ADVERTISEMENT

ಉಗ್ರ ಸಂಘಟನೆಗಳ ನಿಷೇಧ ದೊಡ್ಡ‌ ಗೆಲುವು

ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 13:28 IST
Last Updated 30 ಸೆಪ್ಟೆಂಬರ್ 2022, 13:28 IST
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಪರಿಚಯ ವರ್ಗದ ಸಭೆಯಲ್ಲಿ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಭಾಗವಹಿಸಿದ್ದರು.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಪರಿಚಯ ವರ್ಗದ ಸಭೆಯಲ್ಲಿ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಭಾಗವಹಿಸಿದ್ದರು.   

ಉಡುಪಿ: ದೇಶದ ಆಂತರಿಕ ಭದ್ರತೆ ಹಾಗೂ ಶಾಂತಿ ಸುವ್ಯವಸ್ಥೆಗೆ ಕಂಟಕವಾಗಿದ್ದ ಉಗ್ರ ಸಂಘಟನೆಗಳ ನಿಷೇಧ‌ ದೇಶಕ್ಕೆ ಸಿಕ್ಕ ದೊಡ್ಡ ಗೆಲುವು ಎಂದು ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಪರಿಚಯ ವರ್ಗದ ಸಭೆಯಲ್ಲಿ ಮಾತನಾಡಿ, ಮುಸಲ್ಮಾನರು ಪಿಎಫ್ಐನಂತಹ ಉಗ್ರಗಾಮಿ ಸಂಘಟನೆ ಹಾಗೂ ದೇಶ ವಿರೋಧಿ ಸಾಮಾಜಿಕ ಪಿಡುಗು ನಿವಾರಣೆಯಾಗಬೇಕು ಎಂಬ ಆಶಯ ಹೊಂದಿದ್ದರು ಎಂದರು.

ಚುನಾವಣೆಯನ್ನು ಗೆಲ್ಲುವುದರ ಜೊತೆಗೆ ಸಾಮಾಜಿಕ ಪರಿವರ್ತನೆ ಮಾಡುವುದು ಕಾರ್ಯಕರ್ತರ ಉದ್ದೇಶವಾಗಿರಬೇಕು. ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯ ಸರ್ವವ್ಯಾಪಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಾಗೂ ಹೊರ ದೇಶಗಳಲ್ಲಿ ಭಾರತದ ಘನತೆ, ಗೌರವ ವೃದ್ಧಿಯ ಬಗ್ಗೆ ಜನರಿಂದ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. 2023ರಲ್ಲಿ ಮತ್ತೆ ರಾಜ್ಯದಲ್ಲಿ ಬಿಜೆಪಿ ನಿಶ್ಚಿತವಾಗಿ ಗೆಲುವು ಸಾಧಿಸಲಿದೆ ಎಂದರು.

ADVERTISEMENT

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಉತ್ತಮ ಕೆಲಸ ಕಾರ್ಯಗಳಿಗೆ ಪ್ರಚಾರ ನೀಡುವ ಜೊತೆಗೆ ಸಕಾರಾತ್ಮಕ ಅಂಶಗಳನ್ನು ಮೈಗೂಡಿಸಿಕೊಂಡು ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಸಕ್ರಿಯವಾಗಿ ತೊಡಗಿಸಿಕೊಂಡಾಗ ಯಶಸ್ಸು ಖಚಿತವಾಗಿ ಸಿಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರ್ ಎಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಬಿ.ಎಂ.ಸುಕುಮಾರ ಶೆಟ್ಟಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್. ಕಲ್ಮಾಡಿ, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ,ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಸಲೀಂ ಅಂಬಾಗಿಲು ಇದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಸ್ವಾಗತಿಸಿದರು. ಕುತ್ಯಾರು ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.