸೇಂಟ್ ಸಿಸಿಲಿಸ್‌ ಸಮೂಹ ವಿದ್ಯಾಸಂಸ್ಥೆಯ ಆವರಣದಲ್ಲಿ ‘ಮೋಸ್ಟ್‌ ಬ್ಯಾಕ್‌ವರ್ಡ್ಸ್‌ ಬಾಡಿ ಸ್ಕಿಪ್ ಇನ್‌ ಒನ್‌ ಮಿನಿಟ್‌’ ವಿಭಾಗದಲ್ಲಿ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾಳೆ.

ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಂದೆ ಉದಯ್‌ ಕುಮಾರ್‌, ತನುಶ್ರೀ ನ.11, 2017ರಲ್ಲಿ ನಿರಾಲಾಂಭ ಪೂರ್ಣ ಚಕ್ರಾಸನ ಎಂಬ ಕಠಿಣ ಯೋಗಾಸನವನ್ನು 1 ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ಗೋಲ್ಡನ್ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಮಾಡಿದ್ದಾಳೆ. ನಂತರ ಏ.7, 2018ರಲ್ಲಿ ಮೋಸ್ಟ್‌ ಫುಲ್ ಬಾಡಿ ರೆವಲ್ಯೂಷನ್‌ ಮೇನ್‌ಟೇನಿಂಗ್‌ ಎ ಚೆಸ್ಟ್‌ ಸ್ಟಾಂಡ್ ಪೊಸಿಷನ್‌’ ಭಂಗಿಯನ್ನು 1 ನಿಮಿಷದಲ್ಲಿ 42 ಬಾರಿ ಮಾಡಿ ಗಿನ್ನಿಸ್‌ ವಿಶ್ವ ದಾಖಲೆ ಮಾಡಿದ್ದಾಳೆ.

ನ.14, 2018ರಲ್ಲಿ ಇಟಲಿಯ ರೋಮ್‌ನಲ್ಲಿ ಗಿನ್ನಿಸ್ ದಾಖಲೆಯ ಸಾಧಕರೊಂದಿಗೆ ಸೇರಿ ಯೋಗ ಪ್ರದರ್ಶನ ನೀಡಿದ್ದಾಳೆ. ಫೆ.23, 2019ರಲ್ಲಿ ಉಡುಪಿಯ ಸೇಂಟ್ ಸಿಸಿಲಿಸ್ ಶಾಲೆಯಲ್ಲಿ ‘ಮೋಸ್ಟ್ ನಂಬರ್ ಆಫ್‌ ರೋಲ್ಸ್‌ ಇನ್ ಒನ್‌ ಮಿನಿಟ್‌ ಇನ್‌ ಧನುರಾಸನ ಭಂಗಿ’ಯಲ್ಲಿ ಹಾಗೂ ಫೆ.22, 2020ರಲ್ಲಿ ಉದ್ಯಾವರ ಗ್ರಾಮ ಪಂಚಾಯಿತಿ ಮೈದಾನದಲ್ಲಿ ಚಕ್ರಾಸನ ರೇಸ್‌ ವಿಭಾಗದಲ್ಲಿ 100 ಮೀ ಅಂತರವನ್ನು 1 ನಿಮಿಷ 14 ಸೆಕೆಂಡ್‌ನಲ್ಲಿ ಕ್ರಮಿಸಿ ವಿಶ್ವದಾಖಲೆ ಮಾಡಿದ್ದಾಳೆ. ಈಗ 6ನೇ ವಿಶ್ವದಾಖಲೆ ಮಾಡಲು ತಯಾರಿ ನಡೆಸಿದ್ದಾಳೆ ಎಂದು ತಿಳಿಸಿದರು.

ADVERTISEMENT

ಈಗಾಗಲೇ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದಾಳೆ. ‘ಮೋಸ್ಟ್‌ ಬ್ಯಾಕ್‌ವರ್ಡ್ಸ್‌ ಬಾಡಿ ಸ್ಕಿಪ್ ಇನ್‌ ಒನ್‌ ಮಿನಿಟ್‌’ ವಿಭಾಗದಲ್ಲಿ ಇದುವರೆಗೂ ಯಾರೂ ದಾಖಲೆ ಮಾಡದಿರುವುದರಿಂದ ತನುಶ್ರೀ ಹೆಸರಲ್ಲಿ ಹೊಸ ದಾಖಲೆ ನಿರ್ಮಾಣವಾಗಲಿದೆ ಎಂದರು.

ಸೇಂಟ್ ಸಿಸಿಲಿಸ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ತನುಶ್ರೀ ಮೂರು ವರ್ಷದವಳಿರುವಾಗಲೇ ನೃತ್ಯ ತರಬೇತಿ ಪಡೆದು ರಾಜ್ಯಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾಳೆ. ಗುರು ರಾಮಕೃಷ್ಣ ಕೊಡಂಚ ಅವರಿಂದ ಭರತನಾಟ್ಯ ಕಲಿತು ಹಲವೆಡೆ ಪ್ರದರ್ಶನ ನೀಡಿದ್ದಾಳೆ. 2020ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾಳೆ ಎಂದು ತಂದೆ ಉದಯ್‌ ಕುಮಾರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.