
ಉಡುಪಿ: ನಗರವು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದ್ದರೂ ಸಮರ್ಪಕ ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ವಾಹನ ಸವಾರರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.
ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಜನರು ಎಲ್ಲೆಂದರೆ ವಾಹನಗಳನ್ನು ನಿಲ್ಲಿಸುವುದರಿಂದ ನಗರ ವ್ಯಾಪ್ತಿಯಲ್ಲಿ ವಾಹನ ದಟ್ಟಣೆಯೂ ಉಂಟಾಗುತ್ತಿದೆ.
ನಗರಸಭೆ ಮುಂಭಾಗದ ರಸ್ತೆ, ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಉಳಿದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಕಲ್ಸಂಕದಲ್ಲಿ ಸಿಗ್ನಲ್ ದೀಪ ಅಳವಡಿಸಿದರೂ ಫ್ರೀ ಲೆಫ್ಟ್‌ನಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಗುಂಡಿಬೈಲು ಮೊದಲಾದೆಡೆ ತೆರಳುವವರಿಗೆ ಸಮಸ್ಯೆಯಾಗುತ್ತಿದೆ. ಫ್ರೀ ಲಿಫ್ಟ್ ಸಮೀಪದ ಅಂಗಡಿಗಳ ಮುಂಭಾಗದಲ್ಲಿ ಕೆಲವರು ಕಾರು ಮೊದಲಾದ ವಾಹನಗಳನ್ನು ನಿಲ್ಲಿಸುವುದರಿಂದ ಫ್ರೀ ಲೆಫ್ಟ್‌ನಲ್ಲಿ ತೆರಳಲು ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ.
ವಾಣಿಜ್ಯ ಸಂಸ್ಥೆಗಳು, ಅಂಗಡಿಗಳ ಮುಂಭಾಗದಲ್ಲಿ ಜನರು ವಾಹನ ನಿಲ್ಲಿಸುವುದರಿಂದಲೂ ಸಮಸ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಜನರು.
ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿಯೂ ವಾಹನ ಪಾರ್ಕಿಂಗ್‌ಗೆ ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ದ್ವಿಚಕ್ರ ವಾಹನಗಳನ್ನು ಬಸ್ ನಿಲ್ದಾಣದ ಪ್ರವೇಶ ದ್ವಾರದ ಬಳಿಯಲ್ಲೆ ಜನರು ನಿಲ್ಲಿಸುತ್ತಿದ್ದಾರೆ.
ಸರ್ವಿಸ್ ಬಸ್ ನಿಲ್ದಾಣದ ಬಳಿಯ ಕೆಲವೆಡೆ ವಾಹನಗಳನ್ನು ನಿಲ್ಲಿಸಿದರೆ ವಾಣಿಜ್ಯ ಸಂಸ್ಥೆಗಳ ಭದ್ರತಾ ಸಿಬ್ಬಂದಿ ಬಂದು ಬೆದರಿಸುತ್ತಾರೆ ಎಂದೂ ಸಾರ್ವಜನಿಕರು ದೂರಿದ್ದಾರೆ.
ನಗರಸಭೆಯ ಮುಂಭಾಗದ ರಸ್ತೆಯಲ್ಲೂ ದ್ವಿಚಕ್ರ ವಾಹನ, ಕಾರುಗಳನ್ನು ನಿಲ್ಲಿಸುವುದರಿಂದ ಅಲ್ಲೂ ನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದೆ ಎಂದೂ ಹೇಳುತ್ತಾರೆ.
ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿಯ ವಿಶ್ವೇಶ್ವರಯ್ಯ ಕಟ್ಟಡದ ಜಾಗದಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗುವುದು ಎಂದು ನಗರಸಭೆ ಆಡಳಿತ ಮಂಡಳಿ ಇದ್ದಾಗ ಸಂಬಂಧಪಟ್ಟವರು ಹೇಳುತ್ತಿದ್ದರೂ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ನಗರವಾಸಿಗಳು.
ನಗರದ ಬನ್ನಂಜೆಯಿಂದ ಕಲ್ಸಂಕದ ವರೆಗೂ ರಸ್ತೆ ಬದಿಯಲ್ಲಿ ಕಾರುಗಳು ಸೇರಿದಂತೆ ವಿವಿಧ ವಾಹನಗಳನ್ನು ನಿಲ್ಲಿಸುವುದಕ್ಕೆ ಸಂಬಂಧಪಟ್ಟವರು ಕಡಿವಾಣ ಹಾಕಬೇಕು ಎಂದು ಜನರು ಆಗ್ರಹಿಸಿದ್ದಾರೆ.
‘ಪಾರ್ಕಿಂಗ್‌ಗೆ ಜಾಗ ಪರಿಶೀಲಿಸುತ್ತಿದ್ದೇವೆ’
ವಿಶ್ವೇಶ್ವರಯ್ಯ ವಾಣಿಜ್ಯ ಸಂಕೀರ್ಣವಿದ್ದ ಜಾಗದಲ್ಲಿ ರಸ್ತೆ ಸಣ್ಣದಿದೆ ಮತ್ತುಅಲ್ಲಿ ದೈವಸ್ಥಾನವೂ ಇರುವುದರಿಂದ ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಈ ಕಾರಣಕ್ಕೆ ನಗರದಲ್ಲಿ ಬೇರೆ ಜಾಗ ಪರಿಶೀಲಿಸುತ್ತಿದ್ದೇವೆ ಎಂದು ನಗರಸಭೆ ಪೌರಾಯುಕ್ತ ಮಹಾಂತೇಶ ಹಂಗರಗಿ ತಿಳಿಸಿದರು. ಪಾರ್ಕಿಂಗ್‌ಗೆ ಜಾಗ ಇಡದ 58 ಕಟ್ಟಡಗಳ ಪರಿಶೀಲನೆಯನ್ನು ಹಿಂದೆ ನಗರಸಭೆ ಅಧಿಕಾರಿಗಳು ಎಂಜಿನಿಯರ್‌ಗಳು ನಡೆಸಿದ್ದರು. ಆಗ ಆ ಕಟ್ಟಡಗಳು 2009ಕ್ಕಿಂತ ಮೊದಲು ನಿರ್ಮಾಣಗೊಂಡಿರುವುದಾಗಿ ತಿಳಿದು ಬಂದಿತ್ತು. 2009 ನಂತರ ನಿರ್ಮಿಸುವ ಕಟ್ಟಡಗಳಿಗೆ ಪಾರ್ಕಿಂಗ್ ಕಡ್ಡಾಯವಾಗಿದೆ ಎಂದಿದ್ದಾರೆ. ವಾಹನ ಪಾರ್ಕಿಂಗ್ ವ್ಯವಸ್ಥೆಇಲ್ಲದ ಕಟ್ಟಡಗಳಿಗೆ ಡೋರ್ ನಂಬರ್ ನೀಡಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಈ ಕುರಿತು ಪರಿಶೀಲಿಸಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿದ್ದರೆ ಆ ಕಟ್ಟಡಗಳ ಡೋರ್ ನಂಬರ್ ರದ್ದು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.