ADVERTISEMENT

ಪ್ರಕರಣ ಹಿಂಪಡೆಯದಿದ್ದರೆ ಹೋರಾಟ: ಬಿಜೆಪಿ

ಶಾಸಕ ಯಶ್‌ಪಾಲ್‌ ಸುವರ್ಣ ಸೇರಿ ಹಲವರ ವಿರುದ್ಧ ಕೇಸು ದಾಖಲು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 6:58 IST
Last Updated 17 ಸೆಪ್ಟೆಂಬರ್ 2024, 6:58 IST

ಉಡುಪಿ: ಮತೀಯವಾದಿಗಳ ಒತ್ತಡಕ್ಕೆ ಮಣಿದು ಪ್ರಾಂಶುಪಾಲರಿಗೆ ನೀಡಿದ ಪ್ರಶಸ್ತಿಯನ್ನು ವಾಪಸ್ ಪಡೆದ ಸರ್ಕಾರವು ಅದನ್ನು ವಿರೋಧಿಸಿ ಪ್ರತಿಭಟಿಸಿದವರ ಮೇಲೆ ಪ್ರಕರಣ ದಾಖಲಿಸಿ ಬೆದರಿಸುವ ತಂತ್ರ ಅನುಸರಿಸುತ್ತಿದೆ ಎಂದು ರಾಜ್ಯ ಬಿಜೆಪಿ ಟೀಕಿಸಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುತ್ತೇವೆ ಎನ್ನುವ ಕಾಂಗ್ರೆಸ್‌ನ ಮಾತುಗಳೆಲ್ಲ ಕೇವಲ ಬೊಗಳೆಯಾಗಿದೆ ಎಂದು ರಾಜ್ಯ ಬಿಜೆಪಿಯ ಎಕ್ಸ್ ಖಾತೆಯಲ್ಲಿ ಹೇಳಲಾಗಿದೆ.

ಸರ್ಕಾರದ ನೀತಿಗಳನ್ನು ಟೀಕಿಸುವ ಜನಸಾಮಾನ್ಯರು ಹಾಗೂ ವಿರೋಧ ಪಕ್ಷದ ನಾಯಕರ ಮೇಲೆ ಪ್ರಕರಣ ದಾಖಲಿಸಿ ಹೋರಾಟವನ್ನು ಹತ್ತಿಕ್ಕುವ ಕ್ರಮ ಪ್ರಜಾತಂತ್ರ ವ್ಯವಸ್ಥೆಗೆ ಮಾರಕ. ಕೂಡಲೇ ಪ್ರಕರಣ ಹಿಂಪಡೆಯದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧದ ಒಂದು ಪ್ರತಿಭಟನೆಯನ್ನೂ ಸಹಿಸಿಕೊಳ್ಳಲು ಆಗದ ಮನಸ್ಥಿತಿ ಹೊಂದಿದ್ದಾರೆ ಎಂದೂ ಟೀಕಿಸಿದೆ.

ಶಿಕ್ಷಕರನ್ನು ಬೆಂಬಲಿಸಿ ಪ್ರತಿಭಟಿಸಿದ್ದ ಉಡುಪಿಯ ಶಾಸಕ ಯಶ್‌ಪಾಲ್ ಸುವರ್ಣ ಹಾಗೂ ಪಕ್ಷದ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿ ದ್ವೇಷ ರಾಜಕಾರಣ ಮಾಡುತ್ತಿರುವುದು ಖಂಡನೀಯ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.