ADVERTISEMENT

ಉಡುಪಿ: ಫಿರೋಜ್‌ಗೆ ಕೃಷ್ಣನೂರಲಿ ಕಾವ್ಯವಾಚನದ ಖುಷಿ

ಸಂಸ್ಕೃತ ಕಲಿಯುವವರೇ ಹೆಚ್ಚು ಇರುವ ಜೈಪುರದ ಬಗ್ರು ಮೊಹಲ್ಲಾದ ಶಾಸ್ತ್ರಿ, ಈ ಕವಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 5:44 IST
Last Updated 26 ಅಕ್ಟೋಬರ್ 2024, 5:44 IST
ಫಿರೋಜ್
ಫಿರೋಜ್   

ಉಡುಪಿ: ‘ಆನ್‌ಲೈನ್‌ನಲ್ಲಿ ಅನೇಕ ಕವಿಗೋಷ್ಠಿಗಳಲ್ಲಿ ಸಂಸ್ಕೃತ ಕಾವ್ಯ ವಾಚನ ಮಾಡಿದ್ದೇನೆ. ವೇದಿಕೆಯಲ್ಲಿ ಇದೇ ಮೊದಲ ಅನುಭವ. ಕೃಷ್ಣನ ಊರಿನಲ್ಲಿ ಇಂಥ ಅಪೂರ್ವ ಅವಕಾಶ ಲಭಿಸಿದ್ದು ಜೀವನದಲ್ಲಿ ಮರೆಯಲಾಗದು...’

ರಾಜಸ್ಥಾನದ ಜೈಪುರದ ಫಿರೋಜ್ ಈ ಮಾತುಗಳನ್ನು ಆಡುವಾಗ ಭಾವುಕರಾಗಿದ್ದರು. ‘ನೀನಿಲ್ಲದೆ ಯಾವುದಕ್ಕೂ ಅರ್ಥವಿಲ್ಲ’ ಎಂಬ ಆಶಯ ಸೂಸುವ ಕವಿತೆಯನ್ನು ಉಡುಪಿ ಮಠದ ರಾಜಾಂಗಣದ ವಿಶಾಲ ವೇದಿಕೆಯಲ್ಲಿ ಪ್ರಸ್ತುತಪಡಿಸಿದ ಅವರು, ಮುಸ್ಲಿಮರ ಬಹುತೇಕ ಎಲ್ಲ ಮನೆಗಳಲ್ಲೂ ಸಂಸ್ಕೃತ ಕಲಿಯುವವರು ಇರುವ ಬಗ್ರು ಗ್ರಾಮದಿಂದ ಬಂದಿದ್ದರು.

ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ‌ದಲ್ಲಿ ಶುಕ್ರವಾರ ನಡೆದ ಯುವ ಕವಿಗೋಷ್ಠಿಯ ನಂತರ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದರು.

ADVERTISEMENT

ಫಿರೋಜ್ ಈಗ ಕಾಶಿ ಹಿಂದು ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಸಹಾಯಕ ಪ್ರಾಧ್ಯಾಪಕ. ಶ್ರೀ ಶ್ಯಾಮ್ ಸುರಭಿ ವಂದನ ಎಂಬ ಕೃತಿ ರಚಿಸಿದ್ದಾರೆ. ಅವರ ಅಜ್ಜ ಗಫೂರ್ ಖಾನ್ ದೇವಾಲಯಗಳಲ್ಲಿ ಭಜನೆ ಹಾಡುತ್ತಿದ್ದರು. ಮುನ್ನಾ ಖಾನ್ ಎಂದೇ ಹೆಸರು ಗಳಿಸಿರುವ ತಂದೆ ರಂಜಾನ್ ಖಾನ್ ಭಜನೆಯ ಜೊತೆಯಲ್ಲಿ ರಾಮನಾಮ ಸಂಕೀರ್ತನೆಯಲ್ಲಿ ತೊಡಗಿಸಿಕೊಂಡು ಗೋರಕ್ಷಾ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕಾರ್ಯಕ್ಕಾಗಿ ಅವರು 2020ರಲ್ಲಿ‌ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.‌

