ADVERTISEMENT

ರಂಗಭೂಮಿ ವಿಶ್ವಪ್ರಜ್ಞೆ ಬೆಳೆಸುವ ಹೆದ್ದಾರಿ: ರಂಗಕರ್ಮಿ ಎಚ್‌. ಜನಾರ್ದನ್

ರಂಗ ಪ್ರಯೋಗಗಳ ಕುರಿತ ವಿಚಾರಸಂಕಿರಣದಲ್ಲಿ ಎಚ್‌. ಜನಾರ್ದನ್ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 4:12 IST
Last Updated 24 ನವೆಂಬರ್ 2025, 4:12 IST
ವಿಚಾರ ಸಂಕಿರಣದಲ್ಲಿ ರಂಗಕರ್ಮಿ ಎಚ್‌. ಜನಾರ್ದನ್ ಮಾತನಾಡಿದರು
ವಿಚಾರ ಸಂಕಿರಣದಲ್ಲಿ ರಂಗಕರ್ಮಿ ಎಚ್‌. ಜನಾರ್ದನ್ ಮಾತನಾಡಿದರು   
ವಿವಿಧ ವಿಷಯಗಳ ಕುರಿತು ವಿಚಾರ ಮಂಡನೆ | ವಿಚಾರಸಂಕಿರಣದಲ್ಲಿ ರಂಗಾಸಕ್ತರು ಭಾಗಿ

ಉಡುಪಿ: ‘ರಂಗಭೂಮಿಯು ವಿಶ್ವಪ್ರಜ್ಞೆಯನ್ನು ಬೆಳೆಸುವ ಹೆದ್ದಾರಿಯಾಗಿದೆ. ಈ ಹೆದ್ದಾರಿ ನಿರ್ಮಿಸುವಲ್ಲಿ ಸಾಹಿತ್ಯ, ನಾಟಕ ಪರಂಪರೆಯ ದಿಗ್ಗಜರಾದ ಶಿವರಾಮ ಕಾರಂತ, ಗಿರೀಶ್‌ ಕಾರ್ನಾಡ್ ಮೊದಲಾದವರ ಕೊಡುಗೆ ಅಪಾರವಿದೆ’ ಎಂದು ರಂಗಕರ್ಮಿ ಎಚ್‌. ಜನಾರ್ದನ್ (ಜನ್ನಿ) ಮೈಸೂರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ರಥಬೀದಿ ಗೆಳೆಯರು ವತಿಯಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಕಲಾ ಮಂಟಪದಲ್ಲಿ ‘ರಂಗ ಪ್ರಯೋಗಗಳ ಸಮಕಾಲೀನತೆಯ ಸವಾಲುಗಳು’ ವಿಚಾರವಾಗಿ ಭಾನುವಾರ ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಶಿವರಾಮ ಕಾರಂತರು ‘ಚೋಮನ ದುಡಿ’ ಕಾದಂಬರಿಯಲ್ಲಿ ಚಿತ್ರಿಸಿರುವ ಚೋಮನ ಪರಂಪರೆ ಇಂದಿಗೂ ಇದೆ. ಇಡೀ ಪ್ರಪಂಚದಲ್ಲಿ ಚೋಮನ ಮಕ್ಕಳಿದ್ದರೆ. ರಂಗಭೂಮಿಯೊಂದೇ ಚೋಮನ ಮಕ್ಕಳ ಕತೆಯನ್ನು ಹೇಳುವ ಮಾಧ್ಯಮ’ ಎಂದರು.

ADVERTISEMENT

‘ರಂಗಭೂಮಿಯು ಮನುಷ್ಯನನ್ನು ಇದ್ದ ಹಾಗೇ ತೋರಿಸುತ್ತದೆ. ಸಿನಿಮಾ, ಟಿ.ವಿ.ಗಳು ದೃಶ್ಯವೈಭವದಿಂದ ತೋರಿಸುತ್ತವೆ’ ಎಂದು ಹೇಳಿದರು.

‘ಕನ್ನಡ ರಂಗಭೂಮಿಗೆ ದೇಶದಲ್ಲೇ ಹೊಸ ರೀತಿಯ ಆಯಾಮಗಳಿವೆ. ಹೊಸ ಹೊಸ ರಂಗ ಪ್ರಯೋಗಗಳು ಇಲ್ಲಿ ನಡೆದಿರುವುದೇ ಅದಕ್ಕೆ ಕಾರಣ. ಗಿರೀಶ್‌ ಕಾರ್ನಾಡರ ‘ಹಯವದನ’ ನಾಟಕವು ಎಂಟು ಭಾಷೆಗಳಲ್ಲಿ ರಂಗ ಪ್ರಯೋಗ ಕಂಡಿದೆ’ ಎಂದು ತಿಳಿಸಿದರು.

