ADVERTISEMENT

ಉಡುಪಿ | ಮತ್ತೆ ಗರಿಗೆದರಿದೆ ಬೀಚ್ ಪ್ರವಾಸೋದ್ಯಮ: ರಜಾದಿನಗಳಲ್ಲಿ ಪ್ರವಾಸಿಗರ ಮೋಜು

ಕಡಲ ತೀರಕ್ಕೆ ಪ್ರವಾಸಿಗರ ದಾಂಗುಡಿ

ನವೀನ್ ಕುಮಾರ್ ಜಿ.
Published 6 ಅಕ್ಟೋಬರ್ 2025, 4:44 IST
Last Updated 6 ಅಕ್ಟೋಬರ್ 2025, 4:44 IST
<div class="paragraphs"><p>ಉಡುಪಿ ಸೀ ವಾಕ್‌ ಬಳಿಯಿಂದ ಸೇಂಟ್‌ ಮೇರೀಸ್‌ ದ್ವೀಪಕ್ಕೆ ಹೊರಟ ಬೋಟ್‌ </p></div>

ಉಡುಪಿ ಸೀ ವಾಕ್‌ ಬಳಿಯಿಂದ ಸೇಂಟ್‌ ಮೇರೀಸ್‌ ದ್ವೀಪಕ್ಕೆ ಹೊರಟ ಬೋಟ್‌

   

–ಪ್ರಜಾವಾಣಿ ಚಿತ್ರಗಳು

ಉಡುಪಿ: ಮಳೆಯ ಅಬ್ಬರ ಕಡಿಮೆಯಾಗಿ ಬಿಸಿಲಿನ ವಾತಾವರಣ ಮೂಡುತ್ತಿದ್ದಂತೆ ಜಿಲ್ಲೆಯ ಕಡಲ ತಡಿಯಲ್ಲಿ ಬೀಚ್‌ ಪ್ರವಾಸೋದ್ಯಮ ಗರಿಗೆದರುತ್ತಿದೆ.

ADVERTISEMENT

ಮಳೆಗಾಲದಲ್ಲಿ ಪ್ರವಾಸಿಗರು ಕಡಲಿನ ನೀರಿಗಿಳಿಯದಂತೆ ಅಳವಡಿಸಿದ ತಡೆಬೇಲಿಯನ್ನೂ ತೆರವುಗೊಳಿಸಿರುವುದರಿಂದ ದಸರಾ ರಜೆಯಲ್ಲಿ ಕಡಲ ಕಿನಾರೆಗೆ ಬಂದ ಪ್ರವಾಸಿಗರು ಸಮುದ್ರಕ್ಕಿಳಿದು ಮೋಜು ಅನುಭವಿಸಿದರು.

ಈ ಬಾರಿ ನಿರಂತರ ಮಳೆ ಸುರಿದಿರುವುದು ಆರಂಭದಲ್ಲಿ ಬೀಚ್‌ ಪ್ರವಾಸೋದ್ಯಮಕ್ಕೆ ಹೊಡೆತ ನೀಡಿತ್ತು. ಪ್ರತಿ ವರ್ಷಕ್ಕಿಂತ ಈ ಬಾರಿ ತಡವಾಗಿಯೇ ಬೀಚ್‌ಗಳ ತಡೆಬೇಲಿಯನ್ನು ತೆರವುಗೊಳಿಸಲಾಗಿದೆ.

ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಸೇಂಟ್‌ ಮೇರೀಸ್‌ ದ್ವೀಪಕ್ಕೂ ಪ್ರವಾಸಿಗರನ್ನು ಕರೆದೊಯ್ಯುವ ಪ್ರಕ್ರಿಯೆ ಮತ್ತೆ ಆರಂಭವಾಗಿದೆ. ಮಲ್ಪೆಯ ಸೀ ವಾಕ್‌ನಿಂದ ಬೋಟ್‌ಗಳ ಮೂಲಕ ಪ್ರವಾಸಿಗರನ್ನು ದ್ವೀಪಕ್ಕೆ ಕರೆದೊಯ್ಯಲಾಗುತ್ತದೆ.

ದಸರಾ ರಜೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸೇಂಟ್‌ ಮೇರೀಸ್‌ ದ್ವೀಪಕ್ಕೆ ತೆರಳಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿವೆ.

ಜಿಲ್ಲೆಯ ಪ್ರಮುಖ ಬೀಚ್‌ಗಳಾದ ಮಲ್ಪೆ ಬೀಚ್, ಕಾಪು ಬೀಚ್, ಬ್ಲೂಫ್ಲ್ಯಾಗ್ ಬೀಚ್‌ ಕುಂದಾಪುರದ ಕೋಡಿ ಬೀಚ್, ತ್ರಾಸಿ ಮರವಂತೆ ಬೀಚ್ ಮತ್ತು ಸೋಮೇಶ್ವರ ಬೀಚ್‌ಗಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೇಚ್ಚಿದೆ. ವಾರಾಂತ್ಯದಲ್ಲಿ ಈ ಬೀಚ್‌ಗಳಲ್ಲಿ ಮತ್ತೆ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿದೆ.

