ADVERTISEMENT

ಉಡುಪಿ: ಸಿಗ್ನಲ್‌ಲೈಟ್‌ ಅಳವಡಿಸದ್ದಕ್ಕೆ ಅಸಮಾಧಾನ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 15:53 IST
Last Updated 14 ಮೇ 2025, 15:53 IST
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಿತು
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಿತು   

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಐದು ಜಂಕ್ಷನ್‌ಗಳಲ್ಲಿ ಸಿಗ್ನಲ್‌ಲೈಟ್‌ಗಳನ್ನು ಅಳವಡಿಸಲು ಕಳೆದ ಸಭೆಯಲ್ಲಿಯೇ ತೀರ್ಮಾನಿಸಲಾಗಿತ್ತು. ಆದರೂ ಅಳವಡಿಸಿಲ್ಲ ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅಸಮಾಧಾನ ವ್ಯಕ್ತಪಡಿಸಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲ್ಸಂಕ ಹಾಗೂ ಅಂಬಲಪಾಡಿ ಜಂಕ್ಷನ್‌ಗಳಲ್ಲಿ ಸಿಗ್ನಲ್‌ಲೈಟ್ ಕೂಡಲೇ ಅಳವಡಿಸುವಂತೆ ಸೂಚಿಸಿದರು.

ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಕ್ರಿಯಾ ಯೋಜನೆಯಡಿ ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಆದರೆ ಕಾಮಗಾರಿಗಳು ನಡೆದಿಲ್ಲ. ಆ ಬಗ್ಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ADVERTISEMENT

ಜಿಲ್ಲೆಯಲ್ಲಿ ಅತಿ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣರಾದ 82 ಜನ ಆರೋಪಿಗಳ ಚಾಲನಾ ಪರವಾನಗಿಯನ್ನು ಆರು ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ ಎಂದರು.

ನಗರ ವ್ಯಾಪ್ತಿಯಲ್ಲಿ ಬಸ್‌ಗಳನ್ನು ಅತಿ ವೇಗವಾಗಿ ಚಾಲನೆ ಮಾಡುವುದರ ಜೊತೆಗೆ ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಇದರಿಂದ ಅಪಘಾತ ಹಾಗೂ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಉಡುಪಿ ನಗರ ವ್ಯಾಪ್ತಿಯ ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಸೂಚನೆಗಳು ಇದ್ದರು ಸಹ ನಿಯಮಗಳನ್ನು ಪಾಲಿಸುತ್ತಿಲ್ಲ. ಇದರಿಂದಾಗಿ ಗ್ರಾಹಕರು ತಮ್ಮ ವಾಹನಗಳನ್ನು ರಸ್ತೆಯಲ್ಲಿ ಪಾರ್ಕ್ ಮಾಡುವ ಕಾರಣ ವಾಹನಗಳ ಸುಗಮ ಸಂಚಾರಕ್ಕೆ ತಡೆ ಉಂಟಾಗುತ್ತಿದೆ ಎಂದರು.

ಈ ಬಗ್ಗೆ ಈಗಾಗಲೇ ಕೆಲವು ಸಂಸ್ಥೆಗಳ ಮಾಲೀಕರಿಗೆ ನೋಟಿಸ್ ನೀಡಿದ್ದರೂ ಸಹ ಪ್ರಯೋಜನವಾಗಿಲ್ಲ. ಅವರಿಗೆ ಅಂತಿಮ ನೋಟಿಸ್ ನೀಡಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆಯ ಪೌರಾಯುಕ್ತರಿಗೆ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ., ಎ.ಎಸ್.ಪಿ ಪರಮೇಶ್ವರ್ ಹೆಗಡೆ, ಡಿ.ಎಫ್.ಒ. ಗಣಪತಿ, ಕಾರ್ಯಪಾಲಕ ಎಂಜಿನಿಯರ್‌ ಕಿರಣ್ ಎಸ್., ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ ಇದ್ದರು.

‘ಹಣ ವಸೂಲಿ ಮಾಡುವಂತಿಲ್ಲ’

ರಿಕ್ಷಾ ಚಾಲಕರು ಉಡುಪಿ ನಿಲ್ದಾಣ ವ್ಯಾಪ್ತಿಯ ರಿಕ್ಷಾ ನಿಲ್ದಾಣಗಳಲ್ಲಿ ರಿಕ್ಷಾ ನಿಲ್ಲಿಸಬೇಕಾದರೆ ನಿಲ್ದಾಣದ ಸದಸ್ಯತ್ವಕ್ಕೆ ₹40 ಸಾವಿರದಿಂದ ₹1 ಲಕ್ಷದವರೆಗೆ ಪಾವತಿ ಮಾಡಬೇಕು ಎಂಬ ದೂರುಗಳು ಕೇಳಿ ಬರುತ್ತಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಆಟೊ ನಿಲ್ದಾಣ ಸ್ಥಳ ಸರ್ಕಾರದ ಸ್ವತ್ತಾಗಿದ್ದು ಪ್ರಸ್ತುತ ನಗರಸಭಾ ವ್ಯಾಪ್ತಿಯಲ್ಲಿದೆ. ಈ ರೀತಿ ಅನಗತ್ಯವಾಗಿ ಹಣ ವಸೂಲಾತಿ ಮಾಡುವ ಹಾಗಿಲ್ಲ. ಈ ಬಗ್ಗೆ ನಗರಸಭಾ ಆಯುಕ್ತರು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಗುರುತಿಸಲಾಗಿರುವ ಬ್ಲ್ಯಾಕ್‌ಸ್ಪಾಟ್ ಪ್ರದೇಶಗಳಲ್ಲಿ ವಾಹನಗಳ ಸುರಕ್ಷಿತ ಸಂಚಾರಕ್ಕೆ ಅಗತ್ಯವಿರುವ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಆದ್ಯತೆಯ ಮೇಲೆ ಕೈಗೊಳ್ಳಬೇಕು
-ಕೆ. ವಿದ್ಯಾಕುಮಾರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.