‘ತಪ್ಪುಗಳನ್ನು ತಿದ್ದಿಕೊಳ್ಳುವುದು ನಿಜವಾದ ಸೃಜನಶೀಲತೆ. ರಂಗಭೂಮಿಯು ತನ್ನನ್ನು ತಾನು ತಿದ್ದಿಕೊಂಡು, ಅಭಿಪ್ರಾಯಗಳನ್ನು ಪಡೆಯಲು ಇಂತಹ ವಿಚಾರಸಂಕಿರಣಗಳು ಸಹಕಾರಿ. ನಾವು ಮತ್ತೆ ಮತ್ತೆ ಮಗುವಾದರೆ ಮಾತ್ರ ಪ್ರಬುದ್ಧತೆ ಬರುತ್ತದೆ’ ಎಂದು ಪ್ರತಿಪಾದಿಸಿದರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂಚಾಲಕ ಟಿ.ಎಚ್‌. ಲವಕುಮಾರ್ ಮಾತನಾಡಿ, ‘ರಂಗಭೂಮಿಯ ಎಲ್ಲಾ ಸಾಧ್ಯತೆಗಳು ಇಂದು ಬಳಕೆಯಾಗುತ್ತಿವೆ. ಯುವಜನರು ರಂಗಭೂಮಿಗೆ ಹೆಚ್ಚು ಹೆಚ್ಚು ಬರುತ್ತಿದ್ದಾರೆ’ ಎಂದರು.

‘ಸಮಾಜದ ಜೊತೆ ಒಡನಾಟ ನಡೆಸಬೇಕಾದುದು ರಂಗಭೂಮಿಯ ಅಗತ್ಯತೆಗಳಲ್ಲೊಂದು. ಅದಕ್ಕೆ ವಿಚಾರಸಂಕಿರಣಗಳತ್ತವೂ ಯುವಜನರನ್ನು ಹೆಚ್ಚು ಸೆಳೆಯಬೇಕು’ ಎಂದು ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕ ಸಂತೋಷ್‌ ನಾಯಕ್‌ ಪಟ್ಲ ಸ್ವಾಗತಿಸಿದರು. ಸುಬ್ರಹ್ಮಣ್ಯ ಜೋಷಿ ವಂದಿಸಿದರು. ಸಂತೋಷ್‌ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.

Quote - ಉಡುಪಿಯಲ್ಲಿ ನಾಟಕ ನೃತ್ಯ ಕಾರ್ಯಕ್ರಮಗಳು ಸಾಕಷ್ಟು ನಡೆಯುತ್ತವೆ. ಆದರೆ ರಂಗಭೂಮಿಗೆ ಅಗತ್ಯವಿರುವ ವಿಚಾರ ಸಂಕಿರಣಗಳು ನಡೆಯುವುದು ಅಪರೂಪ. ಅದು ಹೆಚ್ಚು ಹೆಚ್ಚು ನಡೆಯಬೇಕು ಪೂರ್ಣಿಮಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ

Cut-off box - ‘ರಂಗಭೂಮಿಯೊಳಗೆ ಕೋಮುವಾದ’ ‘ರಂಗ ಪ್ರಯೋಗಗಳ ಸಮಕಾಲೀನತೆಯ ಸವಾಲುಗಳಲ್ಲಿ ಕರಾವಳಿಯ ಸವಾಲುಗಳು ಬೇರೆಯೇ ಇವೆ. ಕರಾವಳಿಯ ರಂಗಭೂಮಿಯ ಒಳಗೆ ಗೊತ್ತಿಲ್ಲದೆ ನುಸುಳುವ ಕೋಮುವಾದದ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕಿದೆ’ ಎಂದು ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್‌ ಕುಮಾರ್‌ ಅಭಿಪ್ರಾಯಪಟ್ಟರು. ‘ಹಿಂದೆ ರಂಗಭೂಮಿಗೆ ಬರುವವರು ಜಾತ್ಯತೀತ ಮನೋಭಾವದವರು ಜನಪರ ಚಿಂತಕರು ಎಂಬ ಅಭಿಪ್ರಾಯವಿತ್ತು. ಆದರೆ ಇಂದು ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದರು. ‘ರಂಗಭೂಮಿ ಅಭಿರುಚಿಯಾಗಬಾರದು ಅದೊಂದು ಸಾಮಾಜಿಕ ಬದ್ಧತೆಯಾಗಬೇಕು. ಅಂತಹ ಮನೋಭಾವವಿದ್ದರೆ ಮಾತ್ರ ಅದರಲ್ಲಿ ಕೆಲಸ ಮಾಡಬಹುದು. ಇಂದು ಬರಹ ಬೇರೆ ಬದುಕು ಬೇರೆ ರಂಗ ಪ್ರಯೋಗ ಬೇರೆ ಬದುಕು ಬೇರೆ ಎಂಬ ಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.