ನವರಾತ್ರಿ ಸಂದರ್ಭದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಹೀಗೆ ಜಿಲ್ಲೆಗೆ ಬರುವ ಪ್ರವಾಸಿಗರು ಊರಿಗೆ ಮರಳುವ ಮೊದಲು ಬೀಚ್‌ಗಳಿಗೆ ಭೇಟಿ ನೀಡುತ್ತಾರೆ. ಮಲ್ಪೆ ಬೀಚ್‌ನಲ್ಲಿ ಕುದುರೆ ಸವಾರಿ, ಒಂಟೆ ಸವಾರಿ ಆರಂಭಗೊಂಡಿದ್ದು, ಪ್ರವಾಸಿಗರಿಗೆ ಮುದ ನೀಡುತ್ತಿದೆ.

ಕಡಲ ತೀರಗಳಿಗೆ ಪ್ರವಾಸಿಗರು ದಾಂಗುಡಿ ಇಡುತ್ತಿದ್ದಂತೆ ಬೀಚ್‌ ಸುತ್ತಮುತ್ತ ವಾಣಿಜ್ಯ ಚಟುವಟಿಕೆಗಳೂ ಗರಿಗೆದರಿವೆ. ಆಟಿಕೆ ಸಾಮಗ್ರಿ, ಆಹಾರ ಪದಾರ್ಥ, ತಂಪು ಪಾನೀಯಗಳನ್ನು ಮಾರಾಟ ಮಾಡುವ ಸ್ಟಾಲ್‌ಗಳೂ ಬೀಚ್‌ ಸಮೀಪ ತಲೆ ಎತ್ತಿವೆ.

ಮಲ್ಪೆ ಬೀಚ್‌ನಿಂದ ಅನತಿ ದೂರದಲ್ಲಿರುವ ಸೀವಾಕ್‌ಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಮೀನುಗಾರಿಕಾ ದೋಣಿಗಳು ಸಮುದ್ರದಿಂದ ದಕ್ಕೆಗೆ ಮರಳುತ್ತಿರುವ ಮನೋಹರ ದೃಶ್ಯವನ್ನು ಇಲ್ಲಿಂದ ಕಣ್ತುಂಬಿಕೊಳ್ಳಬಹುದಾಗಿದೆ.

ಆರಂಭವಾಗದ ಜಲ ಕ್ರೀಡೆಗಳು

ಸಾಮಾನ್ಯವಾಗಿ ಸೆಪ್ಟೆಂಬರ್‌ 15ರ ನಂತರ ಮಲ್ಪೆ ಸೇರಿದಂತೆ ವಿವಿಧ ಬೀಚ್‌ಗಳಲ್ಲಿ ಜಲ ಕ್ರೀಡೆಗಳು ಗರಿಗೆದರುತ್ತಿದ್ದವು. ಈ ಬಾರಿ ಮಳೆಯಿಂದಾಗಿ ಕಡಲು ಆಗಾಗ ಪ್ರಕ್ಷುಬ್ಧವಾಗುತ್ತಿರುವ ಕಾರಣ ಇನ್ನೂ ಜಲಕ್ರೀಡೆಗಳು ಆರಂಭಗೊಂಡಿಲ್ಲ. ಜೆಟ್‌ ಸ್ಕೀ ರೈಡ್‌ ಬನಾನ ಬೋಟ್‌ ರೈಡ್‌ ಪವರ್‌ ಬೋಟ್‌ ರೈಡ್‌ ಪ್ಯಾರಾ ಸೈಲಿಂಗ್‌ ತೇಲುವ ಸೇತುವೆ ಪ್ರಮುಖವಾಗಿ ಪ್ರವಾಸಿಗರಿಗೆ ಮುದ ನೀಡುವ ಜಲ ಕ್ರೀಡೆಗಳಾಗಿವೆ. ಜಿಲ್ಲೆಯ ಹಿನ್ನೀರು ಪ್ರದೇಶಗಳಲ್ಲಿ ಕಯಾಕಿಂಗ್‌ ಮತ್ತು ಬೋಟಿಂಗ್‌ ಕೂಡ ಪ್ರವಾಸಿಗರಿಗೆ ಮೋಜು ನೀಡುತ್ತಿದ್ದು ಈ ವರ್ಷ ಇನ್ನಷ್ಟೇ ಆರಂಭವಾಗಬೇಕಾಗಿದೆ.

