ADVERTISEMENT

ಉಡುಪಿ | ಪ್ರವಾಸದ ಮೋಜು: ಕಡಲಿಗಿಳಿದರೆ ಅಪಾಯ ನಿಶ್ಚಿತ

ಬೀಚ್‌ಗಳಿಗೆ ತಡೆ ಬೇಲಿ ಹಾಕಿದರೂ ನೀರಿಗಿಳಿಯುವ ಪ್ರವಾಸಿಗರು

ನವೀನ್ ಕುಮಾರ್ ಜಿ.
Published 15 ಸೆಪ್ಟೆಂಬರ್ 2025, 4:43 IST
Last Updated 15 ಸೆಪ್ಟೆಂಬರ್ 2025, 4:43 IST
ಮಲ್ಪೆ ಬೀಚ್‌ನಲ್ಲಿ ತಡೆಬೇಲಿ ದಾಟಿ ಹೋಗಿ ಪ್ರವಾಸಿಗನೊಬ್ಬ ಸಮುದ್ರಕ್ಕೆ ಇಳಿದಿರುವುದು
ಮಲ್ಪೆ ಬೀಚ್‌ನಲ್ಲಿ ತಡೆಬೇಲಿ ದಾಟಿ ಹೋಗಿ ಪ್ರವಾಸಿಗನೊಬ್ಬ ಸಮುದ್ರಕ್ಕೆ ಇಳಿದಿರುವುದು   

ಉಡುಪಿ: ಜಿಲ್ಲೆಯ ಕಡಲ ತೀರಗಳ ಸೌಂದರ್ಯ ಸವಿಯಲು ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರು ವರ್ಷವಿಡೀ ಬರುತ್ತಾರೆ. ಆದರೆ ಮಳೆಗಾಲದಲ್ಲಿ ಬರುವ ಪ್ರವಾಸಿಗರಲ್ಲಿ ಕೆಲವರು ಕಡಲಿಗಿಳಿದು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳೂ ನಡೆಯುತ್ತಿರುತ್ತವೆ.

ಕೆಲ ದಿನಗಳ ಹಿಂದೆ ಕುಂದಾಪುರ ವ್ಯಾಪ್ತಿಯ ಗೋಪಾಡಿಯ ಚರ್ಕಿಕಡು ಎಂಬಲ್ಲಿ ಬೆಂಗಳೂರಿನಿಂದ ಬಂದಿದ್ದ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದರು. ಜೊತೆಗಿದ್ದ ಕೆಲವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದರು. ರಜಾದಿನದಲ್ಲಿ ಕರಾವಳಿಗೆ ಪ್ರವಾಸಕ್ಕೆಂದು ಬಂದಿದ್ದ ಈ ವಿದ್ಯಾರ್ಥಿಗಳು ಅಲೆಗಳ ತೀವ್ರತೆ ಅರಿಯದೆ ಈಜಲು ಇಳಿದು ಪ್ರಾಣ ಕಳೆದುಕೊಂಡಿದ್ದಾರೆ.

ಸಾಮಾನ್ಯವಾಗಿ ಮಳೆಗಾಲ ಆರಂಭವಾಗುತ್ತಿದ್ದಂತೆ ಜಿಲ್ಲೆಯ ಪ್ರಮುಖ ಬೀಚ್‌ಗಳಲ್ಲಿ ಪ್ರವಾಸಿಗರು ನೀರಿಗಿಳಿಯದಂತೆ ತಡೆಬೇಲಿ ಹಾಕಲಾಗುತ್ತದೆ. ಮಳೆಗಾಲ ಮುಗಿದ ಬಳಿಕ ಈ ತಡೆ ಬೇಲಿಯನ್ನು ತೆರವುಗೊಳಿಸಲಾಗುತ್ತಿದೆ. ಆದರೆ ಕೆಲವು ಪ್ರವಾಸಿಗರು ಪ್ರವಾಸೋದ್ಯಮ ಇಲಾಖೆ ಬೀಚ್‌ ಎಂದು ಗುರುತಿಸಿರುವ ಸ್ಥಳಗಳನ್ನು ಬಿಟ್ಟು ಬೇರೆಡೆ ಸಮುದ್ರಗಿಳಿಯುತ್ತಾರೆ. ಇದು ಅವರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿದೆ.

ADVERTISEMENT

ಬೀಚ್‌ಗಳಲ್ಲಿ ಲೈಫ್‌ಗಾರ್ಡ್‌ಗಳನ್ನು ನೇಮಕ ಮಾಡಿರುವುದರಿಂದ ಪ್ರವಾಸಿಗರು ಅಪಾಯಕ್ಕೆ ಸಿಲುಕಿದರೆ ಕೂಡಲೇ ನೆರವಿಗೆ ಧಾವಿಸುತ್ತಾರೆ ಮತ್ತು ಕಡಲಿಗಿಳಿಯದಂತೆ ಎಚ್ಚರಿಕೆ ನೀಡುತ್ತಾರೆ. ಜನರು ಹೆಚ್ಚು ಓಡಾಡದ ಸ್ಥಳಗಳಲ್ಲಿ ಕಡಲಿಗಿಳಿದರೆ ಅಪಾಯ ಉಂಟಾದಾಗ ರಕ್ಷಣೆಗೆ ಯಾರೂ ಬರುವುದಿಲ್ಲ.

