
ನವೀನ್ ಕುಮಾರ್ ಜಿ.
ಉಡುಪಿ: ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ವಾಸಿಸುವ ಮಲೆಕುಡಿಯ ಸಮುದಾಯದವರಿಗೆ ಕನಿಷ್ಠ ಶಾಶ್ವತ ಮೂಲ ಸೌಕರ್ಯಗಳು ಇನ್ನೂ ಮರೀಚಿಕೆಯಾಗಿಯೇ ಉಳಿದಿವೆ.
ಉತ್ತಮ ರಸ್ತೆ, ಮನೆ, ಶಾಶ್ವತ ವಿದ್ಯುತ್ ಸಂಪರ್ಕದಂತಹ ಹಲವು ದಶಕಗಳ ಅವರ ಬೇಡಿಕೆಗಳು ಇನ್ನೂ ಈಡೇರಿಲ್ಲ.
ಹೆಬ್ರಿ ತಾಲ್ಲೂಕಿನ ಪೀತುಬೈಲು, ಸಮೀಪದ ತಿಂಗಳಮಕ್ಕಿ, ತೆಂಗುಮಾರಿನಲ್ಲಿ ಮಲೆಕುಡಿಯ ಸಮುದಾಯದವರ ಏಳು ಕುಟುಂಬಗಳು ವಾಸಿಸುತ್ತಿದ್ದು, ಅಲ್ಲಿಗೆ ತೆರಳಲು ಈಗಲೂ ಉತ್ತಮ ರಸ್ತೆ ಇಲ್ಲ. ಸೋಲಾರ್ ವಿದ್ಯುತ್ ವ್ಯವಸ್ಥೆ ಇದ್ದರೂ ಅದು ಪದೇ ಪದೇ ಕೈಕೊಡುವುದೇ ಹೆಚ್ಚು. ಇವರಷ್ಟೇ ಅಲ್ಲದೆ ಹೆಬ್ರಿ, ಕಾರ್ಕಳ ತಾಲ್ಲೂಕಿನ ಅರಣ್ಯದಂಚಿನಲ್ಲಿ ವಾಸಿಸುವ ಹಲವು ಮಲೆಕುಡಿಯ ಸಮುದಾಯದವರ ಸ್ಥಿತಿಯು ಇದಕ್ಕಿಂತ ಭಿನ್ನವಾಗಿಲ್ಲ.
ಹೆಬ್ರಿ ತಾಲ್ಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಲೆಕುಡಿಯ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಮತ್ತಾವಿಗೆಸೇತುವೆ ನಿರ್ಮಿಸಬೇಕೆಂಬುದು ಆ ಭಾಗದ ಜನರ 50 ವರ್ಷಗಳ ಬೇಡಿಕೆ. ಕಳೆದ ಮಾರ್ಚ್ ತಿಂಗಳಲ್ಲಿ ಸೇತುವೆ ನಿರ್ಮಾಣಕ್ಕಾಗಿ ಅನುದಾನ ಮಂಜೂರಾದರೂ ಕಾಮಗಾರಿ ಆರಂಭಿಸಲು ಇನ್ನೂ ಮೀನಮೇಷ ಎಣಿಸಲಾಗುತ್ತಿದೆ ಎನ್ನುತ್ತಾರೆ ಅಲ್ಲಿನ ಜನರು.
ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಿಂದ ಸ್ವ ಇಚ್ಛೆಯಿಂದ ಹೊರಬರಲು ಸಿದ್ಧರಿರುವ ಮಲೆಕುಡಿಯ ಕುಟುಂಬದವರಿಗೆ ಪರಿಹಾರ ಒದಗಿಸುವ ಕಾರ್ಯವೂ ವಿಳಂಬವಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಈ ಕಾರಣಕ್ಕೆ ಕನಿಷ್ಠ ಮೂಲ ಸೌಲಭ್ಯಗಳಿಲ್ಲದೆ ಹಾಗೂ ನಿತ್ಯವೂ ಕಾಡು ಪ್ರಾಣಿಗಳ ಭಯದಿಂದಲೂ ಬದುಕಬೇಕಾದ ಸ್ಥಿತಿ ಇದೆ ಎನ್ನುತ್ತಾರೆ ಅಲ್ಲಿನ ಮಲೆಕುಡಿಯ ಸಮುದಾಯದವರು.
ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿರುವ ಹೆಬ್ರಿ ಮತ್ತು ಕಾರ್ಕಳ ತಾಲ್ಲೂಕಿನಲ್ಲಿ ಸುಮಾರು 50ಕ್ಕೂ ಅಧಿಕ ಮಲೆಕುಡಿಯ ಕುಟುಂಬಗಳು ಹಾಗೂ ಸೋಮೇಶ್ವರ ಆಭಯಾರಣ್ಯ ವ್ಯಾಪ್ತಿಯಲ್ಲಿ ಸುಮಾರು 35 ಮಲೆಕುಡಿಯ ಕುಟುಂಬಗಳು ವಾಸಿಸುತ್ತಿವೆ.
‘ಯಾರೂ ನಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಸಮರ್ಪಕ ರಸ್ತೆ ಸೌಲಭ್ಯವಿಲ್ಲದೆ ಪ್ರತಿ ದಿನ 5ರಿಂದ 6 ಕಿ.ಮೀ. ನಡೆಯಬೇಕಾಗಿದೆ. ಮಲೆಗಾಲದಲ್ಲಿ ಕಾಡಿನ ರಸ್ತೆಯಲ್ಲಿ ಜೀಪ್ ಕೂಡ ಬರುವುದಿಲ್ಲ. ಶಾಶ್ವತ ವಿದ್ಯುತ್ ಸಂಪರ್ಕವೂ ಸಿಕ್ಕಿಲ್ಲ’ ಎನ್ನುತ್ತಾರೆ ಪೀತುಬೈಲ್ ನಿವಾಸಿ ಜಯಂತ ಗೌಡ.
‘ಹೆಬ್ರಿ ತಾಲ್ಲೂಕಿನ ಪೀತುಬೈಲ್, ವರಂಗ, ನಾಡ್ಪಾಲು ಮೊದಲಾದೆಡೆ ವಾಸಿಸುವ 13 ಕುಟುಂಬಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಮೆಸ್ಕಾಂನವರು ಈಗಾಗಲೇ ಅರಣ್ಯ ಇಲಾಖೆಯ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದಾರೆ’ ಎಂದು ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ (ಐಟಿಡಿಪಿ) ಉಡುಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ತಿಳಿಸಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಪುನರ್ವಸತಿ ಕಾರ್ಯವು ಸದ್ಯ ಅನುದಾನ ಬಾರದ ಕಾರಣ ವಿಳಂಬವಾಗಿದೆ. ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೇವೆ. ಅನುದಾನ ಲಭಿಸಿದ ತಕ್ಷಣ ಪುನರ್ವಸತಿ ಕಾರ್ಯ ಆರಂಭಿಸಲಿದ್ದೇವೆಶಿವರಾಮ್ ಬಾಬು ಕುದುರೆಮುಖ ವನ್ಯಜೀವಿ ವಿಭಾಗದ ಡಿಎಫ್‌ಒ
ಮತ್ತಾವಿನಲ್ಲಿ ಸೇತುವೆ ನಿರ್ಮಿಸಲು ₹2 ಕೋಟಿ ಅನುದಾನಕ್ಕೆ ಅನುಮೋದನೆ ಸಿಕ್ಕಿದೆ. ಟೆಂಡರ್ ಕರೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದೇವೆ. ಅವರು ಈ ಹಿಂದೆ ಪರಿವೇಶ್ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈಗ 2.0 ಆ್ಯಪ್ ಬಂದಿರುವುದರಿಂದ ಮತ್ತೆ ಅರ್ಜಿ ಸಲ್ಲಿಸಬೇಕಾಗಿದೆ ಎನ್ನುತ್ತಿದ್ದಾರೆನಾರಾಯಣ ಸ್ವಾಮಿ ಐ.ಟಿ.ಡಿ.ಪಿ ಯೋಜನಾ ಸಮನ್ವಯಾಧಿಕಾರಿ
‘ಕನಿಷ್ಠ ಮೂಲಸೌಕರ್ಯಗಳಿಲ್ಲ’
‘ಕುದುರೆಮುಖ ರಾಷ್ಟ್ರೀಯ ಉದ್ಯಾನ ಸೋಮೇಶ್ವರ ಆಭಯಾರಣ್ಯ ವ್ಯಾಪ್ತಿ ಹಾಗೂ ಅರಣ್ಯದಂಚಿನಲ್ಲಿ ಹಲವು ಶತಮಾನಗಳಿಂದ ಅತಂತ್ರ ಸ್ಥಿತಿಯಲ್ಲಿ ವಾಸವಾಗಿರುವ ಕುಟುಂಬಗಳು ಕನಿಷ್ಠ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ.