ಸುರಕ್ಷತೆಗೆ ಆದ್ಯತೆ ಅಗತ್ಯ

ಸಮುದ್ರಕ್ಕಿಳಿದ ಪ್ರವಾಸಿಗರು ಸಮುದ್ರ ಪಾಲಾದ ಪ್ರಕರಣಗಳು ಈ ವರ್ಷ ಹಲವು ಬೀಚ್‌ಗಳಲ್ಲಿ ಸಂಭವಿಸಿದ್ದು ಪ್ರವಾಸಿಗರು ಬೀಚ್‌ಗಳಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕಾಗಿದೆ. ಲೈಫ್‌ ಗಾರ್ಡ್‌ಗಳು ನೀಡುವ ಎಚ್ಚರಿಕೆಯನ್ನು ಮೀರಿದರೆ ಅಪಾಯ ಎದುರಾಗುವ ಸಾಧ್ಯತೆಗಳಿವೆ. ಮಲ್ಪೆ ಸೇರಿದಂತೆ ವಿವಿಧ ಬೀಚ್‌ಗಳಲ್ಲಿ ಪ್ರವಾಸಿಗರ ರಕ್ಷಣೆಗಾಗಿ ಲೈಫ್‌ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ.

‘ಸ್ವಚ್ಛತೆಗೆ ಗಮನ ನೀಡಿ’

ಮಲ್ಪೆ ಬೀಚ್‌ನಲ್ಲಿ ಕಸದ ರಾಶಿ ತುಂಬಿದ್ದು ಸಂಬಂಧಪಟ್ಟವರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಪ್ರವಾಸಿಗರು ಆಗ್ರಹಿಸಿದ್ದಾರೆ. ಕಡಲಿನಿಂದ ದಡ ಸೇರಿದ ಮರದ ತುಂಡುಗಳು ಥರ್ಮೊಕೋಲ್‌ ಬಲೆಯ ತುಣುಕುಗಳು ಪ್ಲಾಸ್ಟಿಕ್‌ ಬಾಟಲಿ ಸೇರಿದಂತೆ ಕಸದ ರಾಶಿ ಬೀಚ್‌ನ ಅಲ್ಲಲ್ಲಿ ಸಂಗ್ರಹಗೊಂಡು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.

‘ಹೆಚ್ಚುವರಿ ಲೈಫ್‌ಗಾರ್ಡ್ಸ್‌ ನೇಮಕ’

ಜಿಲ್ಲೆಯ ಬೀಚ್‌ಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈಗಾಗಲೇ ಬೀಚ್‌ಗಳಲ್ಲಿ ಲೈಫ್‌ಗಾರ್ಡ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನಷ್ಟು ಲೈಫ್‌ಗಾರ್ಡ್‌ಗಳನ್ನು ನೇಮಕ ಮಾಡಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್‌.ಎಂ. ತಿಳಿಸಿದರು. ಬೀಚ್‌ಗಳಲ್ಲಿ ಜಲಕ್ರೀಡೆಗಳನ್ನುಆಯೋಜಿಸುವವರ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಪ್ರಕ್ರಿಯೆ ಮುಗಿದ ಬಳಿಕ ಜಲಕ್ರೀಡೆಗಳು ಆರಂಭವಾಗಲಿದೆ. ಈ ಬಾರಿ ಕಡಲು ಪ್ರಕ್ಷುಬ್ಧವಾಗಿದ್ದರಿಂದ ಅಲ್ಪ ತಡವಾಗಿದೆ ಎಂದೂ ಅವರು ಹೇಳಿದರು. 

ನವರಾತ್ರಿ ರಜೆಯಲ್ಲಿ ಪ್ರವಾಸಕ್ಕೆ ಬಂದವರು ಮಲ್ಪೆ ಬೀಚ್‌ಗೆ ಬಂದಿದ್ದೇವೆ. ಪ್ರತಿವರ್ಷ ದೇವಾಲಯಗಳಿಗೆ ಭೇಟಿ ನೀಡಲು ಬರುವ ನಾವು ಬೀಚ್‌ಗೂ ಬರುತ್ತಿದ್ದೇವೆ.
-ರಾಜು, ಪ್ರವಾಸಿಗ ವಿಜಯಪುರ
ಈ ವರ್ಷ ಪದೇ ಪದೇ ಭಾರಿ ಮಳೆ ಬರುತ್ತಿರುವ ಕಾರಣ ಕಡಲು ಆಗಾಗ ಪ್ರಕ್ಷುಬ್ಧಗೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಕಡಲಿಗಿಳಿಯುವುದು ಅಪಾಯ ಆಹ್ವಾನಿಸಿದಂತೆ.
-ಫಿರೋಜ್‌, ಸ್ಥಳೀಯ ನಿವಾಸಿ
ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಒಂಟೆ ಸವಾರಿ
ಮಲ್ಪೆ ಬೀಚ್‌ನಲ್ಲಿ ಮಕ್ಕಳ ಮೋಜು
ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು
ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.