ತಲೆನೋವಾದ ಮಗ್ಗಿ; ಒಗ್ಗಿದ ಸಂಸ್ಕೃತ

ಫಿರೋಜ್ ಅವರ ಶಿಕ್ಷಣ ಆರಂಭಗೊಂಡದ್ದು ಗಣೇಶ್ ಚೌಕದ ಖಾಸಗಿ ಶಾಲೆಯಲ್ಲಿ. ಅಲ್ಲಿ ಮಗ್ಗಿ ಕಲಿಯಲು ಕಷ್ಟವಾಗಿ ಸಂಸ್ಕೃತ ಶಾಲೆ ಸೇರಿದರು. ‘ನಿತ್ಯವೂ ಮಗ್ಗಿ ಕಲಿತುಕೊಂಡು ಬರಲು ಒತ್ತಾಯಿಸುತ್ತಿದ್ದರು. ನನಗೆ ಒಂದಿಷ್ಟೂ ಕಂಠಪಾಠ ಮಾಡಲು ಆಗುತ್ತಿರಲಿಲ್ಲ. ಪ್ರಯತ್ನ ಮಾಡುತ್ತ  ತಲೆನೋವು ಆರಂಭವಾಯಿತು. ಹೀಗಾಗಿ ಸಂಸ್ಕೃತ ಮಂಡಳಿ ನಡೆಸುವ ಶಾಲೆಗೆ ಸೇರಿಸಲು ತಂದೆ ನಿರ್ಧರಿಸಿದರು. ಅಲ್ಲಿ ಕೆಲವೇ ತಿಂಗಳಲ್ಲಿ ಮಗ್ಗಿ ಸುಲಭವಾಯ್ತು’ ಎಂದು ಅವರು ಹೇಳಿದರು.

‘ಪ್ರಾಯೋಗಿಕವಾಗಿ ಅಥವಾ ವೈಜ್ಞಾನಿಕವಾಗಿ ಸಾಬೀತು ಮಾಡಲು ನನಗೆ ಸಾಧ್ಯವಿಲ್ಲ. ‌ಆದರೆ, ಸಂಸ್ಕೃತ ಕಲಿಕೆಯ ವಿಧಾನದಿಂದ ಮಿದುಳಿನ ಮೇಲೆ ಪರಿಣಾಮ ಉಂಟಾಗಿ ನೆನಪಿನ ಶಕ್ತಿ ಹೆಚ್ಚುತ್ತದೆ ಎಂದು ಹೇಳಬಲ್ಲೆ. ನನಗೆ ಮಗ್ಗಿ ಒಗ್ಗಿದ್ದು ಇದೇ ಕಾರಣದಿಂದ ಇರಬೇಕು’ ಎಂದರು.

‘ನಮ್ಮೂರಿನ ಶಾಲೆಯ ಬಳಿಯಲ್ಲೇ ಮಸೀದಿ ಇದೆ. ಹೀಗಾಗಿ ಅಲ್ಲಿನ ಬಹುತೇಕ ಮುಸ್ಲಿಮರು ಸಂಸ್ಕೃತ ಅಭ್ಯಾಸ ಮಾಡುತ್ತಿದ್ದಾರೆ. ರಾಜಸ್ಥಾನದಲ್ಲಿ ಅಂದಾಜು ಶೇಕಡ 30ರಷ್ಟು ಮುಸ್ಲಿಮರು ಸಂಸ್ಕೃತ ಕಲಿಯುತ್ತಿದ್ದಾರೆ ಎಂದು ಹೇಳಲಾಗುತ್ತದೆ. ತಂದೆಗೆ ಗೋರಕ್ಷಾ ಅಭಿಯಾನವನ್ನು ಮುಂದುವರಿಸಲು ಭಜನೆ ನೆರವಾಗುತ್ತದೆ. ಅವರು ಬಳಸುವ ಹಾಡುಗಳಲ್ಲಿ ಸಂಸ್ಕೃತವೇ ತುಂಬಿಕೊಂಡಿದೆ. ನನಗೆ ಸಂಸ್ಕೃತ ಗೌರವ ತಂದುಕೊಟ್ಟಿದೆ, ಈಗ ಅನ್ನದ ದಾರಿಯೂ ಆಗಿದೆ’ ಎಂದರು ಅವರು.

‘ಸಂಸ್ಕೃತ ಕಲಿತರೆ ಇತರ ಭಾಷೆಗಳನ್ನು ಕಲಿಯುವುದು ಸುಲಭ. ಶ್ಲೋಕಗಳನ್ನು ಉಚ್ಚರಿಸುವ ವಿಧಾನ ಬಹುಶಃ ಮಿದುಳಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನೆನಪಿನ ಶಕ್ತಿ ವೃದ್ಧಿಸುತ್ತದೆ ಎಂಬುದು ನನ್ನ ಅನಿಸಿಕೆ. ಶ್ಲೋಕಗಳಲ್ಲಿ ಜನರನ್ನು ಒಗ್ಗೂಡಿಸುವ ಆಶಯವಿದೆ. ಅದು ವಸುಧೈವ ಕುಟುಂಬಕಂ ಎಂಬ ಸಂದೇಶಕ್ಕೆ ಪೂರಕವಾಗಿದೆ’ ಎಂದು ಸಂಸ್ಕೃತದಲ್ಲಿ ಶಾಸ್ತ್ರಿ ಪದವಿ ಗಳಿಸಿರುವ ಫಿರೋಜ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.