ಸಂಘಟನೆ ಮುಖಾಂತರ ಹಲವಾರು ಆಯಾಮಗಳಲ್ಲಿ ಜಿಲ್ಲಾಡಳಿತ ಸರ್ಕಾರದ ಗಮನ ಸೆಳೆದರೂ ಕಾಡಿನ ಮಕ್ಕಳ ಅರಣ್ಯರೋದನ ಕೇಳುತ್ತಿಲ್ಲ. ಕನಿಷ್ಠ ಶಾಶ್ವತ ಮೂಲಸೌಕರ್ಯಗಳನ್ನು ಒದಗಿಸಿ ಅಥವಾ ಪುನರ್ವಸತಿ ಪರಿಹಾರಗಳ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ ಕನಿಷ್ಠ 6 ತಿಂಗಳೊಳಗೆ ಪರಿಹಾರ ಕಲ್ಪಿಸಬೇಕು’ ಎಂಬುದು ಕರ್ನಾಟಕ ರಾಜ್ಯ ಅರಣ್ಯಧಾರಿತ ಮೂಲ ಆದಿವಾಸಿ ಸಂಘಟನೆಗಳ ಒಕ್ಕೂಟದ ಕೋರ್ ಕಮಿಟಿ ಸದಸ್ಯ ಗಂಗಾಧರ ಗೌಡ ಅವರ ಬೇಡಿಕೆ.
ವಿಕ್ರಂ ಗೌಡ ಎನ್‌ಕೌಂಟರ್‌ಗೆ ಒಂದು ವರ್ಷ: ಕೂಬಿಂಗ್ ಹೆಬ್ರಿ: ನಕ್ಸಲ್ ನಾಯಕ ಹೆಬ್ರಿಯ ಕೂಡ್ಲು ವಿಕ್ರಂ ಗೌಡ ಎನ್‌ಕೌಂಟರ್ ನಡೆದು ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಕಾರಣ ಮುನ್ನೆಚ್ಚರಿಕೆಯಾಗಿ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಎಲ್ಲೆಡೆ ಕೂಬಿಂಗ್ ನಡೆಸುತ್ತಿದ್ದಾರೆ. ನಾಡ್ಪಾಲಿನ ಪೀತುಬೈಲ್‌ನಲ್ಲಿ ಬಂದೋಬಸ್ತ್ ಮಾಡಲಾಗಿದೆ.
2024ರ ನವೆಂಬರ್ 18 ರಂದು ಸಂಜೆ ಎನ್‌ಕೌಂಟರ್ ನಡೆದಿತ್ತು. ನಕ್ಸಲರು ತಮ್ಮ ನಾಯಕರ ಹುತಾತ್ಮ ದಿನಾಚರಣೆಯನ್ನು ನಡೆಸುವುದು ಅವರ ಸಿದ್ಧಾಂತವಾದ ಕಾರಣ ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಹುತಾತ್ಮರ ದಿನಾಚರಣೆ ಆಚರಿಸಬಹುದು ಎಂಬ ಕಾರಣದಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಎನ್‌ಕೌಂಟರ್ ನಡೆದಿದ್ದ ಪೀತುಬೈಲ್‌ನ ಜಯಂತ ಗೌಡ ಅವರ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಇದೇ 14 ರಿಂದ ಕೂಂಬಿಂಗ್ ಆರಂಭಗೊಂಡಿದ್ದು 19 ರ ತನಕ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.