ಕೋಟ (ಬ್ರಹ್ಮಾವರ): ‘ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಶ್ರೇಷ್ಠ ಕವಿ. ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ ಅನನ್ಯವಾಗಿದ್ದು, ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ. ಅವರ ಕಣ್ಮರೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ’ ಎಂದು ಪ್ರೊ.ಉಪೇಂದ್ರ ಸೋಮಯಾಜಿ ಹೇಳಿದರು.
ಕೋಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕೋಟ ಮಿತ್ರ ಮಂಡಳಿ, ಕೋಟೇಶ್ವರದ ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆ ಆಶ್ರಯದಲ್ಲಿ ಅಯೋಜಿಸಿದ್ದ ಎಚ್.ಎಸ್. ವೆಂಕಟೇಶ ಮೂರ್ತಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಚ್‌ಎಸ್‌ವಿ ಅವರು ನಾಡು– ನುಡಿ, ಸಂಸ್ಕೃತಿ, ಸಾಹಿತ್ಯ ಸಂರಕ್ಷಣೆ, ಅಭಿವೃದ್ಧಿಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ ಎಲ್ಲರ ಪ್ರೀತಿ ಪಾತ್ರರಾದವರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಎಚ್.ಎಸ್.ವಿ. ಅವರು ತಮ್ಮ ಮೇಲೆ ಬೀರಿದ ಪ್ರಭಾವದ ಬಗ್ಗೆ ಮೆಲಕು ಹಾಕಿದರು.
ಮಾಧ್ಯಮ ಪ್ರತಿನಿಧಿ ನರಸಿಂಹಮೂರ್ತಿ ರಾವ್, ಸುವ್ರತಾ, ಶರಧಿ, ಶ್ರೀದೇವಿ ಹಂದೆ, ನಿವೃತ್ತ ಮುಖ್ಯಶಿಕ್ಷಕ ಶ್ರೀಪತಿ ಹೇರ್ಳೆ, ಸಾಹಿತಿ ಪಾರಂಪಳ್ಳಿ ನರಸಿಂಹ ಐತಾಳ, ಸೂರ್ಯನಾರಾಯಣ, ವೆಂಕಟಕೃಷ್ಣ ಸೋಮಯಾಜಿ ಭಾಗವಹಿಸಿದ್ದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.