ಕಡಲು ಪ್ರಕ್ಷುಬ್ಧವಾಗಿರುವಾಗಲೂ ಸಮುದ್ರದ ಬದಿಯ ಕಲ್ಲಿನ ಮೇಲೆ ಕುಳಿತು ಸೆಲ್ಫಿ ತೆಗೆದುಕೊಳ್ಳುವ, ಫೋಟೊ ಶೂಟ್‌ ನಡೆಸುವ ಗೀಳಿನಿಂದಲೂ ಅಪಾಯಕ್ಕೆ ಸಿಲುಕುವವರೂ ಇದ್ದಾರೆ.

ಮಲ್ಪೆ, ಮರವಂತೆ, ಸೋಮೇಶ್ವರ, ಕಾಪು ಲೊದಲಾದ ಪ್ರಮುಖ ಬೀಚ್‌ಗಳಲ್ಲಿ ಪ್ರವಾಸಿಗರು ನೀರಿಗಿಳಿಯದಂತೆ ಲೈಫ್‌ಗಾರ್ಡ್‌ಗಳು ಮತ್ತು ಟೂರಿಸ್ಟ್‌ ಮಿತ್ರರು ಎಚ್ಚರಿಕೆ ನೀಡುತ್ತಿರುತ್ತಾರೆ.

ಪ್ರವಾಸಕ್ಕಾಗಿ ಕರಾವಳಿಗೆ ಬರುವವರು ಹೆಚ್ಚಾಗಿ ಬೀಚ್‌ಗಳಿಗೆ ಭೇಟಿ ನೀಡಿಯೇ ಊರಿಗೆ ಮರಳುತ್ತಾರೆ. ಹೀಗೆ ಬರುವವರಲ್ಲಿ ಕೆಲವರು ಹುಚ್ಚಾಟದಿಂದ ಸಮುದ್ರಕ್ಕಿಳಿದು ನೀರು ಪಾಲಾಗುತ್ತಾರೆ. ಪ್ರತೀ ಬೀಚ್‌ಗಳಲ್ಲೂ ಎಚ್ಚರಿಕೆಯ ಫಲಕಗಳನ್ನು ಹಾಕಿದರೂ ಕೆಲವರು ಅದಕ್ಕೆ ಕ್ಯಾರೇ ಅನ್ನುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ಕೆರೆ, ನದಿಗಳಲ್ಲಿ ಅತ್ಯುತ್ತಮವಾಗಿ ಈಜಾಡುವವರಿಗೂ ಸಮುದ್ರದಲ್ಲಿ ಈಜಾಡಲು ಕಷ್ಟವಾಗಬಹುದು. ಕೆಲವರು ಈಜು ಬರುತ್ತದೆ ಎಂದು ಸಮುದ್ರಕ್ಕಿಳಿಯುತ್ತಾರೆ ಆದರೆ ಅಲೆಗಳ ಹೊಡೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಾರೆ ಎಂದೂ ಹೇಳುತ್ತಾರೆ.

ಸಮುದ್ರ ತೀರಕ್ಕೆ ಬರುವ ಕೆಲವು ಪ್ರವಾಸಿಗರು ನಮ್ಮ ಮಾತು ಕೇಳುವುದಿಲ್ಲ. ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಿದರೆ ನಮ್ಮ ಜೊತೆಗೇ ವಾಗ್ವಾದಕ್ಕಿಳಿಯುತ್ತಾರೆ ಎಂದು ಲೈಫ್‌ಗಾರ್ಡ್‌ಗಳು ತಿಳಿಸುತ್ತಾರೆ.

