ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀಕ್ಷೇತ್ರ ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ 3ನೇ ವರ್ಷದ ‘ಉಚ್ಚಿಲ ದಸರಾ ವೈಭವ’ ಭಕ್ತರನ್ನು ಆಕರ್ಷಿಸುತ್ತಿದ್ದು, ಜನಸಾಗರವೇ ಹರಿದು ಬರುತ್ತಿದೆ.
ಶ್ರೀಕ್ಷೇತ್ರಕ್ಕೆ ಬಂದು ತಾಯಿ ಮಹಾಲಕ್ಷ್ಮಿ ಸಹಿತ ಪರಿವಾರ ದೇವರು, ಶಾರದಾ ಮಾತೆ ಮತ್ತು ನವದುರ್ಗೆಯರ ದರ್ಶನ ಪಡೆದರು. ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಮನಸೂರೆಗೊಳ್ಳುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮ: ಸ್ಥಳೀಯರಿಂದ ಹಿಡಿದು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ಕಲಾವಿದರು ನೀಡುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರಸಿದ್ಧ ಕಲಾವಿದರ ಯಕ್ಷಗಾನ, ನೃತ್ಯ ರೂಪಕ, ನೃತ್ಯ ವೈವಿಧ್ಯ, ಹರಿಕಥೆ ಸಹಿತ ಕಲೆ ಮತ್ತು ಸಂಸ್ಕೃತಿ ಅನಾವರಣಗೊಳಿಸುವ ಕಾರ್ಯಕ್ರಮ, ಸಾಮೂಹಿಕ ಕುಣಿತ ಭಜನೆ, ನಿತ್ಯ ಭಜನಾ ಕಾರ್ಯಕ್ರಮ, ಶರನ್ನವರಾತ್ರಿಯ ಪರಂಪರೆ ಮೆರೆಯುವ ದಾಂಡಿಯಾ ಮತ್ತು ಗರ್ಬಾ ನೃತ್ಯ, ಶ್ರೀರಾಮ ಹನುಮಂತ ನೃತ್ಯ ರೂಪಕ, ಸಾಮೂಹಿಕ ದಾಂಡಿಯಾ ನೃತ್ಯ, ವಿಸ್ಮಯ ಜಾದೂ, ಶತವೀಣಾವಲ್ಲರಿ ಪ್ರೇಕ್ಷಕರನ್ನು ಮನಸೊರೆಗೊಳಿಸಿತು.
ಸ್ಪರ್ಧೆಗಳು: ದ.ಕ, ಉಡುಪಿ ಜಿಲ್ಲಾಮಟ್ಟದ ಕುಸ್ತಿ, ರಂಗೋಲಿ, ದೇಹದಾರ್ಢ್ಯ, ಹೆಣ್ಣು ಮಕ್ಕಳ ಹುಲಿ ಕುಣಿತ, ಚಿತ್ರಕಲೆ, ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ನೃತ್ಯ ಸ್ಪರ್ಧೆ ಆಕರ್ಷಿಸಿತು.
ಮೊಗವೀರ ಸಮಾಜದ ವಿವಿಧ ಸಂಘಟನೆಗಳು ಯುವಕರು, ಮಹಿಳೆಯರು, ರೋರ್ಸ್ ಮತ್ತು ರೇಂರ್ಸ್, ಎನ್‌ಎಸ್‌ಎಸ್ ಮತ್ತು ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು ವಿವಿಧೆಡೆ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಾಳೆ ವೈಭವದ ಶೋಭಾಯಾತ್ರೆ: ಶ್ರೀಕ್ಷೇತ್ರದಿಂದ ಸಂಜೆ 5ಕ್ಕೆ ಹೋರಟ ಶೋಭಾಯಾತ್ರೆಯು ಎರ್ಮಾಳು ತನಕ ಸಾಗಿ, ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಉಚ್ಚಿಲ-ಮೂಳೂರು, ಕೊಪ್ಪಲಂಗಡಿಯವರೆಗೆ ಬಂದು, ಅಲ್ಲಿಂದ ಕಾಪು ಸಮುದ್ರ ತೀರದ ದೀಪಸ್ತಂಭದ ಬಳಿ ವಿಸರ್ಜನೆ ಮಾಡಲಾಗುವುದು.
ಶೋಭಾಯಾತ್ರೆಯ ಅಂತಿಮ ಹಂತದ ಸಿದ್ಧತೆ ಮತ್ತು ಯಶಸ್ಸಿಗಾಗಿ ಪೊಲೀಸ್ ಇಲಾಖೆಯು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ, ಕ್ಷೇತ್ರಾಡಳಿತ ಸಮಿತಿ, ದಸರಾ ಉತ್ಸವ ಸಮಿತಿ, ಸ್ವಯಂ ಸೇವಕರ ಸಮಿತಿಗಳನ್ನೊಳಗೊಂಡು ವಿವಿಧ ಸಮಿತಿಗಳ ಜತೆಗೆ ಸಿದ್ಧತಾ ಸಭೆ ನಡೆಸಿತು.
ಉಚ್ಚಿಲ ದಸರಾ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಶೋಭಾಯಾತ್ರೆಯ ಯಶಸ್ಸಿಗಾಗಿ ಸಾಗುವ ರಸ್ತೆ ಮತ್ತು ನಕ್ಷೆ ಸಮಿತಿ, ಸ್ವಯಂ ಸೇವಕರ ನಿರ್ವಹಣೆ ಸಮಿತಿ, ಟ್ಯಾಬ್ಲೊ ನಿರ್ವಹಣೆ ಸಮಿತಿ, ಪುರ ಶೃಂಗಾರ ಸಮಿತಿ, ಶೋಭಾಯಾತ್ರೆಯ ಜವಾಬ್ದಾರಿ ನಿರ್ವಹಣೆ ಮತ್ತು ವಿಗ್ರಹ ಜಲಸ್ತಂಭನ ಸಮಿತಿಗಳನ್ನು ರಚಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಶೋಭಾಯಾತ್ರೆ ನಡೆಸಬೇಕಿದ್ದು, ಅದಕ್ಕೆ ಪೂರಕವಾಗಿ ಪೊಲೀಸ್ ಇಲಾಖೆ ಕೈಗೆತ್ತಿಕೊಳ್ಳುವ ನಿರ್ಣಯಗಳಿಗೆ ದಸರಾ ಉತ್ಸವ ಸಮಿತಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಉಚ್ಚಿಲ ದಸರಾ ರೂವಾರಿ ಜಿ. ಶಂಕರ್ ಹೇಳಿದರು.
ಅ. 11ರಂದು ಅಜಯ್ ವಾರಿಯರ್ ಸಂಗೀತ ರಸ ಸಂಜೆ: ಮಹಾನವಮಿಯಂದು ಸಂಜೆ 6.30ಕ್ಕೆ ಕಲಾಮೃತ ಮಂಗಳೂರು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8ರಿಂದ ಹಿನ್ನೆಲೆ ಗಾಯಕ ಅಜಯ್ ವಾರಿಯರ್ ಬೆಂಗಳೂರು ಮತ್ತು ತಂಡದಿಂದ ಭಕ್ತಿಗೀತೆ, ಸುಗಮ ಸಂಗೀತ, ಹಳೆಯ ಚಲನಚಿತ್ರಗಳ ಹಾಡುಗಳ ಗಾಯನ ಸಹಿತವಾಗಿ ಸಂಗೀತ ರಸ ಸಂಜೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.