ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಶು ಕೇಂದ್ರೀತ ಯೋಜನೆಯಡಿ ಅನುದಾನ ಪಡೆಯುತ್ತಿರುವ ವಿಶೇಷ ಶಾಲೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಇದೇ 28ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾರ್ವತ್ರಿಕ ಮುಷ್ಕರ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘದ ಅಧ್ಯಕ್ಷೆ ಡಾ.ಕಾಂತಿ ಹರೀಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಮುಷ್ಕರದಲ್ಲಿ ಶಿಶು ಕೇಂದ್ರೀತ ಯೋಜನೆಯಡಿ ಅನುದಾನ ಪಡೆಯುತ್ತಿರುವ ರಾಜ್ಯದ 180 ವಿಶೇಷ ಶಾಲೆಗಳು ಕೈಜೋಡಿಸಲಿವೆ ಎಂದರು.
ಸಮಾನ ಕೆಲಸಕ್ಕೆ ಸಮಾನ ವೇತನ ಎಂಬಂತೆ ಶಿಶು ಕೇಂದ್ರೀತ ಯೋಜನೆಯಡಿ ಅನುದಾನ ಪಡೆಯುತ್ತಿರುವ ವಿಶೇಷ ಶಾಲೆಗಳ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ 1982ರ ಅನುದಾನಕ್ಕೆ ಬರುವ ಸಿಬ್ಬಂದಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಈ ಹಿಂದೆ ವಿಧಾನಸಭಾ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ರಾಜ್ಯದ ವಿಶೇಷ ಶಾಲೆಗಳ ಅನುದಾನವನ್ನು ಶೇ 40ಕ್ಕೆ ಏರಿಕೆ ಮಾಡಿ ಸರ್ಕಾರಕ್ಕೆ ನೀಡಿರುವ ಪ್ರಸ್ತಾವವನ್ನು ಕೂಡಲೇ ಮಂಜೂರು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರಕಾರ ರಾಜ್ಯದ ವಿಶೇಷ ಶಾಲೆಗಳ ವಿಶೇಷ ಶಿಕ್ಷಕರಿಗೆ ಪೂರ್ಣ ಪ್ರಮಾಣದ ಆರ್ಥಿಕ ಸೌಲಭ್ಯ ಒದಗಿಸಬೇಕು. ಶಿಶು ಕೇಂದ್ರೀತ ಸಹಾಯಧನ ಯೋಜನೆಗೆ ಸಂಬಂಧಿಸಿದಂತೆ ಇರುವ ಮಾರ್ಗದರ್ಶಿಯನ್ನು ಪ್ರತಿ 5 ವರ್ಷಕ್ಕೊಮ್ಮೆ ಪುನರ್ ರಚಿಸಿ ಆಯ್ದ ವಿಶೇಷ ಶಾಲೆಗಳ ಪರಿಣತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ವಿಶೇಷ ಶಾಲೆಗಳಿಗೆ ಇಲಾಖೆ ನೀಡುವ ಅನುದಾನವನ್ನು ಪ್ರತಿವರ್ಷ ಎರಡು ಕಂತುಗಳಲ್ಲಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘದ ಗೌರವಾಧ್ಯಕ್ಷೆ ಆಗ್ನೇಸ್ ಕುಂದರ್, ಜಿಲ್ಲಾಧ್ಯಕ್ಷ ಎಚ್.ರವೀಂದ್ರ, ಕಾರ್ಯದರ್ಶಿ ಶಶಿಕಲಾ ಕೋಟ್ಯಾನ್, ಯೂನಸ್, ದಿಲ್‌ದಾರ್, ಕೌಸರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.