ಪ್ರಮುಖ ಬೀಚ್‌ಗಳಲ್ಲಿ ಮತ್ತು ಅವುಗಳ ಸಮೀಪ ಪ್ರದೇಶಗಳಲ್ಲಿ ಪ್ರವಾಸಿಗರು ಸಮುದ್ರಕ್ಕಿಳಿಯದಂತೆ ಸಂಬಂಧಪಟ್ಟವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ಸಮುದ್ರಕ್ಕಿಳಿಯದಂತೆ ತಡೆಬೇಲಿ ಸ್ಥಾಪಿಸಿರುವುದು
ಕುಂದಾಪುರ ವ್ಯಾಪ್ತಿಯ ಗೋಪಾಡಿಯ ಚರ್ಕಿಕಡು ಎಂಬಲ್ಲಿಈಚೆಗೆ ಸಮುದ್ರ ಪಾಲಾದವರ ರಕ್ಷಣೆಗಾಗಿ ನಡೆದಿದ್ದ ಕಾರ್ಯಾಚರಣೆ
ಸಮುದ್ರ ತೀರದ ಅಪಾಯಕಾರಿ ಸ್ಥಳಗಳಲ್ಲಿ ಕರಾವಳಿ ಕಾವಲು ಪೊಲೀಸ್‌ ಪಡೆಯ ವತಿಯಿಂದಲೂ ಎಚ್ಚರಿಕೆಯ ಫಲಕಗಳನ್ನು ಸ್ಥಾಪಿಸಿದ್ದೇವೆ. ನಮ್ಮ ಸಿಬ್ಬಂದಿಯೂ ಕೆಲವು ಬೀಚ್‌ಗಳಲ್ಲಿ ಗಸ್ತು ಕಾರ್ಯ ನಡೆಸುತ್ತಾರೆ
ಜಿತೇಂದ್ರ ದಯಾಮ ಕರಾವಳಿ ಕಾವಲು ಪೊಲೀಸ್‌ ಪಡೆಯ ಪ್ರಭಾರ ಎಸ್‌ಪಿ
ನಾವು ಕರಾವಳಿ ಭಾಗದ ದೇವಾಲಯಕ್ಕೆ ಪ್ರವಾಸಕ್ಕೆ ಬಂದ್ದಿದ್ದು ಊರಿಗೆ ಮರಳುವ ಮೊದಲು ಮಲ್ಪೆ ಬೀಚ್‌ಗೆ ಭೇಟಿ ನೀಡಿದ್ದೇವೆ. ತಡೆಬೇಲಿ ಹಾಕಿರುವುದರಿಂದ ದೂರದಿಂದಲೇ ಕಡಲನ್ನು ಆಸ್ವಾದಿಸುತ್ತಿದ್ದೇವೆ
ಶರಣಪ್ಪ ಪ್ರವಾಸಿಗ ಕೊಪ್ಪಳ
ಮಲ್ಪೆ ಬೀಚ್‌ನಲ್ಲಿ ಸಮುದ್ರದ ತೀರಕ್ಕೆ ಅಳವಡಿಸಿರುವ ತಡೆಬೇಲಿಯನ್ನು ಈ ವರ್ಷ ಇನ್ನೂ ತೆಗೆದಿಲ್ಲ. ಒಂಟೆ ಸವಾರಿ ಮೊದಲಾದ ಮನೋರಂಜನೆ ಚಟುವಟಿಕೆಗಳು ಆರಂಭವಾಗಿವೆ
ಸುಮಂತ್‌ ಸ್ಥಳೀಯ ನಿವಾಸಿ

‘ಎಚ್ಚರಿಕೆ ಫಲಕ ಹಾಕಿದ್ದೇವೆ’

ಪ್ರವಾಸೋದ್ಯಮ ಇಲಾಖೆಯ ಅಧೀನದಲ್ಲಿರುವ ಬೀಚ್‌ಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಮಳೆಗಾಲದಲ್ಲಿ ತಡೆಬೇಲಿ ಅಳವಡಿಸುವುದಲ್ಲದೇ ಅಲ್ಲಲ್ಲಿ ಎಚ್ಚರಿಕೆ ಫಲಕಗಳನ್ನೂ ಸ್ಥಾಪಿಸಿದ್ದೇವೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಲೈಫ್‌ಗಾರ್ಡ್‌ಗಳು ಮತ್ತು ಟೂರಿಸ್ಟ್‌ ಮಿತ್ರರನ್ನು ನಿಯೋಜನೆ ಮಾಡಲಾಗಿದ್ದು ಅವರು ಪ್ರವಾಸಿಗರು ಕಡಲಿಗಿಳಿಯದಂತೆ ನಿಗಾ ವಹಿಸುತ್ತಾರೆ. ಹೆಚ್ಚು ಜನವಾಸವಿಲ್ಲದ ಪ್ರದೇಶದಲ್ಲಿ ಕೆಲ ಪ್ರವಾಸಿಗರು ನೀರಿಗಿಳಿಯುವುದರಿಂದ ಅಪಾಯ ಎದುರಾಗುತ್ತಿದೆ ಎಂದೂ ಹೇಳಿದ್ದಾರೆ.

‘ಮಾಹಿತಿ ಕೊರತೆ’

ಬೀಚ್‌ಗಳಿಗೆ ಬರುವ ಪ್ರವಾಸಿಗರಲ್ಲಿ ಅದರಲ್ಲೂ ಯುವಜನರಿಗೆ ಮಾಹಿತಿ ಕೊರತೆ ಇರುತ್ತಿದೆ. ಎಲ್ಲಿ ಅಪಾಯವಿರುತ್ತದೆ ಎಂಬುದರ ಬಗ್ಗೆ ಅವರಿಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು ಸಂಬಂಧಪಟ್ಟವರು ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಹೇಳಿದರು. ಬೀಚ್‌ಗಳನ್ನು ಹೊರತುಪಡಿಸಿ ಬೇರೆಡೆಗಳಲ್ಲಿ ಪ್ರವಾಸಿಗರು ಸಮುದ್ರಕ್ಕಿಳಿಯದಂತೆ ಸಂಬಂಧಪಟ್ಟ ಇಲಾಖೆಯವರು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಶಾಲಾ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆತರುವ ಶಿಕ್ಷಕರು ವಿದ್ಯಾರ್ಥಿಗಳು ಕಡಲಿಗಿಲಿಯದಂತೆ ಎಚ್ಚರ ವಹಿಸಬೇಕು ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.